ಗಂಗಾವತಿ/ಕಾರಟಗಿ: ಕೃಷಿ ಇಲಾಖೆ ವತಿಯಿಂದ ಕಾರಟಗಿಯ ಸಿದ್ದಾಪುರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಯಾಂತ್ರೀಕೃತ ಭತ್ತದ ಸಸಿ ನಾಟಿ ಕಾರ್ಯಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ನಲೀನ್ ಅತುಲ್ ಚಾಲನೆ (Koppala News) ನೀಡಿದರು.
ಸಿದ್ದಾಪುರ ಗ್ರಾಮದ ರೈತ ನೀರಗಂಟಿ ಬಸವರಾಜ ಅವರ ಗದ್ದೆಯಲ್ಲಿ ನೀರು ತುಂಬಿದ್ದ ಮಡಿಗಳಲ್ಲಿ ತಾವೇ ಸ್ವತಃ ಟ್ರಾಕ್ಟರ್ ಚಲಾಯಿಸುವ ಮೂಲಕ ಯಾಂತ್ರೀಕೃತ ಭತ್ತದ ಸಸಿ ನಾಟಿಗೆ ಚಾಲನೆ ನೀಡಿ, ಬಳಿಕ ಮಾತನಾಡಿದ ಡಿಸಿ ನಲೀನ್ ಅತುಲ್, ಭತ್ತ ನಾಟಿಗೂ ಯಂತ್ರಗಳು ಬಂದಿವೆ. ಯಾಂತ್ರೀಕೃತ ನಾಟಿ ಪದ್ದತಿಯನ್ನು ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಲಹೆ ಪಡೆದು ಹೆಚ್ಚಿನ ರೈತರು ಈ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಕೂಲಿಕಾರರ ಸಮಸ್ಯೆ ನೀಗಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಡ್ರಮ್ ಸೀಡರ್‌ನಿಂದ ಭತ್ತ ಸಸಿ ನಾಟಿ ವಿಧಾನವನ್ನು ಸಣ್ಣ ಮತ್ತು ಅತಿ ಸಣ್ಣ ರೈತರು ಅಳವಡಿಸಿಕೊಳ್ಳಬೇಕು. ಇದರಿಂದ ಖರ್ಚು ತಗ್ಗುತ್ತದೆ ಅಲ್ಲದೇ, ಸಕಾಲಕ್ಕೆ ಭತ್ತದ ನಾಟಿ ಸಾಧ್ಯವಾಗುತ್ತದೆ ಎಂದರು.
ಇದನ್ನೂ ಓದಿ: Fortis Hospital: ಅಪಘಾತದಲ್ಲಿ ತಲೆಗೆ ತೀವ್ರ ಏಟು; ಕ್ಲಿಷ್ಟ ಶಸ್ತ್ರಚಿಕಿತ್ಸೆಯಿಂದ ಯುವಕನಿಗೆ ಜೀವ ದಾನ
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮಾತನಾಡಿ, ಯಾಂತ್ರೀಕೃತ ನಾಟಿ ಪದ್ಧತಿಯಲ್ಲಿ ಚಾಪೆ ಮಡಿ ಪದ್ಧತಿಯಲ್ಲಿ ಬೆಳೆದ ಸಸಿಗಳನ್ನು ಈ ಯಂತ್ರದಿಂದ 8 ತಾಸುಗಳಲ್ಲಿ 7.5 ರಿಂದ 8.8 ಎಕರೆ ಪ್ರದೇಶವನ್ನು ಏಕಕಾಲಕ್ಕೆ ನಾಟಿ ಮಾಡಬಹುದು.
ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಸಸಿಗಳ ನಡುವಿನ ಅಂತರ ಮತ್ತು ನಾಟಿ ಮಾಡುವ ಆಳವನ್ನು ಹೋದಾಣಿಕೆ ಮಾಡಲು ಅವಕಾಶವಿದೆ. 16-18 ದಿನದ ವಯಸ್ಸಿನ ಸಸಿಗಳು ನಾಟಿಗೆ ಸೂಕ್ತ ಮತ್ತು ಶೇ. 15-20 ರಷ್ಟು ಇಳುವರಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ಮಾಹಿತಿ ನೀಡಿದರು.
2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಿದ್ದಾಪುರ ಹೋಬಳಿಯಲ್ಲಿ 15 ಸಾವಿರ ಹೆಕ್ಟೇರು ಪ್ರದೇಶಲ್ಲಿ ಭತ್ತದ ನಾಟಿ ಕಾರ್ಯ ಪ್ರಾರಂಭವಾಗಿದೆ. ಯಾಂತ್ರೀಕೃತ ನಾಟಿ ಪದ್ಧತಿ ಉತ್ತೇಜಿಸಲು ಕೃಷಿ ಇಲಾಖೆ ವಿವಿಧ ರೈತರ ಗದ್ದೆಗಳಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳುತ್ತಿದೆ. ಈ ಸಾಲಿನಲ್ಲಿ ಒಟ್ಟು 5 ಸಾವಿರ ಎಕರೆ ಪ್ರದೇಶದಲ್ಲಿ ಯಾಂತ್ರೀಕೃತ ಭತ್ತದ ನಾಟಿ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ: Kannada New Movie: ಇದು ʼಎʼ ಅಲ್ಲ ʼಬಿʼ ಅಲ್ಲ ‘ಸಿ’ ಸಾಂಗ್! ಹಾಡು ರಿಲೀಸ್ ಮಾಡಿದ ಲೂಸ್ ಮಾದ
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಘವೇಂದ್ರ ಎಲಿಗಾರ, ತಹಸೀಲ್ದಾರ ಕುಮಾರಸ್ವಾಮಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್, ಸಿಬ್ಬಂದಿಗಳಾದ ನಿಂಗಪ್ಪ, ಮಾರುತಿ, ನಾಗರಾಜ, ಮೇಘಶ್ರೀ ಹಾಗೂ ಇತರರಿದ್ದರು.