ಕೋಲಾರ: ಆಂದ್ರಪ್ರದೇಶದ ಚಿತ್ತೂರು ಬಳಿ ಹುಣಸೂರು ಅಬಕಾರಿ ಡಿಎಸ್ಪಿ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಭೀಕರ (Road Accident) ಅಪಘಾತಕ್ಕೀಡಾಗಿದೆ. ಡಿಎಸ್ಪಿ ತೀವ್ರ ಗಾಯಗೊಂಡಿದ್ದು, ಅವರು ತಂದೆ ಮೃತಪಟ್ಟಿದ್ದಾರೆ. ತಾಯಿ ಕೂಡ ಗಾಯಗೊಂಡಿದ್ದಾರೆ.
ಚಿತ್ತೂರು ಬಳಿಯ ಪಲಮನೇರು ಮಂಡಲದ ಜಗಮರ್ಲ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಕರ್ನಾಟಕ ರಾಜ್ಯ ಹುಣಸೂರು ಅಬಕಾರಿ ಡಿಎಸ್ಪಿ ವಿಜಯ್ ಕುಮಾರ್ ಮತ್ತವರ ಕುಟುಂಬ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರಿದ್ದ ಕಾರು ಕತ್ತಲಲ್ಲಿ ಕಾಣಿಸದೆ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಡಿಎಸ್ಪಿ ವಿಜಯ್ ಕುಮಾರ್ ಅವರ ತಂದೆ ಗಿರಿಗೌಡ (80) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾರಿನಲ್ಲಿದ್ದ ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಎಸ್ಪಿ ವಿಜಯ್ ಕುಮಾರ್ ಅವರ ಕಣ್ಣುಗಳಿಗೆ ಗಾಯವಾಗಿದ್ದು, ಕೋಲಾರದ ಜಾಲಪ್ಪ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರ ತಾಯಿಯ ತಲೆಗೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿದ್ದ ಅಬಕಾರಿ ಸಿಐ ಲೋಕೇಶ್ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ.
ಡಿಎಸ್ಪಿ ಕುಟುಂಬ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗಿ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Road Accident: ಸುಳ್ಯದಲ್ಲಿ ಕಾರು ಡಿಕ್ಕಿಯಾಗಿ ಮೂವರು ಕಾರ್ಮಿಕರ ದುರ್ಮರಣ