Site icon Vistara News

ಎಲೆಕ್ಷನ್‌ ಹವಾ | ಯಲಬುರ್ಗಾ | ರಾಯಲ್‌ ವರ್ಸಸ್‌ ಸಾವ್ಕಾರ್‌ ಸಮರದಲ್ಲಿ ಮೂರನೆಯವರ ಪ್ರವೇಶ ಆಗುವುದೇ?

Election hawa political scenario in yalburga constituency of koppal district

ಮೌನೇಶ್‌ ಬಡಿಗೇರ್‌, ಕೊಪ್ಪಳ
ಕೊಪ್ಪಳ ಜಿಲ್ಲೆಯ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಇರುವ ಯಲಬುರ್ಗಾ ನೂತನ ಕುಕನೂರು ತಾಲೂಕನ್ನು ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿದೆ. ಮಳೆಯಾಧಾರಿತ ಕೃಷಿ ಭೂಮಿ ಅತಿಹೆಚ್ಚು. ದೇವಾಲಯಗಳ ಚಕ್ರವರ್ತಿ ಇಟಗಿಯ ಮಹಾದೇವ ದೇವಾಲಯ ಹಾಗೂ ಕುಕನೂರಿನಲ್ಲಿರುವ ಮಹಾಮಾಯಾ ದೇವಾಲಯ, ಐತಿಹಾಸಿಕ ಕಲ್ಲೂರಿನ ಕಲ್ಲಿನಾಥೇಶ್ವರ ದೇಗುಲಗಳು ಯಲಬುರ್ಗಾ ಕ್ಷೇತ್ರದಲ್ಲಿವೆ. ಲಿಂಗಾಯತ ಗಾಣಿಗ, ಪಂಚಮಸಾಲಿ ಸಮುದಾಯದ ಹೆಚ್ಚು ಮತದಾರರಿರುವ ಕ್ಷೇತ್ರವಿದು. ಆದರೆ ಕುರುಬ ಸಮುದಾಯದ ಮತಗಳೆ ಗೆಲುವಿನ ನಿರ್ಣಾಯಕ ಪಾತ್ರವಹಿಸುತ್ತವೆ. ಇಲ್ಲಿ ಈವರೆಗೂ ಗೆಲುವು ಕಂಡವರು ಲಿಂಗಾಯತ ಸಮುದಾಯದವರೇ ಆಗಿದ್ದಾರೆ.

ರಾಯಲ್‍ರೆಡ್ಡಿ ಎಂದು ಕರೆಯಿಸಿಕೊಳ್ಳುವ ಕಾಂಗ್ರೆಸ್ ನಾಯಕ ಬಸವರಾಜ ರಾಯರೆಡ್ಡಿ ಅವರು ಸ್ಪರ್ಧಿಸುವ ಕ್ಷೇತ್ರ. 1985 ರಿಂದ ನಡೆದ ಚುನಾವಣೆಗಳಲ್ಲಿ ಒಟ್ಟು ಐದು ಬಾರಿ ಗೆಲುವು ದಾಖಲಿಸಿದ ಕೀರ್ತಿ‍ ಬಸವರಾಜ ರಾಯರಡ್ಡಿ ಅವರದ್ದು. ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿ ಒಮ್ಮೆಲೆ ಮೂರು ಖಾತೆಗಳನ್ನು ಪಡೆದುಕೊಂಡ ಸಚಿವರಾಗಿರುವ ಬಿಜೆಪಿಯ ಹಾಲಪ್ಪ ಅವರದ್ದೂ ಅದೃಷ್ಠ. ಮಾಜಿ ಸಚಿವ ಬಸವರಾಜ ರಾಯರಡ್ಡಿ ಹಾಗೂ ಪ್ರಸ್ತುತ ಸಚಿವರಾಗಿರುವ ಹಾಲಪ್ಪ ಆಚಾರ್ ಈ ಇಬ್ಬರು ಸಹ ಲಿಂಗಾಯತ ರಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಮುಂದಿನ ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ ಬರುವ ಚುನಾವಣೆಯಲ್ಲಿ ಈ ಇಬ್ಬರು ಲಿಂಗಾಯತ ರಡ್ಡಿಗಳ ನಡುವೆ ಕದನ ಕುತೂಹಲಕ್ಕೆ ಯಲಬುರ್ಗಾ ವಿಧಾನಸಭಾ ಕ್ಷೇತ್ರ  ಸಾಕ್ಷಿಯಾಗಲಿದೆ.

ರಾಯಲ್ ರಡ್ಡಿ ವರ್ಸಸ್ ಹಾಲಪ್ಪ ಸಾವ್ಕಾರ್
ಅತಿ ಸಣ್ಣ ವಯಸ್ಸಿನಲ್ಲಿಯೇ ಬಸವರಾಜ ರಾಯರಡ್ಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದವರು. ವಿಶೇಷವಾಗಿ ರಸ್ತೆ, ಶಾಲೆಗಳು, ವಸತಿ ಶಾಲೆಗಳು, ಕಾಲೇಜು, ವಸತಿ ಕಾಲೇಜುಗಳು ಯಲಬುರ್ಗಾ ಕ್ಷೇತ್ರದಲ್ಲಿ ಅತಿ ಹೆಚ್ಚು ಇವೆ. ಪ್ರಸ್ತುತ ಯಲಬುರ್ಗಾ ಶಾಸಕರಾಗಿರುವ ಹಾಲಪ್ಪ ಆಚಾರ್ ಶಾಸಕರಾದ ಮೊದಲ ಬಾರಿಗೆ ಮೂರು ಖಾತೆಗಳ ಸಚಿವರಾಗುವ ಮೂಲಕ ರಾಯರಡ್ಡಿ ಅವರಿಗೆ ಹೊಟ್ಟೆ ಉರಿಯುವಂತೆ ಮಾಡಿದ್ದಾರೆ.

ಈ ಮೊದಲು ರಾಯರಡ್ಡಿ ಮತ್ತು ಹಾಲಪ್ಪ ಆಚಾರ್ ಕಾಂಗ್ರೆಸ್‌ನಲ್ಲಿದ್ದರು. ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ಹಾಲಪ್ಪ ಆಚಾರ್‌ ಎಂಎಲ್‍ಸಿಯಾಗಿ, ನಂತರ 2018ರ ಚುನಾವಣೆಯಲ್ಲಿ ವಿಧಾನಸಭೆ ಪ್ರವೇಶಿಸಿದರು. 2004ರಲ್ಲಿ ಬಿಜೆಪಿಯ ಈಶಣ್ಣ ಗುಳಗಣ್ಣವರನ್ನು ರಾಯರಡ್ಡಿ ಸೋಲಿಸಿದರು. ಆದರೆ ನಂತರ 2008ರ ಚುನಾವಣೆಯಲ್ಲಿ ಕ್ಷೇತ್ರದ ಜನರು ಈಶಣ್ಣ ಗುಳಗಣ್ಣವರ ಅವರಿಗೆ ಅನುಕಂಪ ತೋರಿಸುವ ಮೂಲಕ ಗೆಲ್ಲಿಸಿದರು. ಈ ಮೂಲಕ ರಾಯರಡ್ಡಿಗೆ ಸೋಲಿನ ರುಚಿ ತೋರಿಸಿದರು. ಮತ್ತೆ 2013ರಲ್ಲಿ ಹಾಲಪ್ಪ ಮತ್ತು ಬಸವರಾಜ ರಾಯರಡ್ಡಿ ಚುನಾವಣಾ ಅಖಾಡದಲ್ಲಿ ಮುಖಾಮುಖಿಯಾದರು. ಈ ಚುನಾವಣೆಯಲ್ಲಿ ರಾಯರಡ್ಡಿ ಗೆದ್ದು ಬೀಗಿ 2018ರ ಚುನಾವಣೆಯಲ್ಲಿ ಸೋಲನ್ನುಂಡರು. ಹೀಗಾಗಿ ಯಲಬುರ್ಗಾ ರಾಜಕಾರಣದಲ್ಲಿ ಸದ್ಯದ ಟ್ರೆಂಡ್ ಪ್ರಕಾರ ಹಾಲಪ್ಪ ಆಚಾರ್ ಹಾಗೂ ಬಸವರಾಜ ರಾಯರೆಡ್ಡಿ ನಡುವೆ ಹಣಾಹಣಿ ಇದೆ. ಯಲಬುರ್ಗಾ ರಾಜಕಾರಣದಲ್ಲಿ ಕೃಷ್ಣಾ ಬಿ ಸ್ಕೀಂ ಹೆಸರು ಹೇಳಿಕೊಂಡು ಅನೇಕರು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಈವರೆಗೂ ನೀರಾವರಿ ಸಂಪೂರ್ಣಗೊಂಡಿಲ್ಲ.

ಈ ಹಿಂದೆ ಮಾಡಿರುವ ಅಭಿವೃದ್ಧಿ ಕಾರ್ಯಗಳು ತಮ್ಮ ಕೈ ಹಿಡಿಯಬಹುದು ಎಂದು ರಾಯರಡ್ಡಿ ನಿರೀಕ್ಷಿಸಿದ್ದಾರೆ. ಹಾಲಪ್ಪ ಆಚಾರ್ ತಮ್ಮ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿಯನ್ನು ಯಲಬುರ್ಗಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಸುವ ಮಾತುಗಳು ಕೇಳಿಬರುತ್ತಿವೆ. ಲಕ್ಷ್ಮಣ ಸವದಿ ಗಾಣಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಯಲಬುರ್ಗಾ ಕ್ಷೇತ್ರದಲ್ಲಿ ಗಾಣಿಗ ಸಮುದಾಯದ ಮತಗಳು ಅಧಿಕವಾಗಿವೆ. ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ಪತ್ನಿ ವೀಣಾ ಕಾಶಪ್ಪನವರ್‌ ಹೆಸರು 2018ರಲ್ಲೇ ಕೇಳಿಬಂದಿತ್ತು. ಈ ಬಾರಿಯೂ ಹೆಸರಿದೆ. ಹೀಗಾಗಿ ಹೊಸ ಮುಖವೇನಾದರೂ ಯಲಬುರ್ಗಾ ಕ್ಷೇತ್ರದಲ್ಲಿ ಕಾಣಿಸಿಕೊಂಡರೆ ಸ್ಪರ್ಧಾಕಣದ ಚಿತ್ರಣ ಬದಲಾಗಲಿದೆ.

2023ರ ಸಂಭಾವ್ಯರು

  1. ಹಾಲಪ್ಪ ಆಚಾರ್, ನವೀನ ಗುಳಗಣ್ಣವರ, ಚಿದಾನಂದ ಸವದಿ (ಬಿಜೆಪಿ)
  2. ಬಸವರಾಜ ರಾಯರಡ್ಡಿ, ವೀಣಾ ಕಾಶಪ್ಪನವರ್ (ಕಾಂಗ್ರೆಸ್)

ಚುನಾವಣಾ ಫಲಿತಾಂಶ ಇತಿಹಾಸ

ಮತದಾರರ ವಿವರ

ಇದನ್ನೂ ಓದಿ | ಎಲೆಕ್ಷನ್‌ ಹವಾ | ಕುಷ್ಟಗಿ | ಎರಡನೇ ಬಾರಿ ಗೆಲ್ಲಿಸದ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆ ಪೈಪೋಟಿ

Exit mobile version