Site icon Vistara News

ಆನೆಗೊಂದಿ ದೇವಳದಲ್ಲಿ ಜಯಲಕ್ಷ್ಮಿ ದೇವಿ ಮೂರ್ತಿ ಮರುಪ್ರತಿಷ್ಠಾಪನೆ, ಇಂದಿನಿಂದ ದರ್ಶನ ಅವಕಾಶ

ಪುನರ್ ಪ್ರತಿಷ್ಠಾಪನೆಗೊಂಡ ದೇವಿ

ಕೊಪ್ಪಳ: ಆನೆಗೊಂದಿ ಪಂಪಾ ಸರೋವರದ ಜೀರ್ಣೋದ್ಧಾರದ ಸಂದರ್ಭದಲ್ಲಿ ದೇವಸ್ಥಾನದ ಗರ್ಭಗುಡಿಯಿಂದ ಹೊರ ತೆಗೆಯಲಾದ ಜಯಲಕ್ಷ್ಮಿ ದೇವಿಯ ಮೂರ್ತಿಯನ್ನು ಗುರುವಾದ ಮರು ಪ್ರತಿಷ್ಠಾಪನೆ ನಡೆಯಿತು. ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಸ್ವಂತ ಖರ್ಚಿನಲ್ಲಿ ಪಂಪಾ ಸರೋವರದ ಜೀರ್ಣೋದ್ಧಾರ ಕೈಗೊಂಡಿದ್ದರು. ಈ ವೇಳೆ ಗುತ್ತಿಗೆದಾರರು ವಿದ್ಯಾರಣ್ಯರು ಪ್ರತಿಷ್ಠಾಪಿಸಿದ್ದ ಶ್ರೀಚಕ್ರ ಮತ್ತು ಜಯಲಕ್ಷ್ಮಿ ಮೂರ್ತಿಗಳನ್ನು ಗರ್ಭಗುಡಿಯಿಂದ ಯಾರಿಗೂ ಹೇಳದೆ ತೆರವುಗೊಳಿಸಿದ್ದು ವಿವಾದವಾಗಿತ್ತು.

ಪ್ರಾಚ್ಯವಸ್ತು, ಪುರಾತತ್ವ ಇಲಾಖೆಯ ಅನುಮತಿಯೊಂದಿಗೆ ದೇವಸ್ಥಾನದ ಜೀರ್ಣೋದ್ದಾರ ಕೈಗೊಂಡಿರುವ ಸಚಿವ ಬಿ. ಶ್ರೀರಾಮುಲು ಅವರು ಖುದ್ದಾಗಿ ನಿಂತು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಜಯದೇವಿ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿಸಿದರು.

ಬಳ್ಳಾರಿಯ ಲಕ್ಷ್ಮೀನಾರಾಯಣಾಚಾರ್ಯ ಅವರ ನೇತೃತ್ವದ 38 ಜನ ಪುರೋಹಿತರ ತಂಡ ಬುಧವಾರದಿಂದಲೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಗುರುವಾರ ಬೆಳಗ್ಗೆ 7.38 ಕ್ಕೆ ಜಯದೇವಿ ಮೂರ್ತಿ ಪ್ರತಿಷ್ಠಾಪನೆ, ಬಳಿಕ ಕಲಶಾರೋಹಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಇದನ್ನೂ ಓದಿ: ಜೀರ್ಣೋದ್ಧಾರ ನೆಪದಲ್ಲಿ ದೇವಾಲಯದ ಮೂರ್ತಿ ತೆರವುಗೊಳಿಸಿದ ಗುತ್ತಿಗೆದಾರ

ಬಿ. ಶ್ರೀರಾಮುಲು ಅವರು ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದರು. ಗುರವಾರ ಬೆಳಗ್ಗೆಯಿಂದ ನಡೆದ ಮೂರ್ತಿ ಪ್ರತಿಷ್ಠಾಪನೆ, ಕಳಶಾರೋಹಣ, ವಿವಿಧ ಹೋಮ-ಹವನಗಳ ಸಂದರ್ಭದಲ್ಲಿ ಬಿ. ಶ್ರೀರಾಮುಲು ಅವರ ಆಪ್ತಮಿತ್ರ ಮಾಜಿ ಸಚಿವ ಜಿ. ಜನಾರ್ದನರಡ್ಡಿ ಸೇರಿದಂತೆ ಸ್ಥಳೀಯ ಶಾಸಕ ಪರಣ್ಣ, ಮುನವಳ್ಳಿ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡರು.

ರಾಮುಲು ಅವರು ಪಂಪಾ ಸರೋವರದ ಜೀರ್ಣೋದ್ಧಾರ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ, ಈ ಕೈಂಕರ್ಯದ ಹಿಂದೆ ರಾಮುಲುಗಾಗಲಿ, ನಮಗಾಗಲಿ ಯಾವುದೇ ರಾಜಕೀಯದ ಉದ್ದೇಶವಿಲ್ಲ. ಶ್ರೀರಾಮುಲು ಅತ್ಯಂತ ಶ್ರದ್ಧಾಭಕ್ತಿಯಿಂದ ಕೈಗೊಂಡಿರುವ ಕಾರ್ಯವಿದು ಎಂದರು. ಶುಕ್ರವಾರ ಕುಂಭ ಮೇಳ ಸೇರಿದಂತೆ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಪುನರ್ ಪ್ರತಿಷ್ಠಾಪನೆಗೊಂಡ ದೇವಿಯ ದರ್ಶನಕ್ಕೆ ಶುಕ್ರವಾರ ಭಕ್ತರಿಗೆ ಅವಕಾಶ ಲಭ್ಯವಾಗಲಿದೆ.

ಇದನ್ನು ಓದಿ: ಪಂಪಾಸರೋವರ ಗ್ರಾಮದಲ್ಲಿ ತೆರವುಗೊಳಿಸಿದ್ದ ಮೂರ್ತಿ ಪುನಃಪ್ರತಿಷ್ಠಾಪನೆ

Exit mobile version