ಕೊಪ್ಪಳ: ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ಐತಿಹಾಸಿಕ ಪಂಪಾಸರೋವರ ಗ್ರಾಮದ ಜಯಲಕ್ಷ್ಮೀ ಮೂರ್ತಿ ಹಾಗೂ ಶ್ರೀಚಕ್ರ ಪುನರ್ ಪ್ರತಿಷ್ಠಾಪನೆಯ ಕಾರ್ಯ ಬುಧವಾರದಿಂದ ಆರಂಭವಾಗಿದೆ. ಸಚಿವ ಬಿ. ಶ್ರೀರಾಮುಲು ಅವರು ಪ್ರಾಚ್ಯವಸ್ತು ಇಲಾಖೆಯ ಅನುಮತಿ ಪಡೆದುಕೊಂಡು ₹2.8 ಕೋಟಿ ವೆಚ್ಚ ಮಾಡಿ ಪಂಪಾಸರೋವರದ ದೇವಸ್ಥಾನಗಳ ಜೀರ್ಣೋದ್ಧಾರ ಕೈಗೊಂಡಿದ್ದಾರೆ.
ಜೀರ್ಣೋದ್ದಾರ ಕಾರ್ಯ ಕೈಗೊಂಡಿದ್ದ ಗುತ್ತಿಗೆದಾರರು ಗರ್ಭಗುಡಿಯಲ್ಲಿನ ಜಯಲಕ್ಷ್ಮೀ ಮೂರ್ತಿಯನ್ನು ಹಾಗೂ ವಿದ್ಯಾರಣ್ಯರು ಪ್ರತಿಷ್ಠಾಪಿಸಿದ್ದ ಶ್ರೀಚಕ್ರವನ್ನು ತೆರವುಗೊಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿತ್ತು.
ತೆರವುಗೊಳಿಸಲಾಗಿದ್ದ ಮೂರ್ತಿಯನ್ನು ಈಗ ಪುನಃ ಪ್ರತಿಷ್ಠಾಪಿಸುವ ಕಾರ್ಯ ಶುರುವಾಗಿದೆ. ಬಳ್ಳಾರಿಯ ಲಕ್ಷ್ಮೀನಾರಾಯಣಾಚಾರ್ಯ ಅವರ ನೇತೃತ್ವದಲ್ಲಿ ಆಂಧ್ರಪ್ರದೇಶ, ತಮಿಳುನಾಡಿನಿಂದ ಆಗಮಿಸಿರುವ ಸುಮಾರು 35 ಜನ ಪುರುಹಿತರಿಂದ ಮೂರ್ತಿ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಇದನ್ನೂ ಓದಿ: ಹಾಡಹಗಲೇ ಪಂಪಾಸರೋವರ ಮೂರ್ತಿ ಸ್ಥಳಾಂತರ: ಗುತ್ತಿಗೆದಾರರಿಂದ ವಿಡಿಯೋ ಬಿಡುಗಡೆ
ಬೆಳಗ್ಗೆ ಗೋಪೂಜೆ, ಯಾಗಶಾಲೆ ಪ್ರವೇಶ, ಮಹಾಸಂಕಲ್ಪ, ಗಣಪತಿ ಪೂಜೆಗಳು ನೆರವೇರಿದ್ದು, ಕಂಕಣಪೂಜಾ, ಅಂಕುರಾರ್ಪಣಾ, ಧ್ವಜಾರೋಹಣ, ಕಲಶಸ್ಥಾಪನಾ, ಜಲಾಧಿವಾಸಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.
ಜೀರ್ಣೋದ್ಧಾರದ ಸಂದರ್ಭದಲ್ಲಿ ಮೂರ್ತಿಯನ್ನು ತೆರವುಗೊಳಿಸುವಾಗ ಯಾವುದೇ ಲೋಪವಾಗಿಲ್ಲ. ಸಣ್ಣಪುಟ್ಟ ಲೋಪವಾಗಿದ್ದರೂ ಆ ದೋಷಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹೋಮಾದಿಹವನಗಳು ಜರುತ್ತಿವೆ. ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು ಗುರವಾರ ಬೆಳಗ್ಗೆ 7.30 ಕ್ಕೆ ಜಯಲಕ್ಷ್ಮೀದೇವಿ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ ಎಂದು ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ.
ಸ್ಥಳೀಯರಿಗೆ ಮಾಹಿತಿಯನ್ನೂ ನೀಡದೆ ತೆರವುಗೊಳಿಸಲಾಗಿದ್ದ ಮೂರ್ತಿಯನ್ನು ಮತ್ತೆ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ಮಾಡುವ ಕಾರ್ಯ ಕೈಗೊಂಡಿರುವುದು ಸ್ಥಳೀಯರ ಸಿಟ್ಟನ್ನು ಕಡಿಮೆ ಮಾಡಿದಂತಾಗಿದೆ.
ಇದನ್ನೂ ಓದಿ: ಜೀರ್ಣೋದ್ಧಾರ ನೆಪದಲ್ಲಿ ದೇವಾಲಯದ ಮೂರ್ತಿ ತೆರವುಗೊಳಿಸಿದ ಗುತ್ತಿಗೆದಾರ