ಗಂಗಾವತಿ: ಕಲ್ಯಾಣ ಕರ್ನಾಟಕ (Kalyana Karnataka) ಭಾಗದ ಮೈಸೂರು ದಸರಾ (Dasara) ಎಂದು ಖ್ಯಾತಿಯಾಗಿರುವ ತಾಲೂಕಿನ ಹೇಮಗುಡ್ಡದಲ್ಲಿ ಸೋಮವಾರ ಸಂಜೆ ಅದ್ಧೂರಿಯಾಗಿ ಜಂಬೂ ಸವಾರಿ ನಡೆಯಿತು. ಆನೆಯ ಮೇಲೆ ದುರ್ಗಾ ಪರಮೇಶ್ವರಿ ದೇವಿಯ ಮೂರ್ತಿಯನ್ನಿರಿಸಿ ಮೆರವಣಿಗೆ ಮಾಡಲಾಯಿತು.
ದಸರಾ ಹಬ್ಬದ ಅಂಗವಾಗಿ ಹೇಮಗುಡ್ಡದ ದುರ್ಗಾ ಪರಮೇಶ್ವರಿ ದೇಗುಲದಲ್ಲಿ ಕಳೆದ ಒಂಬತ್ತು ದಿನಗಳಿಂದ ಧರ್ಮಕರ್ತ, ಮಾಜಿ ಶಾಸಕ ಎಚ್.ಆರ್. ಶ್ರೀನಾಥ್ ಅವರ ನೇತೃತ್ವದಲ್ಲಿ ನಿತ್ಯ ವಿಶೇಷ ಪೂಜೆ, ಅಲಂಕಾರ, ಹೋಮ ನಡೆದವು.
ಅಲಂಕೃತ ಆನೆಯ ಮೇಲೆ ದುರ್ಗಾ ಪರಮೇಶ್ವರಿ ದೇವಿಯ ಅಂಬಾರಿಯನ್ನಿಟ್ಟು ಸೋಮವಾರ ಸಂಜೆ ದೇಗುಲದ ಆವರಣದಲ್ಲಿ ಮಾಜಿ ಸಂಸದ ಎಚ್.ಜಿ. ರಾಮುಲು, ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.
ಇದನ್ನೂ ಓದಿ: Team India : ಇನ್ನೆರಡು ದಿನ ಧರ್ಮಶಾಲಾದಲ್ಲಿ ಉಳಿಯುವುದಾಗಿ ಹೇಳಿದ ಟೀಮ್ ಇಂಡಿಯಾ
ದೇಗುಲದಿಂದ ಆರಂಭವಾದ ಜಂಬೂ ಸವಾರಿ ಒಂದುವರೆ ಕಿಲೋ ಮೀಟರ್ ಅಂತರದಲ್ಲಿರುವ ಪಾದಗಟ್ಟೆಗೆ ತೆರಳಿ ಪೂಜೆ ಸಲ್ಲಿಸಿ ಬಳಿಕ ವಾಪಾಸ್ ದೇವಸ್ಥಾನಕ್ಕೆ ಆಗಮಿಸಿತು. ಶಮಿ ಮುಡಿಯುವ ಮೂಲಕ ವಿಜಯದಶಮಿ ಆಚರಿಸಲಾಯಿತು. ಜಂಬೂ ಸವಾರಿಯ ಮೆರವಣಿಗೆಗೆ ಸುತ್ತಲಿನ ಜಿಲ್ಲೆಗಳಿಂದ ಆಗಮಿಸಿದ್ದ ನಾನಾ ಕಲಾತಂಡಗಳು ಮೆರಗು ನೀಡಿದವು.
ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಹೇಮಗುಡ್ಡದಲ್ಲಿ ಮಾಜಿ ಶಾಸಕ ಎಚ್.ಆರ್. ಶ್ರೀನಾಥ್ ನೇತೃತ್ವದಲ್ಲಿ ಮೈಸೂರು ಮಾದರಿಯಲ್ಲಿ ಜಂಬೂ ಸವಾರಿ ಮಾಡಲಾಗುತ್ತಿದ್ದು, ಕಲ್ಯಾಣ ಕರ್ನಾಟಕದ ಮೈಸೂರು ದಸರಾ ಎಂದು ಖ್ಯಾತಿಯಾಗಿದೆ. ಜಂಬೂಸವಾರಿಯ ವೀಕ್ಷಣೆಗೆ ನೆರೆಹೊರೆಯ ಜಿಲ್ಲೆಗಳಿಂದ ಜನ ಆಗಮಿಸಿದ್ದರು.
ಇದನ್ನೂ ಓದಿ: Congress Politics : ಅ.25ರ ನಂತರ ನಿಗಮ ಮಂಡಳಿ, ನೂತನ ಕಾರ್ಯಾಧ್ಯಕ್ಷರ ನೇಮಕ: ಡಿ.ಕೆ. ಶಿವಕುಮಾರ್
ಈ ಸಂದರ್ಭದಲ್ಲಿ ಕೊಪ್ಪಳ ಲೋಕಸಭಾ ಸದಸ್ಯ ಕರಡಿ ಸಂಗಣ್ಣ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಹೊಸಪೇಟೆಯ ಶಾಸಕ ಎಚ್.ಆರ್. ಗವಿಯಪ್ಪ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಕೊಪ್ಪಳ ಜಿಲ್ಲೆಯ ಹಾಲಿ-ಮಾಜಿ ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.