ಕೋಲಾರ: ಬೈಕ್ ಹಾಗೂ ಮೊಬೈಲ್ ಕಳ್ಳತನ ಆರೋಪದಲ್ಲಿ ವಿಚಾರಣೆಗೆ ಕರೆ ತಂದಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ (Kolar News) ಜಿಲ್ಲೆಯಲ್ಲಿ ನಡೆದಿದೆ. ಠಾಣೆಯಲ್ಲಿ ಪೊಲೀಸರ ಕಿರುಕುಳದಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಮುನಿರಾಜು ಮೃತ ವ್ಯಕ್ತಿ. ಈತನನ್ನು ಕಳ್ಳತನ ಆರೋಪದಲ್ಲಿ ವಿಚಾರಣೆಗೆಂದು ಆ.31 ರಂದು ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಗೆ ಕರೆ ತರಲಾಗಿತ್ತು. ನಂತರ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಸ್ನೇಹಿತ ಗಂಗಾಧರ್ ಮೂಲಕ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.
ಕಿಡ್ನಿ ವೈಫಲ್ಯದ ಹಿನ್ನೆಲೆಯಲ್ಲಿ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದ ಮುನಿರಾಜು, ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹೀಗಾಗಿ ನಂಗಲಿ ಪೊಲೀಸರ ವಿರುದ್ಧ ಸಂಬಂಧಿಕರು ಲಾಕಪ್ ಡೆತ್ ಆರೋಪ ಮಾಡಿದ್ದಾರೆ. ಹೀಗಾಗಿ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮಾಡುವುದಾಗಿ ಎಸ್‌ಪಿ ನಾರಾಯಣ ತಿಳಿಸಿದ್ದಾರೆ.
ಇದನ್ನೂ ಓದಿ | Fraud Case : ಆಟೋ ಚಾಲಕನ ಕರಾಮತ್ತು; ದುಡ್ಡಿನ ಮೋಸದಾಟ ಬ್ಲಾಗರ್‌ನಿಂದ ಹೊರಬಿತ್ತು!
ಸಾಲಬಾಧೆ ತಾಳಲಾರದೆ ಯುವ ರೈತ ಆತ್ಮಹತ್ಯೆ
ಕಲಬುರಗಿ: ಸಾಲಬಾಧೆ ತಾಳಲಾರದೆ ಯುವ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಫಜಲಪುರ ತಾಲೂಕಿನ ಘೂಳನೂರ ಗ್ರಾಮದಲ್ಲಿ ನಡೆದಿದೆ. ದೇವೇಂದ್ರ ಶ್ರೀಶೈಲ ಸುತಾರ ಆತ್ಮಹತ್ಯೆಗೆ ಶರಣಾದ ಯುವ ರೈತ. ಸ್ಥಳಕ್ಕೆ ಶಾಸಕ ಎಂ.ವೈ. ಪಾಟೀಲ್ ಪುತ್ರ ಅರುಣ್ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು. ದೇವಲಗಾಣಗಾಪುರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೂಸಾ ಕೊಡಲು ತಡ ಮಾಡಿದ್ದಕ್ಕೆ ಬಿತ್ತು ಗೂಸಾ!
ತುಮಕೂರು: ಬೂಸಾ ಕೊಡಲು ತಡಮಾಡಿದ್ದಕ್ಕೆ ಮೂವರು ಶೆಟ್ಟಿಕೆರೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶಿವಕುಮಾರ್ ಮೇಲೆ ಹಲ್ಲೆ (Assault Case) ನಡೆಸಿದ್ದಾರೆ. ತುಮಕೂರು (Tumkur News ) ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆಯಲ್ಲಿ ಈ ಘಟನೆ ನಡೆದಿದೆ. ಇದೀಗ ಗೂಸಾ ಕೊಟ್ಟವರ ಮೇಲೆ ಎಫ್ಐಆರ್ ದಾಖಲಾಗಿದೆ.
ಕ್ಷುಲ್ಲಕ ವಿಚಾರಕ್ಕೆ ಕರ್ತವ್ಯನಿರತ ಶಿವಕುಮಾರ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಕೇಳಿದಾಕ್ಷಣ ಬೂಸಾ ಕೊಡಲಿಲ್ಲ ಎಂದು ಸಿಟ್ಟಿಗೆದ್ದ ನಾಗರಾಜು, ಯೋಗಾನಂದ್, ಅನಿಲ್ ಎಂಬುವವರು ಶಿವಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಬೂಸಾ ಗೋದಾಮಿಗೆ ನುಗ್ಗಿ ದಾಂಧಲೆ ನಡೆಸಿದ ಈ ಮೂವರ ವಿರುದ್ಧ ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಥಳಿಸಿದ ಯುವಕರ ಗುಂಪು
ತುಮಕೂರಿನ ಪಾವಗಡದ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಯುವಕರ ಗುಂಪುವೊಂದು ಮನಬಂದಂತೆ ಹಲ್ಲೆ ನಡೆಸಿದೆ. ಕ್ಯಾಂಟಿನ್ ಮುಂಭಾಗದಲ್ಲಿ ಯುವಕರು ವಾಹನ ನಿಲುಗಡೆ ಮಾಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಕ್ಯಾಂಟೀನ್ ಸಿಬ್ಬಂದಿಯನ್ನು ಹಿಡಿದು ಥಳಿಸಿದ್ದಾರೆ.
ಘಟನೆಯಲ್ಲಿ ನಾಗರಾಜ್ ಮತ್ತು ಮಂಜು ಎಂಬುವರಿಗೆ ರಕ್ತ ಬರುವಂತೆ ಹೊಡೆದಿದ್ದಾರೆ. ಸ್ಥಳೀಯರು ಗಾಯಾಳನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹಲ್ಲೆ ಮಾಡಿದ ಯುವಕರ ವಿರುದ್ಧ ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ