Site icon Vistara News

ಪಠ್ಯ ಪರಿಷ್ಕರಣೆ ನಿರ್ಧರಿಸುವ ಅಧಿಕಾರ ಸರ್ಕಾರದ್ದು: ಸಚಿವ ಪೂಜಾರಿ

ಕೋಟ ಶ್ರೀನಿವಾಸ ಪೂಜಾರಿ

ಕೊಪ್ಪಳ : ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಯಾರನ್ನು ನೇಮಿಸಬೇಕು ಎಂಬುದು ಸರ್ಕಾರದ ನಿರ್ಧಾರ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀನಿವಾಸ ಪೂಜಾರಿ, ಪಠ್ಯದಲ್ಲಿ ಯಾರ ಪಠ್ಯವನ್ನೂ ಕೈಬಿಟ್ಟಿಲ್ಲ. ರಾಷ್ಟ್ರೀಯತೆ ಬೆಳೆಸುವ ಹೆಡಗೇವಾರ ಸೇರಿದಂತೆ ಅನೇಕ ‌ಹೆಸರು ಸೇರಿಸಲಾಗುತ್ತದೆ. ಇನ್ನೂ ಪಠ್ಯ ಪುಸ್ತಕ ಮುದ್ರಣ ಪೂರ್ಣಗೊಂಡಿಲ್ಲ‌. ಮುದ್ರಣವಾದ ಬಳಿಕ ಓದೋಣ ಎಂದರು.

ಇದನ್ನೂ ಓದಿ | ಹೈಕೋರ್ಟ್‌ ತೀರ್ಪು ಉಲ್ಲಂಘಿಸುವವರಿಗೆ ಸಂವಿಧಾನದ ಮೇಲಿನ ಬದ್ಧತೆ ಪ್ರಶ್ನಾರ್ಹ: ಸಚಿವ ಪೂಜಾರಿ ಹೇಳಿಕೆ

ಈ ವಿಷಯದಲ್ಲಿ ಕಾಂಗ್ರೆಸ್ ಗೊಂದಲ ಮಾಡುತ್ತಿದೆ. ಸಿದ್ದರಾಮಯ್ಯ ಅವರ ಪಕ್ಷದ ಹಿರಿಯರೇ ಆರ್‌ಎಸ್‌ಎಸ್‌ ಮೆಚ್ವಿಕೊಂಡ ಉದಾಹರಣೆ ಇವೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹ ನಾಗಪುರಕ್ಕೆ ಭೇಟಿ ನೀಡಿದ್ದರು. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದಲ್ಲಿದ್ದವರು ಟೀಕಿಸುವುದು ಸಹಜ. ಅದಕ್ಕೆ ಆಡಳಿತ ಪಕ್ಷವಾಗಿ ನಾವು ಉತ್ತರ ನೀಡುತ್ತೇವೆ. ಇನ್ನೊಬ್ಬರ ಬಗ್ಗೆ ನಾನು ಟೀಕೆ ಟಿಪ್ಪಣಿ ಮಾಡುವುದಿಲ್ಲ ಎಂದರು.

ವಿಧಾನ ಪರಿಷತ್ ಟಿಕೆಟ್ ಹಂಚಿಕೆ ವಿಚಾರ

ವಿಧಾನ ಪರಿಷತ್ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ದೊಡ್ಡ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಬಹಳ ಇರುವುದು ಸಹಜ. ಈ ಕುರಿತಂತೆ ಎಲ್ಲವನ್ನು ರಾಷ್ಟ್ರೀಯ ನಾಯಕರು ತೀರ್ಮಾನಿಸುತ್ತಾರೆ. ಸಂಪುಟ ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪೂಜಾರಿ, ಸಿಎಂ ಅವರ ಪರಮೋಚ್ಚ ಅಧಿಕಾರವನ್ನು  ಪ್ರಶ್ನೆ ಮಾಡುವುದಿಲ್ಲ. ಸಿಎಂ ಬದಲಾವಣೆ ವಿಚಾರ ಯಾರು ಹೇಳಿದರು ಎನ್ನುವುದು ಗೊತ್ತಿಲ್ಲ ಎಂದರು.

ನನ್ನ ಇಲಾಖೆಯ ಪ್ರಗತಿ ಪರಿಶೀಲನೆಗಾಗಿ ಕೊಪ್ಪಳಕ್ಕೆ ಬಂದಿದ್ದೇನೆ‌. ಬಜೆಟ್‌ನಲ್ಲಿ ವಿನಯ ಸಾಮರಸ್ಯ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ವಿನಯ ಸಾಮರಸ್ಯದ ಕಲ್ಪನೆ ಅಸ್ಪಷ್ಯತೆ ನಿವಾರಣೆ, ಸಾಮರಸ್ಯ ಮೂಡಿಸುವುದು. ಗ್ರಾಮ ಪಂಚಾಯ್ತಿಗಳ ಮೂಲಕ ಜನಜಾಗೃತಿ ಮೂಡಿಸುವುದು.

ಈ ಯೋಜನೆಯ ಉದ್ಘಾಟನೆ ಆದಷ್ಟು ಬೇಗ ನಡೆಯಲಿದೆ. ಯಾರ ಕಡೆಯಿಂದ ಉದ್ಘಾಟನೆ ಮಾಡಿಸಬೇಕು ಎಂಬ ಚಿಂತನೆ ನಡೆದಿದೆ. ದೇವಸ್ಥಾನ ಪ್ರವೇಶಿಸಿ ಬಹಿಷ್ಕಾರಕ್ಕೊಳಗಾಗಿದ್ದ ಕೊಪ್ಪಳ ಜಿಲ್ಲೆಯ ಬಾಲಕನ ಹೆಸರನ್ನೇ ಈ ಯೋಜನೆಗೆ ಇಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇದನ್ನೂ ಓದಿ | ಕೊಪ್ಪಳದಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 402 ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ

Exit mobile version