ನವ ದೆಹಲಿ: ದೇಶದ ಅತ್ಯಂತ ಸುರಕ್ಷಿತ (Safest City) ಮೆಟ್ರೋ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಮೊದಲಿನ ನಾಲ್ಕು ಸ್ಥಾನಗಳಲ್ಲಿ ಕೋಲ್ಕೊತಾ, ಪುಣೆ, ಹೈದ್ರಾಬಾದ್ ಮತ್ತು ಕಾನ್ಪುರ್ ನಗರಗಳಿವೆ. ಮತ್ತೊಂದೆಡೆ, ದೇಶದ ರಾಜಧಾನಿಯಾಗಿರುವ ದಿಲ್ಲಿಯು ಅತಿ ಹೆಚ್ಚು ಅಪರಾಧ ದರವನ್ನು ದಾಖಲಿಸಿದೆ. 2021ರಲ್ಲಿ ಒಟ್ಟು 18,596 ಪ್ರಕರಣಗಳು ದಿಲ್ಲಿಯಲ್ಲಿ ದಾಖಲಾಗಿವೆ. ಪ್ರತಿ 10 ಲಕ್ಷ ಜನರಿಗೆ ದಾಖಲಾಗಿರುವ ಅಪರಾಧ ಪ್ರಕರಣಗಳನ್ನು ಲೆಕ್ಕಾಚಾರ ಮಾಡಲಾಗಿದೆ.
20 ಲಕ್ಷಕ್ಕೂ ಅಧಿಕ ಮೇಲ್ಪಟ್ಟ ಜನಸಂಖ್ಯೆಯ ನಗರಗಳಲ್ಲಿ ದಾಖಲಾದ ವಿಚಾರಣೆಗೆ ಅರ್ಹವಾದ ಪ್ರಕರಣಗಳನ್ನು ವಿಶ್ಲೇಷಣೆ ಮಾಡಿ, ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ(ಎನ್‌ಸಿಆರ್‌ಬಿ) ಪಟ್ಟಿಯನ್ನು ಬಿಡುಗಡೆ ಮಾಡಿದೆ.
2021ರಲ್ಲಿ ರಾಜಧಾನಿ ದಿಲ್ಲಿಯಲ್ಲಿ ಅತಿ ಹೆಚ್ಚು ಅಪರಾಧ ಪ್ರಕರಣಗಳು ಘಟಿಸಿವೆ. ಪ್ರತಿ 10 ಲಕ್ಷ ಜನರಿಗೆ ಒಟ್ಟು 18596 ಕ್ರೈಮ್ ಕೇಸ್ ದಾಖಲಾಗಿವೆ. ಆದರೆ, ಅತ್ಯಂತ ಸುರಕ್ಷಿತ ನಗರವಾಗಿ ಕೋಲ್ಕೊತಾ ಹೊರಹೊಮ್ಮಿದೆ. ದಕ್ಷಿಣ ಭಾರತದ ನಗರಗಳ ಪೈಕಿ ಹೈದ್ರಾಬಾದ್ ಮೊದಲನೆಯ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಬೆಂಗಳೂರು ಇದೆ. ಕೋಲ್ಕೊತಾ 104.4, ಪುಣೆ 256.8, ಹೈದ್ರಾಬಾಜದ್ 259.9, ಬೆಂಗಳೂರು 427.2 ಮತ್ತು ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 428.4 ಅಪರಾಧ ಪ್ರಕರಣಗಳು ದಾಖಲಾಗಿವೆ.
ಕೋಲ್ಕೊತಾದಲ್ಲಿ 45 ಕೊಲೆ ಪ್ರಕರಣಗಳು ದಾಖಲಾದರೆ, ಹೈದ್ರಾಬಾದ್‌ನಲ್ಲಿ 98, ಬೆಂಗಳೂರಲ್ಲಿ 152, ದಿಲ್ಲಿಯಲ್ಲಿ 454, ಮುಂಬೈನಲ್ಲಿ 162 ಕೊಲೆ ಸಂಭವಿಸಿವೆ. ಕೊಲೆ ಯತ್ನ ಲೆಕ್ಕಾಚಾರ ತೆಗೆದುಕೊಂಡರೆ, 2021ರಲ್ಲಿ ಕೋಲ್ಕೊತಾದಲ್ಲಿ 135 ಕೇಸ್‌ಗಳ ದಾಖಲಾಗಿವೆ. ನಂತರದ ಸ್ಥಾನದಲ್ಲಿ ಹೈದ್ರಾಬಾದ್ (192), ಮುಂಬೈ(349) ಬೆಂಗಳೂರು (371), ದಿಲ್ಲಿ(752) ನಗರಗಳಿವೆ.
ಕೋಲ್ಕೊತಾದಲ್ಲಿ 11 ರೇಪ್ ಪ್ರಕರಣಗಳು ದಾಖಲಾಗಿವೆ. ಹೈದ್ರಾಬಾದ್ 116, ಬೆಂಗಳೂರು 117, ದಿಲ್ಲಿ1,226 ಮತ್ತು ಮುಂಬೈನಲ್ಲಿ 364 ಅತ್ಯಾಚಾರ ಕೇಸ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೋಲ್ಕೊತಾ ಸುರಕ್ಷಿತ ಎನಿಸಿದೆ. ಯಾಕೆಂದರೆ, ಅತಿ ಕಡಿಮೆ ಪ್ರಕರಣಗಳು ಇದೇ ನಗರದಲ್ಲಿ ದಾಖಲಾಗಿವೆ. ಕೋಲ್ಕೊತಾದಲ್ಲಿ 127, ಹೈದ್ರಾಬಾದ್‌ನಲ್ಲಿ 177, ಬೆಂಗಳೂರಲ್ಲಿ 357 ಮತ್ತು ದಿಲ್ಲಿಯಲ್ಲಿ 1023 ಕೇಸ್ ರಿಜಿಸ್ಟರ್ ಆಗಿವೆ.
ಇದನ್ನೂ ಓದಿ | NCRB Report | ಗುರುತು ಮಾಹಿತಿ ಕಳ್ಳತನ: ದೇಶದಲ್ಲೇ ಬೆಂಗಳೂರು ನಗರ ನಂಬರ್ 1