ಕೊಪ್ಪಳ: ಸಾಯುವ ಮುನ್ನಾದಿನ ಸ್ನೇಹಿತನಿಗೆ ಫ್ರೆಂಡ್‌ಶಿಪ್ ಬ್ಯಾಂಡ್ ಕಟ್ಟಿ ಆತನ ಆಸೆಯನ್ನು ಈಡೇರಿಸಿದ ಮನಕಲುಕುವ ಘಟನೆ ನಡೆದಿದೆ. ಇಲ್ಲಿನ ಕಾರಟಗಿ ಪಟ್ಟಣದಲ್ಲಿರುವ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಸುಹಾಸ್ ಎಲ್ಲ ಮಕ್ಕಳಂತೆ ಆಟ-ಪಾಠವೆಂದು ಇದ್ದವನು. ಆದರೆ ದುರದೃಷ್ಟ ಎಂಬಂತೆ ಬಾಲ್ಯದಲ್ಲೇ ಕಿಡ್ನಿ ಸಮಸ್ಯೆಯಿಂದ ಬಳಲುವಂತಾಯಿತು. ಕಳೆದ ಒಂದು ತಿಂಗಳಿಂದ ಕಿಡ್ನಿ ಸಮಸ್ಯೆಯು ತೀವ್ರ ಉಲ್ಬಣಸಿ ಶಾಲೆಯತ್ತ ಆಗಮಿಸಲು ಸಾಧ್ಯವಾಗಲೇ ಇಲ್ಲ.
ಪ್ರಾಣ ಹಿಂಡುವ ನೋವಿನಲ್ಲೂ ಸುಹಾಸ್‌ಗೆ ಇದ್ದಿದ್ದು ಒಂದೇ ಆಸೆ. ತನಗೆ ಪಾಠ ಮಾಡುತ್ತಿದ್ದ ಶಿಕ್ಷಕರನ್ನು, ಜತೆಗಿದ್ದ ಸ್ನೇಹಿತರನ್ನು ನೋಡುವ ಆಸೆ. ಮಗನ ಆಸೆಯನ್ನು ಈಡೇರಿಸುವ ಸಲುವಾಗಿ ತೀವ್ರ ಅನಾರೋಗ್ಯದ ನಡುವೆಯೂ ಸುಹಾಸ್ ಪೋಷಕರು ಶನಿವಾರ (ಜುಲೈ 30) ಶಾಲೆಗೆ ಕರೆದುಕೊಂಡು ಬಂದಿದ್ದರು.
ಈ ವೇಳೆ ಶಾಲಾ ಆವರಣದಲ್ಲಿಯೇ ಕಾರನ್ನು ನಿಲ್ಲಿಸಲಾಯಿತು. ಕಾರಿನಲ್ಲಿಯೇ ಮಲಗಿದ್ದ ಸುಹಾಸ್ ಪರಿಸ್ಥಿತಿ ಕಂಡು ಸ್ನೇಹಿತರೆಲ್ಲ ಮರುಗಿದರು. ಓದಿನಲ್ಲಿ ಟಾಪರ್ ಆಗಿದ್ದ, ಶಾಲೆಯಲ್ಲಿ ಎಲ್ಲರೊಂದಿಗೂ ಅನ್ಯೋನ್ಯವಾಗಿದ್ದ ಸುಹಾಸ್‌ನನ್ನು ಈ ಸ್ಥಿತಿಯಲ್ಲಿ ಕಂಡು ಕಣ್ಣೀರು ಹಾಕಿದರು. ಅದೇ ದಿನ ಫ್ರೆಂಡ್‌ಶಿಪ್ ಡೇ ಇದ್ದ ಕಾರಣ ಕಣ್ಣೀರಿಡುತ್ತಲೇ ಸುಹಾಸ್ ಕೈಗೆ ಬ್ಯಾಂಡ್ ಕಟ್ಟಿದರು.
ಮಾರನೆಯ ದಿನವೇ ಇಹಲೋಕ ತ್ಯಾಗ
ಸ್ನೇಹಿತರನ್ನು, ಶಿಕ್ಷಕರನ್ನು ನೋಡಬೇಕು, ಅವರ ಕೈಯಿಂದ ಫ್ರೆಂಡ್‌ಶಿಪ್ ಬ್ಯಾಂಡ್ ಕಟ್ಟಿಸಿಕೊಳ್ಳಲೇ ಕಾಯುತ್ತಿದ್ದ ಎನ್ನುವಂತೆ ಸುಹಾಸ್ ಭಾನುವಾರ (ಜು.31) ಬೆಳಗ್ಗೆ ಎಲ್ಲರನ್ನೂ ಅಗಲಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಶಾಲೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಪೋಷಕರ ಆಕ್ರಂದನ ಒಂದು ಕಡೆಯಾದರೆ ಸ್ನೇಹಿತನನ್ನು ಕಳೆದುಕೊಂಡ ದುಃಖದಲ್ಲಿ ಮಕ್ಕಳಿದ್ದಾರೆ.
ಇದನ್ನೂ ಓದಿ | ಪುಟಿನ್ ಪ್ರೇಯಸಿಯ ಮೇಲೆ ಮುಗಿಬಿದ್ದ ಯುರೋಪ್! ಯಾರೀಕೆ ಕಬಯೇವಾ?