Site icon Vistara News

Koppala News: ಕಡೇಬಾಗಿಲು ಗ್ರಾಮದಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ

Vijayanagara period inscription found in Kadebagilu village

ಗಂಗಾವತಿ: ವಿಜಯನಗರದ ಅರಸರ ಕಾಲಘಟ್ಟದ್ದು ಎನ್ನಲಾದ ಶಿಲಾ ಶಾಸನವೊಂದು ತಾಲೂಕಿನ ಆನೆಗೊಂದಿ (Anegondi) ಸಮೀಪದ ಕಡೇಬಾಗಿಲು ಗ್ರಾಮದಲ್ಲಿರುವ ಬೆಟ್ಟದ ಮೇಲಿನ ಕೋಟೆಯ ಪ್ರದೇಶದಲ್ಲಿ (Koppala News) ಪತ್ತೆಯಾಗಿದೆ.

ಸಮಾನ ಮನಸ್ಕ ಯುವಕರನ್ನೊಳಗೊಂಡ ಗಂಗಾವತಿಯ ಕಿಷ್ಕಿಂಧಾ ಯುವ ಚಾರಣ ಬಳಗದ ಸದಸ್ಯರು, ಚಾರಣಕ್ಕೆಂದು ಈ ಬೆಟ್ಟಕ್ಕೆ ಹೋದಾಗ ಈ ಶಿಲಾ ಶಾಸನ ಕಂಡು ಬಂದಿದೆ.

ಮಣ್ಣಿನಲ್ಲಿ ಬಹುತೇಕ ಭಾಗ ಹೂತು ಹೋಗಿತ್ತು. ದೊಡ್ಡ ಬಂಡೆಯಾಕಾರದ ಶಿಲೆಯ ಮೇಲೆಯೇ ಈ ಶಾಸನ ಬರೆಯಲಾಗಿದ್ದು, ಬಹುತೇಕ ಭಾಗ ಮಣ್ಣಿನಲ್ಲಿ ಹೂತು ಹೋಗಿತ್ತು. ಶಾಸನದ ಮೇಲಿದ್ದ ಮಣ್ಣಿನ ಪದರಗಳನ್ನು ಸ್ವಚ್ಛಗೊಳಿಸಿದ ಯುವಕರು ಬಳಿಕ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೊಲ್ಕಾರ ಅವರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Oldest Man: ನೀವೂ 100 ವರ್ಷ ಬದುಕಬೇಕೇ? 111 ವರ್ಷದ ಈ ‘ಯುವಕ’ನ ಮಾತು ಕೇಳಿ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೊಲ್ಕಾರ, ಈ ಶಾಸನ ಪರಿಶೀಲಿಸಿದಾಗ 8 ಸಾಲುಗಳಲ್ಲಿದ್ದು, ಸ್ವಸ್ತಿ ಶ್ರೀ ಜಯದ್ ಉದಯ ಶಾಲಿವಾಹನ ಶಕ ವರುಷ 1449 ನೇ ಕಾಲವನ್ನು ಉಲ್ಲೇಖಿಸಲಾಗಿದೆ. ಅದು ಪ್ರಸಕ್ತ ಶಕ 1527 ಕ್ಕೆ ಸರಿಯಾಗುತ್ತದೆ.

ಶಾಸನದಲ್ಲಿ ಆನೆಗೊಂದಿಯ ಮಹಾ ಪ್ರಧಾನರಾಗಿದ್ದ ಲಕ್ಕಿ ಶೆಟ್ಟಿಯ ಮಗನಾದ ವಿಜಯನಾಥನು ಬೆಟ್ಟದ ಮೇಲಿನ ವೀರಭದ್ರ ದೇವರನ್ನು ಆರಾಧಿಸುತ್ತಿದ್ದ ಸಂಗತಿ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಈ ಶಾಸನದಲ್ಲಿ ಪ್ರಾಸಂಗಿಕವಾಗಿ ಆನೆಗೊಂದಿಯನ್ನು ಹಸ್ತಿನಾವತಿ ಎಂದು ಅದು ಪಂಚಕೋಶ ಮಧ್ಯದಲ್ಲಿತ್ತೆಂದು ಹೇಳಲಾಗಿದೆ.

ಅಲ್ಲದೇ ಆನೆಗೊಂದಿಗೆ ಕಿಷ್ಕಿಂಧ ಪರ್ವತ ಎಂದು ಕೂಡ ಹೆಸರಿತ್ತು ಎಂದು ಉಲ್ಲೇಖಿಸಲಾಗಿರುವುದು ಗಮನಾರ್ಹ ಸಂಗತಿ. ಇದು ಐತಿಹಾಸಿಕವಾಗಿ ಅತ್ಯಂತ ಮಹತ್ವದ ದಾಖಲೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಆನೆಗೊಂದಿಯ ಈ ಶಾಸನವೇ ಕಿಷ್ಕಿಂಧಾ ಪರ್ವತ ಎಂದು ಉಲ್ಲೇಖಿಸಿರುವುದು ಕಿಷ್ಕಿಂಧ ಮತ್ತು ಆಂಜನೇಯನ ಜನ್ಮಸ್ಥಳಗಳ ಬಗೆಗಿನ ವಾದ ವಿವಾದಗಳ ಸಂದರ್ಭದಲ್ಲಿ ಈ ಶಾಸನದ ಉಲ್ಲೇಖ ತುಂಬಾ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: Old Pension Scheme: ಹಳೆಯ ಪಿಂಚಣಿ ಬೇಕಿದ್ದರೆ ಯೋಚಿಸಿ ನಿರ್ಧಾರ ಮಾಡಿ! ಏನಿದು ರಾಜ್ಯ ಸರ್ಕಾರದ ಆದೇಶ?

ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿಯೇ ಅಂಜನಾದ್ರಿ ಬೆಟ್ಟ ಎನ್ನಲು ಹಾಗೂ ಆಂಜನೇಯನ ಜನ್ಮಸ್ಥಳವೆಂದು ಗುರುತಿಸಲು ಈ ಶಾಸನ ಮತ್ತೊಂದು ಐತಿಹಾಸಿಕ ದಾಖಲೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Exit mobile version