ಕೊಪ್ಪಳ: ತಾಲೂಕಿನ ಚಿಕ್ಕಬಗನಾಳ ಗ್ರಾಮದಲ್ಲಿ ನೊಣಗಳ ಕಾಟ ಮಿತಿ ಮೀರಿದ್ದು, ಗ್ರಾಮಸ್ಥರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಗ್ರಾಮಕ್ಕೆ ಹೊಂದಿಕೊಂಡಿರುವ ಕೋಳಿ ಫಾರ್ಮ್ ನಿಂದಾಗಿ ನೊಣಗಳು ಉತ್ಪತ್ತಿಯಾಗುತ್ತಿದ್ದು, ನೆಮ್ಮದಿಯಿಂದ ಊಟ-ತಿಂಡಿ ಮಾಡಲು ಬಿಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಮನೆಯಲ್ಲಿರುವ ಪ್ಲಾಸ್ಟಿಕ್ ವಸ್ತುಗಳಿಂದ ಹಿಡಿದು ಎಲ್ಲ ವಸ್ತುಗಳ ಮೇಲೆಯೂ ಈ ನೊಣಗಳ ಹಿಂಡು ಕುಳಿತುಕೊಳ್ಳುತ್ತಿವೆ. ಇವುಗಳ ಹಾವಳಿಯಿಂದ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.
ಈ ಗ್ರಾಮಕ್ಕೆ ಹೊಂದಿಕೊಂಡಂತೆ ಭಾಸ್ಕರರಾವ್ ಎಂಬುವವರ ಕೋಳಿ ಫಾರ್ಮ್ ಇದೆ. ಇಲ್ಲಿಯ ತ್ಯಾಜ್ಯದಿಂದ ಹೊರಬರುವ ನೊಣಗಳು ಚಿಕ್ಕಬಗನಾಳ ಗ್ರಾಮಸ್ಥರಿಗೆ ಎಲ್ಲಿಲ್ಲದ ಸಮಸ್ಯೆಯನ್ನು ತಂದೊಡ್ಡಿವೆ. ಗ್ರಾಮಸ್ಥರು ನಿತ್ಯ ಊಟ ಮಾಡಬೇಕಾದರೂ ಪ್ರಯಾಸಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ʼʼಊಟ-ತಿಂಡಿಯ ತಟ್ಟೆಯ ಮೇಲೆ ಬಂದು ಕೂರುತ್ತಿವೆ. ಅಡುಗೆ ತಾಟಿನಲ್ಲಿ ನೊಣಗಳು ಬೀಳುತ್ತಿವೆʼʼ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ. ಮನೆಯಲ್ಲಿ ನೆಮ್ಮದಿಯಾಗಿ ಕೂರಲು, ಮಲಗಲೂ ಇವು ಬಿಡುತ್ತಿಲ್ಲ ಎಂದು ಅವರುಗಳು ಹೇಳಿದ್ದಾರೆ.
ನೊಣಗಳು ಸೃಷ್ಟಿಸುತ್ತಿರುವ ಸಮಸ್ಯೆ ಒಂದೆರಡಲ್ಲ. ಆಹಾರದ ಮೇಲೆ ಇವು ಬಂದು ಕೂರುತ್ತಿರುವುದರಿಂದ ಇದನ್ನು ಸೇವಿಸಿಸುವವರು ವಾಂತಿ, ಬೇದಿ, ಜ್ವರ ಹೀಗೆ ಒಂದಲ್ಲಾ ಒಂದು ರೀತಿಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಒಟ್ಟಾರೆ ನೊಣಗಳ ಕಾಟದಿಂದ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಈ ಬಗ್ಗೆ ಅನೇಕ ಬಾರಿ ಗ್ರಾಮಸ್ಥರು ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಕೋಳಿ ಫಾರಂ ಬಂದ್ ಮಾಡುವ ಮೂಲಕ ನೊಣಗಳಿಂದ ನಮಗೆ ಮುಕ್ತಿ ನೀಡಬೇಕೆಂದು ಗ್ರಾಮಸ್ಥರು ಕೋರಿದ್ದಾರೆ. ಗ್ರಾಮದಲ್ಲಿ ನೊಣಗಳ ಕಾಟದ ಕುರಿತ ದೂರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೊಪ್ಪಳ ಜಿಲ್ಲೆಯ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ನಾಗರಾಜ, ಕೋಳಿ ಫಾರ್ಮ್ ಅನ್ನು ಸರಿಯಾಗಿ ನಿರ್ವಹಿಸುವ ಮೂಲಕ ನೊಣಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕೆಂದು ಮಾಲೀಕರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ|ಕೊಪ್ಪಳದಲ್ಲಿ ಭಾರೀ ಗಾಳಿ ಸಹಿತ ಮಳೆ
ಚಿಕ್ಕಬಗನಾಳಕ್ಕೆ ಭೇಟಿ ನೀಡಿ ಸ್ಥಳೀಯ ಆರೋಗ್ಯ ಅಧಿಕಾರಿಗಳು, ಗ್ರಾಮ ಪಂಚಾಯತ್‌ನವರೊಂದಿಗೆ ಮಾತನಾಡಿ, ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸುವುದಾಗಿ ಹೇಳಿದ್ದಾರೆ.
ನೊಣದ ಹಾವಳಿಯಿಂದ ಬೇಸತ್ತು ಇತ್ತೀಚೆಗಷ್ಟೇ ಗ್ರಾಮಸ್ಥರು ಕೋಳಿ ಫಾರಂಗೆ ಬೀಗ ಹಾಕಲು ಹೋದಾಗ ಒಂದೆರಡು ದಿನ ನೊಣಗಳ ನಿರ್ಮೂಲನೆಗೆ ಔಷಧಿ ಸಿಂಪಡಿಸಿದ್ದು ಬಿಟ್ಟರೆ ಕೋಳಿ ಫಾರಂ ನವರು ಬೇರೇ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತು ನೊಣಗಳ ಹಾವಳಿಯಿಂದ ಬೇಸತ್ತಿರುವ ಚಿಕ್ಕಬಗನಾಳ ಗ್ರಾಮಸ್ಥರಿಗೆ ನೆಮ್ಮದಿ ನೀಡಬೇಕಿದೆ.
ಇದನ್ನೂ ಓದಿ| ಭಾರೀ ಮಳೆ-ಬಿರುಗಾಳಿಗೆ ಕೊಪ್ಪಳದಲ್ಲಿ 5,599 ಪ್ರದೇಶದ ಕೃಷಿ ಬೆಳೆ ಹಾನಿ