ಕೋಲಾರ: ಪ್ರೀತ್ಸೆ.. ಪ್ರೀತ್ಸೆ ಎಂದು ಪೀಡಿಸಿ ಅಪ್ರಾಪ್ತೆಯ ಕೊಂದಿದ್ದ ಪಾಗಲ್ ಪ್ರೇಮಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿ ಡ್ರಾಮಾ (Self Harming) ಮಾಡಿದ್ದ. ಹೀಗಾಗಿ ಪೊಲೀಸರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕೊಲೆ ಆರೋಪಿ ನಿತಿನ್ ಆಸ್ಪತ್ರೆಯ 2ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕಾಣೆಯಾಗಿದ್ದ 15 ವರ್ಷದ ಬಾಲಕಿ ಬೆಂಗಳೂರು ಗ್ರಾಮಾಂತರದ ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವವಾಗಿ ಸಿಕ್ಕಿದ್ದಳು. ಕೋಲಾರದ ಮಾಲೂರು ತಾಲೂಕಿನ ದೊಮ್ಮಲೂರು ಗ್ರಾಮದ ನಂದಿತಾಳನ್ನು (15) ಬರಗೂರು ಗ್ರಾಮದ ನಿವಾಸಿ ನಿತಿನ್ (23) ಪ್ರೀತಿಸುವಂತೆ ಪೀಡಿಸುತ್ತಿದ್ದ.
ಆದರೆ ನಂದಿತಾ ನಿರಾಕರಿಸಿದ್ದಳು. ಈ ವೇಳೆ ಶಾಲೆ ಮುಗಿಸಿ ಮನೆಗೆ ಬರುವಾಗ ನಂದಿತಾಳನ್ನು ಅಪಹರಿಸಿದ್ದ. ಆಗಲೂ ಆಕೆ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಚಾಕುವಿನಿಂದ ತಿವಿದು ಕೊಲೆಗೈದಿದ್ದ. ಕೊಲೆ ನಂತರ ಆರೋಪಿ ನಿತಿನ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಳ್ಳುವ ಹೈಡ್ರಾಮಾ ಮಾಡಿದ್ದ.
ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ ನಿತಿನ್‌ನನ್ನು ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದರು. ಭಾನುವಾರ ಬೆಳಗ್ಗೆ ಆಸ್ಪತ್ರೆ ಕಾರಿಡಾರ್‌ನಲ್ಲಿ ವಾಕಿಂಗ್ ಮಾಡಲು ಬಂದಾಗ ಎರಡನೇ ಮಹಡಿಯಿಂದ ಹಾರಿ ಮತ್ತೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರವಾಗಿ ಗಾಯಗೊಂಡ ನಿತಿನ್‌ನನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಲಾರದ ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:Road Accident : ಕೂಲಿ ಕಾರ್ಮಿಕರ ಹೊತ್ತೊಯ್ಯುತ್ತಿದ್ದ ಪಿಕಪ್ ವಾಹನ ಪಲ್ಟಿ; ಮಹಿಳೆ ಸಾವು, 20 ಮಂದಿ ಗಂಭೀರ
ಪ್ರಿಯಕರನ ಬಾಡಿಗೆ ರೂಂನಲ್ಲಿ ವಿವಾಹಿತೆಯ ಕತ್ತು ಕೊಯ್ದು ಕೊಲೆ
ಚಿಕ್ಕಬಳ್ಳಾಪುರ: ಬಾಡಿಗೆ ರೂಂನಲ್ಲಿ ವಿವಾಹಿತ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿರುವ (Murder Case) ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkabalapura News) ನಡೆದಿದೆ. ದೀಪಾ ಹತ್ಯೆಯಾದವರು.
ದೀಪಾ ತನ್ನ ಪ್ರಿಯಕರನಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ತಮಿಳುನಾಡು ಮೂಲದ ದಿವಾಕರ್ ಎಂಬಾತ ಹಂತಕ ಎನ್ನಲಾಗಿದೆ. ದಿವಾಕರ್ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. ತರಕಾರಿ ತರುವುದಾಗಿ ಹೇಳಿದ ದೀಪಾ ಈಗ ದಿವಾಕರ್ ಮನೆಯ ಅಡುಗೆ ಕೋಣೆಯಲ್ಲಿ ಕೊಲೆಯಾಗಿದ್ದಾಳೆ. ಹತ್ಯೆಗೆ ಹಣಕಾಸಿನ ವ್ಯವಹಾರವೇ ಕಾರಣ ಎನ್ನಲಾಗಿದೆ. ದೀಪಾಳನ್ನು ಬರ್ಬರವಾಗಿ ಕೊಲೆ ಮಾಡಿ, ನಂತರ ರೂಮಿಗೆ ಬೀಗ ಜಡಿದು ದಿವಾಕರ್ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಕಳೆದ ಬುಧವಾರ ಫೆ.7ರಂದು ಹತ್ಯೆಯಾಗಿದ್ದು, ನಾಲ್ಕು ದಿನಗಳ ನಂತರ ಬೆಳಕಿಗೆ ಬಂದಿದೆ. ರೂಮಿನಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣಕ್ಕೆ ಸ್ಥಳೀಯರು ಅನುಮಾನಗೊಂಡು ಕಿಟಕಿಯಿಂದ ನೋಡಿದ್ದಾರೆ. ಈ ವೇಳೆ ದೀಪಾ ಸತ್ತು ಬಿದ್ದಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದ್ದಾರೆ. ಈ ವೇಳೆ ದೀಪಾಳ ಮೃತದೇಹವು ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಡಿ.ಎಲ್.ನಾಗೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ರೂಮಿನ ಮಾಲೀಕರಿಂದ ಹೆಚ್ಚಿನ ಮಾಹಿತಿ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಇತ್ತ ದೀಪಾಳ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ