ಕೊಪ್ಪಳ: ವಾಯುಭಾರ ಕುಸಿತದ ಪರಿಣಾಮದಿಂದ ಜಿಲ್ಲೆಯಲ್ಲಿ ಮಂಗಳವಾರ ಸಂಜೆಯಿಂದ ಮಳೆಯಾಗುತ್ತಿದ್ದು, ಬಿರುಗಾಳಿ ಸಹಿತ ಮಳೆಗೆ ತೋಟಗಾರಿಕಾ ಬೆಳೆಗಳು ನೆಲಕಚ್ಚಿವೆ. ಇಷ್ಟು ದಿನ ಮಳೆಯಾಗುತ್ತಿಲ್ಲ ಎಂದುಕೊಳ್ಳುತ್ತಿದ್ದ ರೈತರಿಗೆ ಸುರಿದ ಬಿರುಗಾಳಿ ಸಹಿತ ಮಳೆ ಯಾಕಾದರೂ ಬಂತೆಂದು ಚಿಂತಿಸುವಂತಾಗಿದೆ.
ಕೊಪ್ಪಳ ತಾಲೂಕಿನ ಹನುಮನಹಳ್ಳಿ, ಭೀಮನೂರು, ಕುಟುಗನಹಳ್ಳಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಬೆಳೆಹಾನಿಗೊಳಗಾಗಿದೆ. ಮಾವು, ಪಪ್ಪಾಯ ಸೇರಿ ವಿವಿಧ ತೋಟಗಾರಿಕೆ ಬೆಳೆಗಳು ನೆಲಕಚ್ಚಿದ್ದು, ವರ್ಷಾನುಗಟ್ಟಲೆ ಪೋಷಿಸಿದ್ದ ಮರಗಳು ಧರೆಗುರುಳಿವೆ. ಈ ವರ್ಷ ಆಫ್ ಸೀಸನ್ ಇದ್ದ ಪರಿಣಾಮ ಅಷ್ಟೋ ಇಷ್ಟೋ ಫಲಸು ಬಂದಿದ್ದ ಮಾವಿನ ಫಸಲು ನೆಲಕಚ್ಚಿವೆ.
ಇದನ್ನೂ ಓದಿ | ಕೇವಲ ಮೋದಿ ನಾಯಕ್ವದಲ್ಲಿ ನಾವು ಚುನಾವಣೆಯಲ್ಲಿ ಗೆಲ್ತೀವಿ ಅನ್ನೋದು ಮೂರ್ಖತನ: ಸಂಸದ ಸಂಗಣ್ಣ ಕರಡಿ
ಈ ಕುರಿತು ಮಾತನಾಡಿದ ಹನುಮನಹಳ್ಳಿಯ ರೈತ ಹುಚ್ಚಪ್ಪ, ಮಂಗಳವಾರ ಸಂಜೆ ಸುರಿದ ಮಳೆಗೆ ಐದಾರು ಕ್ವಿಂಟಾಲ್ ಮಾವು ನೆಲಕ್ಕುರುಳಿದೆ. ಇಳುವರಿ ಕಳೆದ ವರ್ಷದ ಹೋಲಿಕೆಯಲ್ಲಿ ಕಡಿಮೆ ಇತ್ತು. ಅದರಲ್ಲೂ ಈ ಮಟ್ಟಿಗಿನ ಮಳೆಯಿಂದಾಗಿ ಇದ್ದ ಬೆಳೆಯೂ ಕೈಗೆ ಸಿಗದಂತೆ ಆಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಕುಟುಗನಹಳ್ಳಿಯ ಚನ್ನಕುಮಾರ್ ಎಂಬುವವರ 12 ಎಕರೆ ಪ್ರದೇಶದಲ್ಲಿನ ಮಾವಿನ ಮರಗಳು ಹನುಮನಹಳ್ಳಿಯ ಹುಚ್ಚಪ್ಪ ಎಂಬ ರೈತನ ಮಾವಿನ ಫಲಸು ಹಾಗು ಬಸವರಾಜ ಕರಡಿ ಎಂಬುವವರ ಹತ್ತಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿನ ಪಪ್ಪಾಯ ಬೆಳೆ ಹಾನಿಗೊಳಗಾಗಿವೆ. ಇದಷ್ಟೆ ಅಲ್ಲದೆ ಜಿಲ್ಲೆಯ ಅನೇಕ ಭಾಗಗಳಲ್ಲಿ ರೈತರ ತೋಟಗಾರಿಕಾ ಬೆಳೆಗಳು ಬಿರುಗಾಳಿ ಸಹಿತ ಮಳೆಗೆ ಹಾನಿಗೊಳಗಾಗಿದ್ದು ರೈತರ ಕಣ್ಣೀರು ಇರಿಸುವಂತೆ ಮಾಡಿದೆ.
ಗುಂಡಿಗೆ ಬಿದ್ದು ಬಾಲಕಿ ಸಾವು
ಸುರಿಯುತ್ತಿರುವ ಮಳೆಯಿಂದಾಗಿ ನೀರು ತುಂಬಿಕೊಂಡಿದ್ದ ಗುಂಡಿಯಲ್ಲಿ ಬಿದ್ದು ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿರುವ ಕೆ.ಎಸ್. ಆಸ್ಪತ್ರೆಯ ಬಳಿ ಬಾಲಕಿ ಮೃತಪಟ್ಟಿದ್ದಾಳೆ. ಶ್ರೀದೇವಿ (15) ಮೃತ ಬಾಲಕಿ. ಆಸ್ಪತ್ರೆಯ ಬಳಿ ಕಾಮಗಾರಿಯೊಂದಕ್ಕೆ ಗುಂಡಿಯನ್ನು ತೆಗೆಯಲಾಗಿತ್ತು. ಮಳೆಯಾದ ಕಾರಣ ಗುಂಡಿ ತುಂಬಿಕೊಂಡಿದೆ. ಮಂಗಳವಾರ ಸಂಜೆ ಬಾಲಕಿ ಗುಂಡಿಗೆ ಬಿದ್ದಿದ್ದಾಳೆ. ಪೋಷಕರು ಹುಡುಕಾಟ ನಡೆಸಿದರೂ ಬಾಲಕಿ ಸಿಗದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಿಸಿದ್ದರು. ಬುಧವಾರ ಗುಂಡಿಯಲ್ಲಿ ಬಾಲಕಿ ಶ್ರೀದೇವಿ ಮೃತದೇಹ ಪತ್ತೆಯಾಗಿದೆ. ತೇಲುತ್ತಿರುವ ಮೃತದೇಹದ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಭಾರಿ ಗಾಳಿ ಮಳೆಗೆ ಮನೆಯ ಚಾವಣಿ ಮಾಯ!