ಕೊಪ್ಪಳ: ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಪ್ರಸಿದ್ಧಿಯಾಗಿರುವ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಬುಧವಾರ ಭಾವುಕರಾದರು. ಗವಿಮಠದ ಲಿಂಗೈಕ್ಯ ಶ್ರೀ ಮರಿಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೆ ಹಾಗೂ ಐದು ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯದ ನೂತನ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡುವಾಗ ಭಾವುಕರಾದರು.
ನಾವು ಬಡತನದಿಂದ ಬಂದಿದ್ದೇವೆ. ಲಿಂಗೈಕ್ಯ ಶ್ರೀ ಮರಿಶಾಂತವೀರ ಮಹಾಶಿವಯೋಗಿಗಳು ನನಗೆ ಅನ್ನ, ಆಶ್ರಯ, ವಿದ್ಯೆ ಕೊಟ್ಟಿದ್ದಾರೆ. ನನ್ನಂತೆ ನಾಡಿನಲ್ಲಿ ಅನೇಕ ಮಕ್ಕಳು ಬಡವರಿದ್ದಾರೆ ಎಂದ ಶ್ರೀಗಳು, ಈ ಭಾಗದ ಬಡ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಪರಿಯನ್ನು ನೆನೆಸಿಕೊಂಡು ಕಣ್ಣೀರು ಹಾಕಿದರು.
ಅವರಿಗೆ ವಿದ್ಯೆ, ಅನ್ನ ನೀಡುವುದೇ ಪೂಜೆ ಎಂದು ಗುರುಗಳು ಹೇಳಿದ್ದರು. 160 ವಿದ್ಯಾರ್ಥಿಗಳಿಂದ ಆರಂಭವಾದ ಈ ವಸತಿ, ಪ್ರಸಾದ ನಿಲಯ ಇಂದು 5,000 ಮಕ್ಕಳವರೆಗೆ ಬಂದಿದೆ. ಯಾವ ವಿದ್ಯಾರ್ಥಿಗೂ ತೊಂದರೆಯಾಗಬಾರದು. ನನ್ನ ಜೋಳಿಗೆಗೆ ಗವಿಸಿದ್ದ ಶಕ್ತಿ ಕೊಡಲಿ ಎಂದು ಶ್ರೀಗಳು ಆಶಿಸಿದರು.
ಇದನ್ನು ಓದಿ: ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ ಗವಿಸಿದ್ದೇಶ್ವರ ಸ್ವಾಮಿಗಳು