ಕೊಪ್ಪಳ: ರಾಜ್ಯದಲ್ಲಿ ಅಲ್ಲಲ್ಲಿ ನಡೆಯುತ್ತಿರುವ ಧರ್ಮ ದಂಗಲ್ ಮಧ್ಯೆ ಗಂಗಾವತಿಯ ಶ್ರೀ ದುರ್ಗಾದೇವಿ ಜಾತ್ರೆ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಇಲ್ಲಿನ ಮುಸ್ಲಿಮರು ದುರ್ಗಾದೇವಿಗೆ ಬೃಹತ್ ಹಾರ ಅರ್ಪಿಸಿ ಜಾತ್ರೆಯಲ್ಲಿ ಭಾಗಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಶ್ರೀ ದುರ್ಗಾದೇವಿ ಜಾತ್ರೆಯ ಸಂದರ್ಭದಲ್ಲಿ ಇಲ್ಲಿನ ಮುಸ್ಲಿಂ ಬಾಂಧವರು ಬೃಹತ್ ಹೂವಿನ ಹಾರ ಸಮರ್ಪಿಸಿದರು. ಗಂಗಾವತಿ ನಗರದಲ್ಲಿನ ಕರ್ನೂಲ ಸಾಹೇಬ ದರ್ಗಾದಿಂದ ದುರ್ಗಾದೇವಿ ದೇವಸ್ಥಾನದವರೆಗೂ ನೂರಾರು ಮುಸ್ಲಿಂ ಬಾಂಧವರು ಹೂವಿನ ಹಾರವನ್ನು ಮೆರವಣಿಗೆಯಲ್ಲಿ ತಂದು, ದೇವಿಯ ಕಟೌಟ್‌ಗೆ ಸಮರ್ಪಿಸಿದರು. ದೇವಸ್ಥಾನಕ್ಕೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದರು. ಕರ್ನೂಲ ಸಾಹೇಬ ದರ್ಗಾದ ಮೌಲ್ವಿ ದೇವಿಗೆ ನಮನ ಸಲ್ಲಿಸಿದರು.
ಐದು ವರ್ಷಕ್ಕೊಮ್ಮೆ ನಡೆಯುವ ದುರ್ಗಾದೇವಿ ಜಾತ್ರೆಯಲ್ಲಿ ಸಂಪ್ರದಾಯದಂತೆ ದರ್ಗಾಗಳಿಂದ ಹೂವು ಹಾರ, ಕಾಯಿ ಕಳುಹಿಸುತ್ತಾರೆ. ಹಾಗೆಯೇ ದರ್ಗಾಗಳಲ್ಲಿ ನಡೆಯುವ ಉರೂಸುಗಳ ಸಂದರ್ಭದಲ್ಲಿ ದೇವಸ್ಥಾನದಿಂದ ಚಾದರ ಕಳುಹಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಈ ಮೂಲಕ ನಾವೆಲ್ಲ ಒಂದಾಗಿರೋಣ ಎಂಬ ಸಂದೇಶವನ್ನು ಗಂಗಾವತಿಯ ಜನತೆ ಸಾರಿದೆ.
ಇದನ್ನೂ ಓದಿ | Sagara News | ಮಾರಿಕಾಂಬಾ ದೇವಸ್ಥಾನದ ಜಾತ್ರೆ: ಹೈಕೋರ್ಟ್ ಆದೇಶ ಜಾರಿಗೊಳಿಸಲು ಒತ್ತಾಯಿಸಿ ಮನವಿ