ಕೊಪ್ಪಳ: ಇಲ್ಲಿನ ಗಂಗಾವತಿಯ ಅಂಬೇಡ್ಕರ್ ನಗರದಲ್ಲಿ ಗಣೇಶ ಚತುರ್ಥಿ ದಿನದಂದು (Ambedkar Ganesh) ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನೇ ಹೋಲುವ ವಿಘ್ನ ನಿವಾರಕ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದವರಿಗೆ ಈಗ ವಿಘ್ನ ಎದುರಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಹೋಲುವ ಮೂರ್ತಿ ರಚನೆ ಮಾಡಿದ್ದಕ್ಕೆ ದಲಿತ ಸಮುದಾಯದ ಯುವಕ ಮಂಡಳಿ ಸದಸ್ಯರ ವಿರುದ್ಧ ದಲಿತ ಸಮುದಾಯದ ಮುಖಂಡರಿಂದಲೇ ವಿರೋಧ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಇದಕ್ಕೆ ಸಂಬಂಧಿಸಿ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಹುಲಗಪ್ಪ ಮಾಗಿ ಎಂಬುವವರು ದೂರು ನೀಡಿದ್ದರು. ಈಗ ಶ್ರೀ ವಿನಾಯಕ ಸ್ನೇಹ ವೃಂದದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಶಾಂತಿ, ಕಾನೂನು ಸುವ್ಯವಸ್ಥೆ ಹದಗೆಡಿಸುವ ಉದ್ದೇಶದಿಂದ ಅಂಬೇಡ್ಕರ್ ಮೂರ್ತಿ ಹೋಲುವ ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ದಲಿತ ಸಮುದಾಯವರೇ ಆರೋಪ ಮಾಡಿದ್ದರು. ಅಂಬೇಡ್ಕರ್ ಅವರನ್ನೇ ಹೋಲುವ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಿದರೆ, ಅಂಬೇಡ್ಕರ್ ಅವರನ್ನೇ ವಿಸರ್ಜನೆ ಮಾಡಿದಂತಾಗುತ್ತದೆ. ಹಾಗಾಗಿ, ಮೂರ್ತಿ ತಯಾರಿಸಿದವರು ಹಾಗೂ ಪ್ರತಿಷ್ಠಾಪಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಪೊಲೀಸರಿಗೆ ಒತ್ತಾಯಿಸಿದ್ದರು. ಈಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Ganesh Chaturthi | ಅಂಬೇಡ್ಕರ್‌ರನ್ನೇ ಹೋಲುವ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಭಾರಿ ಆಕ್ಷೇಪ