Site icon Vistara News

ರಾಜಕಾರಣಿಗಳ ಪ್ರತಿಷ್ಠೆ: 10 ವರ್ಷಗಳು ಕಳೆದರೂ ಪೂರ್ಣಗೊಳ್ಳದ ರಂಗಮಂದಿರ

ರಂಗಮಂದಿರ

ಕೊಪ್ಪಳ: ಕಲಾವಿದರ ರಂಗ ಚಟುವಟಿಕೆಗಳನ್ನು ನಡೆಸಲು ಜಿಲ್ಲಾ ಕೇಂದ್ರದಲ್ಲಿ ಒಂದು ಸುಸಜ್ಜಿತ ವೇದಿಕೆಯ ರಂಗ ಮಂದಿರ ಬೇಕು ಎಂದು ಸರ್ಕಾರ 2011 ರಲ್ಲಿ ಜಿಲ್ಲೆಗೊಂದು ರಂಗ ಮಂದಿರ ನಿರ್ಮಾಣಕ್ಕೆ ಮುಂದಾದಾಗಿತ್ತು. ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೂ ಒಂದು ಜಿಲ್ಲಾ ರಂಗ ಮಂದಿರವನ್ನು ಮಂಜೂರಾತಿ ನೀಡಿತ್ತು. ಆದರೆ 2011 ರಲ್ಲಿ ಸುಮಾರು 3 ಕೋಟಿ ರುಪಾಯಿ ವೆಚ್ಚದ ಆಡಳಿತಾತ್ಮಕ ಮಂಜೂರಾತಿಯೊಂದಿಗೆ ಆರಂಭವಾದ ಜಿಲ್ಲಾ ರಂಗ ಮಂದಿರ ನಿರ್ಮಾಣ ಕಾಮಗಾರಿ 10 ವರ್ಷ ಕಳೆದರೂ ಪೂರ್ಣಗೊಂಡಿಲ್ಲ.

ಈ ಸ್ಥಿತಿಗೆ ರಾಜಕಾರಣಿಗಳ ಕ್ರೆಡಿಟ್ ಪೊಲಿಟಿಕ್ಸ್ ಕಾರಣ. ರಂಗ ಮಂದಿರ ಮಂಜೂರಾತಿಯ ಸಂದರ್ಭದಲ್ಲಿ ಪ್ರಸ್ತುತ ಸಂಸದರಾಗಿರುವ ಸಂಗಣ್ಣ ಕರಡಿ ಕೊಪ್ಪಳ ಕ್ಷೇತ್ರದ ಶಾಸಕರಾಗಿದ್ದರು. ಬಳಿಕ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಂಗಣ್ಣ ಕರಡಿ ಸೋಲುಂಡರು. 2013 ಮತ್ತು 2018 ರಲ್ಲಿ ಶಾಸಕರಾಗಿ ಆಯ್ಕೆಯಾದ ಕೆ. ರಾಘವೇಂದ್ರ ಹಿಟ್ನಾಳ್ ಅವರು ರಂಗಮಂದಿರ ನಿರ್ಮಾಣ ಕಾಮಗಾರಿಯನ್ನು ನಿರ್ಲಕ್ಷ್ಯ ಮಾಡಿದರು. ಏಕೆಂದರೆ ಅದು ಶಾಸಕ ಸಂಗಣ್ಣ ಕರಡಿ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಮಂಜೂರಾಗಿದ್ದ ಕಾಮಗಾರಿ.

ಇದನ್ನೂ ಓದಿ | ಕೇವಲ ಮೋದಿ ನಾಯಕ್ವದಲ್ಲಿ ನಾವು ಚುನಾವಣೆಯಲ್ಲಿ ಗೆಲ್ತೀವಿ ಅನ್ನೋದು ಮೂರ್ಖತನ: ಸಂಸದ ಸಂಗಣ್ಣ ಕರಡಿ

ತಮ್ಮ ಅವಧಿಯಲ್ಲಿ ಇದನ್ನು ಪೂರ್ಣಗೊಳಿಸಿದರೆ ಅದರ ಕ್ರೆಡಿಟ್ ಸಂಗಣ್ಣ ಕರಡಿ ಅವರಿಗೆ ಸಲ್ಲುತ್ತದೆ. ಹೀಗಾಗಿ ಆ ಉಸಾಬರಿಯೇ ಬೇಡ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ನಿರ್ಲಕ್ಷ್ಯ ಮಾಡಿದರು.

ಒಳಾಂಗಣ ಕಾಮಗಾರಿ ನಡೆಯಬೇಕಿದೆ

ಮೂರು ಕೋಟಿ ರುಪಾಯಿ ವೆಚ್ಚದ ಆಡಳಿತಾತ್ಮಕ ಅನುಮೋದನೆಯೊಂದಿಗೆ ನಿರ್ಮಿತಿ ಕೇಂದ್ರ ರಂಗಮಂದಿರ ನಿರ್ಮಾಣ ಕಾಮಗಾರಿಯನ್ನು ಹಾಗೋ ಹೀಗೋ ಮಾಡಿ ಒಂದು ಹಂತಕ್ಕೆ ತಂದು ನಿಲ್ಲಿಸಿದೆ. ಈಗ ರಂಗ ಮಂದಿರದ ಒಳಾಂಗಣ ಕಾಮಗಾರಿ ನಡೆಯಬೇಕಿದೆ.

ಈ ಒಳಾಂಗಣ ಕಾಮಗಾರಿಗೆ ಸುಮಾರು 6 ಕೋಟಿ ರುಪಾಯಿ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಪಿಡಬ್ಲೂಡಿ ಸಲ್ಲಿಸಿದೆ. ಇದರಲ್ಲಿ 3 ಕೋಟಿ ರೂಪಾಯಿಯನ್ನು ಕೆಕೆಆರ್‌ಡಿಬಿ ನೀಡಲು ಒಪ್ಪಿಗೆ ನೀಡಿದೆ. ಇನ್ನೂ ಮೂರು ಕೋಟಿ ರುಪಾಯಿಯನ್ನು ಸರ್ಕಾರ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ,

ಕ್ರೆಡಿಟ್ ರಾಜಕಾರಣದಿಂದ ಒಂದು ಯೋಜನೆ ಅಥವಾ ಕಾಮಗಾರಿ ತನ್ನ ಯೋಜನಾ ವೆಚ್ಚವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಮೂಲೆಗುಂಪಾಗುತ್ತವೆ ಎಂಬುದಕ್ಕೆ ಜಿಲ್ಲಾ ರಂಗಮಂದಿರ ನಿರ್ಮಾಣ ಕಾಮಗಾರಿ ದಶಕಗಳ ಕಾಲ ಕಳೆದರೂ ಮುಗಿಯದೇ ಇರುವುದು ಉದಾಹರಣೆಯಾಗಿರುವುದು ದುರಂತ.

ಇದನ್ನೂ ಬೆಳಗಾವಿ ಶಾಲಾ ಕಟ್ಟಡ ದುರಸ್ತಿ ಮಾಡಿ ಎಂದವರ ಮೇಲೆಯೇ FIR ದಾಖಲು?ಓದಿ:

Exit mobile version