ಕೊಪ್ಪಳ: ಆ ಕುಟುಂಬದವರು ಮನೆಗೆ ಪುಟ್ಟದೊಂದು ಕೂಸು ಬರುವ ನಿರೀಕ್ಷೆಯಲ್ಲಿದ್ದರು. ಆ ಮಹಿಳೆ 9 ತಿಂಗಳ ಕಾಲ ಮಗುವೊಂದು ಒಡಲಿನಲ್ಲಿ ಜೋಪಾನ ಮಾಡಿದ್ದರು. ಒಡಲಿನಿಂದ ಇನ್ನೇನು ಮಡಲಿಗೆ ಬರುವ ಖುಷಿಯಲ್ಲಿದ್ದ ಅವರಿಗೆ ಬರಸಿಡಿಲು ಬಡಿದಿತ್ತು. ಹೆರಿಗೆಗೆ ದಿನಾಂಕ ಹತ್ತಿರ ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ವೈದ್ಯರ ನಿರ್ಲಕ್ಷ್ಯಕ್ಕೆ ಹುಟ್ಟ ಬೇಕಾದ ಮಗು ತಾಯಿ ಹೊಟ್ಟೆಯಲ್ಲಿ ಮೃತಪಟ್ಟಿರುವ (Medical Negligence) ಆರೋಪವೊಂದು ಕೇಳಿ ಬಂದಿದೆ.
ಲಿಂಗದಳ್ಳಿ ಗ್ರಾಮದ ಹನುಮಂತಿ ಮಾದರ ಎಂಬುವವರು ಹೆರಿಗೆಗಾಗಿ ಕುಷ್ಟಗಿಯ ತಾಲೂಕಾಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ನಾರ್ಮಲ್ ಡೆಲವೆರಿ ಕಷ್ಟ ಸಾಧ್ಯವಾಗಿದ್ದರಿಂದಲೋ ಶಸ್ತ್ರಚಿಕಿತ್ಸೆ ಮಾಡುವುದಾಗಿ ವೈದ್ಯರು ಹೇಳಿದ್ದರು. ಆದರೆ ಸಕಾಲಕ್ಕೆ ಶಸ್ತ್ರಚಿಕಿತ್ಸೆ ಮಾಡದ ಹಿನ್ನೆಲೆಯಲ್ಲಿ ಮಗು ಹೊಟ್ಟೆಯೊಳಗೆ ಮೃತಪಟ್ಟಿದೆ.
ಹೆರಿಗೆ ತಜ್ಞೆ ಡಾ. ಚಂದ್ರಕಲಾ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವೆಂದು ಆರೋಪಿಸಿದ್ದಾರೆ. ಶಸ್ತ್ರಚಿಕಿತ್ಸೆಯನ್ನು ಮಾಡಲು ತಡಮಾಡಿದ್ದೆ ಮಗು ಸಾವಿಗೆ ಕಾರಣವೆಂದು ಆರೋಪಿಸಿದ್ದಾರೆ. ಹೀಗಾಗಿ ಕುಷ್ಟಗಿ ತಾಲೂಕಾ ಆಸ್ಪತ್ರೆಯ ಮುಂದೆ ಕುಟುಂಬಸ್ಥರು ಹಾಗೂ ಲಿಂಗದಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಇತ್ತ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗ್ರಾಮಸ್ಥರ ಮನವೊಲಿಸಲು ಮುಂದಾದರು. ಆದರೆ ಇದ್ಯಾವುದಕ್ಕೂ ಪಟ್ಟು ಬಿಡದೆ ಮಗುವನ್ನು ಕೊಂದ ವೈದ್ಯೆ ಚಂದ್ರಕಲಾ ವಿರುದ್ಧ ಧಿಕ್ಕಾರ ಕೂಗಿದರು. ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ