Site icon Vistara News

Lok Sabha Election 2024: ಎಚ್‌ಡಿಕೆ ಭೇಟಿ ಮಾಡಿದ ಕರಡಿ ಸಂಗಣ್ಣ; ಕೈ ಸೇರ್ಪಡೆಯೋ? ಬಿಜೆಪಿಗೆ ಬೆಂಬಲವೋ?

Lok Sabha Election 2024 Karadi Sanganna meets HD Kumaraswamy and discusstion on loksabha election BJP ticket miss

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಈಗ ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ ವಂಚಿತರಿಂದ ಭಿನ್ನಮತದ ಪರ್ವ ಆರಂಭವಾಗಿದೆ. ಇದರ ಭಾಗವಾಗಿ ಕರ್ನಾಟಕ ಬಿಜೆಪಿಯಲ್ಲಿಯೂ ಬಂಡಾಯ ಮುಂದುವರಿದಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ (Lok Sabha Election 2024) ಟಿಕೆಟ್ ವಂಚಿತ ಹಾಲಿ ಸಂಸದ ಕರಡಿ ಸಂಗಣ್ಣ (Karadi Sanganna) ಅವರು ಈಗಾಗಲೇ ತಮ್ಮ ಮುನಿಸನ್ನು ಹೊರಹಾಕಿದ್ದಾರೆ. ಅವರು ಈಗ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಬೇಕೋ? ಅಥವಾ ಕಾಂಗ್ರೆಸ್‌ (Congress Karnataka) ಸೇರಬೇಕೋ ಎಂಬ ಗೊಂದಲದಲ್ಲಿ ಇದ್ದಾರೆ. ಈ ಸಂಬಂಧ ಮಹತ್ವದ ಸಭೆ ನಡೆಸಿ ತಮ್ಮ ತೀರ್ಮಾನವನ್ನು ಪ್ರಕಟಿಸಲಿದ್ದಾರೆ. ಇದರ ಜತೆಗೆ ಸೋಮವಾರ ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರನ್ನು ಸಹ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಸಂಸದ ಸಂಗಣ್ಣ ಕರಡಿ ಅವರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಮಧ್ಯಾಹ್ನ ಬೆಂಬಲಿಗರ ಸಭೆ ಕರೆದಿದ್ದಾರೆ. ಇಲ್ಲಿ ಬಿಜೆಪಿಯಲ್ಲಿಯೇ ಇರುವ ಇಲ್ಲವೇ ಅಥವಾ ಕಾಂಗ್ರೆಸ್ ಸೇರ್ಪಡೆಯಾದರೆ ಅಲ್ಲಿನ ಸ್ಥಾನಮಾನ ಏನು ಎಂಬ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಿದ್ದಾರೆ.

ರಾಜಕೀಯ ಭವಿಷ್ಯದ ಬಗ್ಗೆ ಚಿಂತೆ

ಸಂಗಣ್ಣ ಕರಡಿ ಅವರಿಗೆ ಈಗ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಚಿಂತೆ ಎದುರಾಗಿದೆ ಎಂದು ಹೇಳಲಾಗಿದೆ. ಕಾರಣ, ಅವರಿಗೆ ಈಗ ಬಿಜೆಪಿಯಿಂದ ಟಿಕೆಟ್‌ ಮಿಸ್‌ ಆಗಿದೆ. ಆದರೆ, ಮುಂದೇನು? ಎಂಬ ಬಗ್ಗೆ ರಾಜ್ಯ ನಾಯಕರಾಗಲೀ, ಹೈಕಮಾಂಡ್‌ ನಾಯಕರಾಗಲೀ ಏನೂ ಹೇಳಿಲ್ಲ ಎಂದು ಹೇಳಲಾಗಿದೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡುವ ಬಗ್ಗೆಯೂ ಅವರಿಗೆ ಯಾವುದೇ ಭರವಸೆ ಸಿಕ್ಕಿಲ್ಲವೇ? ಎಂಬ ಪ್ರಶ್ನೆಯೂ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಬೆಂಗಳೂರಿನ ನಿವಾಸದಲ್ಲಿ ಕರೆದಿರುವ ಸಭೆಯಲ್ಲಿ ಮಹತ್ವದ ನಿರ್ಣಯವನ್ನು ಕೈಗೊಳ್ಳಲಿದ್ದಾರೆ.

ಒಂದು ವೇಳೆ ಕಾಂಗ್ರೆಸ್‌ ಸೇರುವುದಾದರೆ ತಮಗೆ ಸೇರಿದಂತೆ ತಮ್ಮ ಬೆಂಬಲಿಗರಿಗೆ ಯಾವ ರೀತಿ ಸ್ಥಾನಮಾನವನ್ನು ಕಲ್ಪಿಸಲಾಗುತ್ತದೆ? ಮುಂದಿನ ರಾಜಕೀಯ ಗುರಿ ಏನು? ಎಂಬಿತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹೀಗಾಗಿ ಈ ಬಗ್ಗೆ ಕಾಂಗ್ರೆಸ್‌ ನಾಯಕರ ಬಳಿ ಒಂದು ಸಾರಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವ ಬಗ್ಗೆಯೂ ಸಂಗಣ್ಣ ಕರಡಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಎಚ್‌ಡಿಕೆ ಭೇಟಿ ಮಾಡಿದ ಸಂಗಣ್ಣ ಕರಡಿ

ಸಂಸದ ಸಂಗಣ್ಣ ಕರಡಿ ಅವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಈ ನಡುವೆ ಕೆಲ ಕಾಲ ಮಾತುಕತೆ ನಡೆಸಿದ್ದಾರೆ ನಡೆಸಿದ್ದಾರೆ ಎನ್ನಲಾಗಿದೆ. ಆಗ ತಮಗೆ ಟಿಕೆಟ್‌ ಕೈತಪ್ಪಿದ್ದರ ಬಗ್ಗೆಯೂ ಸಂಗಣ್ಣ ಕರಡಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ, ಯಾವುದೇ ಆತುರದ ನಿರ್ಧಾರವನ್ನು ಕೈಗೊಳ್ಳದಂತೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Lok Sabha Election 2024: ಮೋದಿ ಮೋದಿ ಎಂದವರ ಕಪಾಳಕ್ಕೆ ಹೊಡೆಯಿರಿ ಎಂದ ಸಿದ್ದರಾಮಯ್ಯ ಸಂಪುಟ ಸಚಿವ!

ಸಂಗಣ್ಣ ಮನೆಗೆ ನೂರಾರು ಬೆಂಬಲಿಗರ ಆಗಮನ

ಬೆಂಗಳೂರಿನ ಕರಡಿ ಸಂಗಣ್ಣ ಅವರ ಮನೆಗೆ ಕೊಪ್ಪಳ ಜಿಲ್ಲೆಯಿಂದ ನೂರಾರು ಬೆಂಬಲಿಗರು ಆಗಮಿಸಿದ್ದಾರೆ. ಇಲ್ಲೀಗ ತಮ್ಮ ಬೆಂಬಲಿಗರ ಜತೆ ಕರಡಿ ಸಂಗಣ್ಣ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ. ಬೆಂಬಲಿಗರ ಸಭೆ ನಂತರ ಮಧ್ಯಾಹ್ನ ಬಿಜೆಪಿ ಕಚೇರಿಗೆ ತೆರಳಿ ಪಕ್ಷದ ನಾಯಕರ ಜತೆಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲಿನ ಚರ್ಚೆಯ ಫಲಿತಾಂಶದ ಬಳಿಕ ಇವರ ನಿರ್ಧಾರ ಅಂತಿಮವಾಗಲಿದೆ ಎಂದು ಹೇಳಲಾಗಿದೆ.

Exit mobile version