Site icon Vistara News

Koppala News: ದೆಹಲಿ ಪ್ರತಿಭಟನೆಯಲ್ಲಿ ರೈತರಿಲ್ಲ, ಚೀನಾ ಪ್ರೇರಿತ ಕಾಂಗ್ರೆಸ್‌ ಟೂಲ್‌ಕಿಟ್‌ ಪಿತೂರಿ: ಹರಿಪ್ರಕಾಶ್ ಕೋಣೆಮನೆ

hariprakash konemane

ಗಂಗಾವತಿ: ದೆಹಲಿಯಲ್ಲಿ (Delhi) ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರಿಲ್ಲ. ಅವರೆಲ್ಲಾ ಚೀನಾ (China) ಪ್ರೇರಿತ ಕಾಂಗ್ರೆಸ್‌ನ ಟೂಲ್‌ಕಿಟ್‌ನ ಒಂದು ರೂಪವಷ್ಟೆ. ಇದೆಲ್ಲಾ ಭಾರತದ ವಿರೋಧಿ ವಿದೇಶಿಗಳ ಕೈವಾಡದಿಂದ ಆಗುತ್ತಿರುವ ಪ್ರತಿಭಟನೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ (Koppala News) ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಬಹುತೇಕ ರೈತರು 50 ಲಕ್ಷ ರೂಪಾಯಿ ಬೆಲೆ ಬಾಳುವ ಕಾರು, ಐಷಾರಾಮಿ ವಾಹನಗಳಲ್ಲಿ ದೆಹಲಿಯ ಜಂತರ್‌ಮಂತರ್‌ನತ್ತ ಬರುತ್ತಿದ್ದಾರೆ. ಇವರು ನಿಜವಾದ ರೈತರು ಹೌದೋ ಅಲ್ಲವೋ ಎನ್ನುವುದನ್ನು ಇದು ಸೂಚಿಸುತ್ತದೆ ಎಂದರು.

ಐಷಾರಾಮಿ ಕಾರಿನಲ್ಲಿ ಬರುವ ರೈತರು ತಮ್ಮ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕೇಳಲು ಆರು ತಿಂಗಳಿಗೆ ಆಗುವಷ್ಟು ಆಹಾರ ಧಾನ್ಯಗಳ ಸಮೇತ ದೆಹಲಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಇದರ ಹಿಂದೆ ಚೀನಾ ಪ್ರೇರಿತ ಕಾಂಗ್ರೆಸ್‌ನ ಷಡ್ಯಂತ್ರವಿದೆ ಎಂದು ಆಪಾದಿಸಿದರು.

ಇದನ್ನೂ ಓದಿ: Child Artists : ಸೀರಿಯಲ್‌, ರಿಯಾಲಿಟಿ ಶೋದಲ್ಲಿ ಮಕ್ಕಳ ಅಭಿನಯ; ಡಿಸಿ ಅನುಮತಿ ಸಹಿತ ಹಲವು ಕಂಡಿಷನ್ಸ್‌

ರೈತರ ಹೆಸರಲ್ಲಿರುವ ಪ್ರತಿಭಟನಾಕಾರರು ಸರ್ಕಾರದೊಂದಿಗೆ ಮಾತುಕತೆಗೂ ಸಿದ್ಧವಿಲ್ಲ. ಪ್ರತಿಭಟನೆ ನಡೆಸಿ ಆರು ತಿಂಗಳ ಬಳಿಕ ಚುನಾವಣೆ ಮುಗಿಯುತ್ತಿದ್ದಂತೆಯೆ ನಿರ್ಗಮಿಸುವುದು ಈ ಪ್ರತಿಭಟನೆಯ ಸ್ವರೂಪವಾಗಿದೆ ಎಂದರು.

ರೈತರ ವೇಷದಲ್ಲಿ ಈ ದೇಶದ ವಿರುದ್ಧ ಕೆಲಸ ಮಾಡುತ್ತಿರುವವರೇ ಅಲ್ಲಿ ಅಧಿಕವಾಗಿದ್ದಾರೆ. ಬಜೆಟ್‌ನಲ್ಲಿ ಮೋದಿ ಸರ್ಕಾರ ಕೃಷಿಗೆ ಗರಿಷ್ಠ ಆದ್ಯತೆ ನೀಡಿದೆ. ರಾಜ್ಯದಲ್ಲಿ ಬೆಳೆದ 40 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಕೇಂದ್ರ ಖರೀದಿಸಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: IPL 2024: ಭಾರತದಲ್ಲೇ ಐಪಿಎಲ್​; ಖಚಿತಪಡಿಸಿದ ಅಧ್ಯಕ್ಷ ಅರುಣ್ ಧುಮಾಲ್

ಇಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ 29 ರೂಪಾಯಿಗೆ ಕೆಜಿ ಅಕ್ಕಿ ಕೂಡ ರೈತರಿಂದಲೇ ಖರೀದಿಸಿರುವುದು. ಈ ಮೂಲಕ ಅಕ್ಕಿ ಬೆಳೆಗಾರರಿಗೆ, ರೈತರಿಗೆ ಅನುಕೂಲ ಕಲ್ಪಿಸುವಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದರು.

ಕ್ಯಾಂಟೀನ್‌ಗಳಲ್ಲಿ ರಾಹುಲ್‌ ಗಾಂಧಿ ಭಾಷಣ

ಇಲ್ಲಿನ ಜನರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವಂತಹ ಕಾರ್ಯ ಇದೇ ಮೊದಲಲ್ಲ. ಈ ಹಿಂದೆ ಅಮೆರಿಕಾದ ಅಧ್ಯಕ್ಷರು ಭಾರತಕ್ಕೆ ಬಂದಾಗಲೂ ಪ್ರತಿಭಟನೆ ಮಾಡಿಸಲಾಗಿತ್ತು. ವಿದೇಶಿ ವಿಶ್ವವಿದ್ಯಾಲಯಗಳಿಗೆ ಹೋಗುತ್ತಿರುವ ರಾಹುಲ್ ಗಾಂಧಿ ಅಲ್ಲಿನ ಕ್ಯಾಂಟೀನ್‌ಗಳಲ್ಲಿ ಭಾಷಣ ಮಾಡಿ ಬರುತ್ತಿದ್ದಾರೆ. ವಿದೇಶಿ ವಿಶ್ವವಿದ್ಯಾಲಯಗಳು ಇವರಿಗೆ ಆಹ್ವಾನ ನೀಡದೇ ಹೋದರೂ ಅಲ್ಲಿನ ಕ್ಯಾಂಟೀನ್‌ಗಳಲ್ಲಿ ಕುಳಿತು ಭಾರತದ ವಿರುದ್ಧ ರಾಹುಲ್ ಗಾಂಧಿ ಅವರು ಮಾತನಾಡಿ ಬರುತ್ತಿದ್ದಾರೆ. ಅರುಣಾಚಲದಲ್ಲಿ ಚೀನಾ ಅತಿಕ್ರಮಣ ಮಾಡಿದೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ ಮಾರನೇ ದಿನ ಚೀನಾ ನಕಲಿ ನಕಾಶೆ ಬಿಡುಗಡೆ ಮಾಡುತ್ತದೆ. ಇದೆಲ್ಲ ಮೋದಿ ಸರ್ಕಾರದ ವಿರುದ್ಧದ ಸಂಘಟಿತ ಪಿತೂರಿ ಎಂದು ಕೋಣೆಮನೆ ಆಪಾದಿಸಿದರು.

ಇದೆಲ್ಲವನ್ನೂ ಗಮನಿಸಿದರೆ ರಾಹುಲ್‌ ಗಾಂಧಿಗೂ ಚೀನಾ ಸರ್ಕಾರಕ್ಕೂ ಸಂಬಂಧ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ರಾಹುಲ್ ಗಾಂಧಿ ಮಾಡುವ ಪ್ರತಿಯೊಂದು ಕೆಲಸದ ಹಿಂದೆ ಚೀನಾ, ಪಾಕಿಸ್ತಾನ ಸೇರಿದಂತೆ ಭಾರತದ ಶತ್ರು ರಾಷ್ಟ್ರಗಳ ಹಸ್ತಕ್ಷೇಪವಿದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: Karnataka Weather: ಅಬ್ಬಬ್ಬಾ.. ಕರುನಾಡಲ್ಲಿ ಸೆಕೆ ನೋಡು! ಹೊರಗೆ ಬಂದರೆ ಮಂಡೆ ಬಿಸಿ

ಈ ವೇಳೆ ಬಿಜೆಪಿ ಮುಖಂಡ ಎನ್. ಸೂರಿಬಾಬು ಇದ್ದರು.

Exit mobile version