ಗಂಗಾವತಿ: ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷದ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುವುದನ್ನು ಜನರ ಮುಂದಿಡಲಿ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ (Lok Sabha Election 2024) ಹೇಳಿದ್ದಾರೆ. ನಗರದ ಆನೆಗೊಂದಿ ರಸ್ತೆಯಲ್ಲಿರುವ ಮಾಜಿ ಸಂಸದ ಎಚ್.ಜಿ. ರಾಮುಲು ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
60 ವರ್ಷದಲ್ಲಿ ಕಾಂಗ್ರೆಸ್‌ನವರು ಏನು ಮಾಡಿದ್ದಾರೆ ಎಂದು ಮೋದಿಯಾದಿಯಾಗಿ ಬಿಜೆಪಿಗರು ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುತ್ತಾರೆ. ಆಯ್ತು ನಮಗೆ ಗಣಿತದ ಲೆಕ್ಕಾಚಾರ ಬರಲ್ಲ ಎಂದೇ ಭಾವಿಸಿ. ಆದರೆ ಕಳೆದ ಹತ್ತು ವರ್ಷದಲ್ಲಿ ನೀವೇನು ಮಾಡಿದ್ದೀರಿ ಎಂಬುವುದನ್ನು ಜನರ ಮುಂದಿಡಬೇಕಲ್ಲ ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ
ಚುನಾವಣೆ ಸಂದರ್ಭದಲ್ಲಿ ತಾವು ನೀಡಿದ ಆಡಳಿತ, ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಮತ ಕೇಳಬೇಕು. ಆದರೆ ಬಿಜೆಪಿಗರಿಗೆ ಇದ್ಯಾವುದೂ ಬೇಡ. ಕೇವಲ ಧರ್ಮ, ಜಾತಿ ಆಧಾರದ ಮೇಲೆ ಸಮಾಜವನ್ನು ಇಬ್ಭಾಗವಾಗಿಸುವ ಹೇಳಿಕೆಗಳಿಂದ ಚುನಾವಣೆಗೆ ಹೋಗುತ್ತಾರೆ. ಜನರಲ್ಲಿ ಕೋಮು ಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಚುನಾವಣೆಯ ಸಂದರ್ಭದಲ್ಲಿ ಮಾಡಿದ ಕಾರ್ಯಸಾಧನೆ ಏನು, ಮುಂದಿನ ಅವಧಿಯಲ್ಲಿ ಏನು ಮಾಡುತ್ತೇವೆ ಎಂಬುವುದನ್ನು ಪ್ರಣಾಳಿಕೆ ಮೂಲಕ ಜನರಿಗೆ ಹೇಳಬೇಕು ಎಂದು ಅವರು ತಿಳಿಸಿದರು.
ಕಳೆದ ಹತ್ತು ವರ್ಷದಲ್ಲಿ ಈ ದೇಶಕ್ಕೆ ಉಪಯುಕ್ತವಾಗುವ ಒಂದೇ ಒಂದು ಸ್ಪಷ್ಟ ಯೋಜನೆ ಜಾರಿಗೆ ತರಲು ಸಾಧ್ಯವಾಗಿಲ್ಲ ಎಂದು ಟೀಕಿಸಿದ ಅವರು, ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮೂಲಕ ದೇಶದುದ್ದಗಲಕ್ಕೂ ಇರುವ ಸಮಸ್ಯೆಗಳನ್ನು ಅರಿತು ಅವುಗಳ ಪರಿಹಾರಕ್ಕಾಗಿ ಪ್ರಣಾಳಿಕೆಯನ್ನು ತಯಾರಿಸಿದ್ದಾರೆ. ಆದರೆ ಬಿಜೆಪಿಯ ಪ್ರಣಾಳಿಕೆಯಲ್ಲಿ ಏನೂ ಇಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: Road Accident: ಅಮೆರಿಕದಲ್ಲಿ ಭೀಕರ ಅಪಘಾತ, 20 ಅಡಿ ಎತ್ತರ ಜಿಗಿದ ಕಾರು; 3 ಭಾರತೀಯ ಮಹಿಳೆಯರ ಸಾವು
ಈ ಸಂದರ್ಭದಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಎಚ್.ಆರ್. ಶ್ರೀನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.