ಕೊಪ್ಪಳ: ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಪರ್ವತ ಎಂಬುದಕ್ಕೆ ಸಾವಿರಾರು ವರ್ಷಗಳ ಇತಿಹಾಸ ಹಾಗೂ ಅನೇಕ ಸಾಕ್ಷಿಗಳಿವೆ ಎಂದು ಸಚಿವ ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಅಂಜನಾದ್ರಿಯ ಅಭಿವೃದ್ಧಿ ಕುರಿತ ರೂಪುರೇಷೆ ಸಿದ್ದಪಡಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಆನಂದ್ ಸಿಂಗ್ ಸಭೆ ನಡೆಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ʼʼಹನುಮನ ಜನ್ಮ ಸ್ಥಳ ಅಂಜನಾದ್ರಿ ಪರ್ವತ ಎಂಬುದಕ್ಕೆ ಸಾಕಷ್ಟು ಸಾಕ್ಷಿ, ಪುರಾವೆಗಳಿವೆ. ಭಗವಂತ ಈ ಪೃಥ್ವಿಯ ಮೇಲೆ ಎಲ್ಲಿಯಾದರೂ ಜನ್ಮ ತಾಳಬಹುದು. ಅದು ಅವರವರ ನಂಬಿಕೆ. ಆದರೆ ಆಂಜನೇಯಸ್ವಾಮಿ ಜನಿಸಿರುವುದು ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿಯೇʼʼ ಎಂದರು.
ಇದನ್ನೂ ಓದಿ | ಪ್ರಿಯತಮೆಯನ್ನು ಬಿಡು ಎಂದರೆ, ಇಲ್ಲ ರಾಜಕೀಯವನ್ನೇ ಬಿಡುತ್ತೇನೆಂದ ಕಾಂಗ್ರೆಸ್ ಮಾಜಿ ಸಚಿವ
ʼʼಅಂಜನಾದ್ರಿ ಅಭಿವೃದ್ಧಿ ಕುರಿತಂತೆ ಸಿಎಂ ಇದೇ ಜೂನ್ 15ರಂದು ಸಭೆ ಕರೆದಿದ್ದಾರೆ. ಅಂಜನಾದ್ರಿ ಬೆಟ್ಟದಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ಆದಷ್ಟು ಬೇಗ ಒದಗಿಸಲು ಚಿಂತನೆ ನಡೆಸಲಾಗಿದೆ. ಇದಕ್ಕೆ ಪೂರಕವಾಗಿ ಸೋಮವಾರ ಅಂಜನಾದ್ರಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಈಗ 28 ಕಾಮಗಾರಿಗಳನ್ನು ಗುರುತಿಸಲಾಗಿದೆʼʼ ಎಂದು ಸಚಿವರು ಮಾಹಿತಿ ನೀಡಿದರು.
ʼʼಸಭೆಯ ಅಂಶಗಳನ್ನು 15ರಂದು ನಡೆಯುವ ಸಿಎಂ ಸಭೆಯಲ್ಲಿ ತಿಳಿಸಲಾಗುವುದು. ಇದಕ್ಕೆ 150 ಕೋಟಿ ರೂ. ಆಗುತ್ತದೆಯೋ, 200 ಕೋಟಿಯಾಗುತ್ತದೆಯೋ ನೋಡೋಣ. ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲು ಸಿಎಂ ಸೂಚಿಸುತ್ತಾರಾ ಎನ್ನುವುದು ಗೊತ್ತಿಲ್ಲʼʼ ಎಂದು ಆನಂದ್ ಸಿಂಗ್ ಹೇಳಿದರು.
ʼʼಇದು ಧಾರ್ಮಿಕ ಸ್ಥಳವಾಗಿರುವುದರಿಂದ ಅಭಿವೃದ್ಧಿ ಕುರಿತಂತೆ ಸಲಹೆ ಪಡೆಯಬೇಕಾಗುತ್ತದೆ. ನಮ್ಮ ಸರ್ಕಾರದ ಈ ಅವಧಿ ಮುಗಿಯುವುದರೊಳಗಾಗಿ ಕಾಮಗಾರಿಗಳು ಆರಂಭವಾಗಲಿವೆ ಎಂಬ ವಿಶ್ವಾಸವಿದೆ. ಇಲಾಖೆಯ ಅಧಿಕಾರಿಗಳೊಂದಿಗೆ, ಸ್ಥಳೀಯ ಶಾಸಕರೊಡಗೂಡಿ ಸಭೆ ನಡೆಸಿ ಸಮಗ್ರ ಮಾಹಿತಿಯೊಂದಿಗೆ ಸಿಎಂ ಬರಲು ಹೇಳಿದ್ದಾರೆ. ಇದಕ್ಕಾಗಿಯೇ ಸಭೆ ನಡೆಸಲಾಗಿದೆʼʼ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
ಸಚಿವರನ್ನು ತರಾಟೆಗೆ ತೆಗೆದುಕೊಂಡ ಹೋಟೆಲ್ ಮಾಲೀಕ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬಳಿ ಇರುವ ಹೋಟೆಲ್ ಮಾಲೀಕ ಮತ್ತು ಸಚಿವ ಆನಂದ್ ಸಿಂಗ್ ನಡುವೆ ವಾಗ್ವಾದ ನಡೆದಿದೆ. ʼʼಹೊಸಪೇಟೆ ಭಾಗದಲ್ಲಿ ಹೋಟೆಲ್‌ಗಳು ಆರಂಭ ಇವೆ. ಕೊರೋನಾ ನಿಯಮಾವಳಿ ನಮಗಷ್ಟೇನಾʼʼ ಎಂದು ಸಚಿವರಿಗೆ ಹೋಟೆಲ್ ಮಾಲೀಕರು ಪ್ರಶ್ನಿಸಿದರು. ಆನೆಗುಂದಿ ಭಾಗದಲ್ಲಿ ಹೋಟೆಲ್ ಬಂದ್ ಮಾಡಿಸಿದ ಹಿನ್ನೆಲೆಯಲ್ಲಿ ಹೊಸಪೇಟೆ ಭಾಗದಲ್ಲಿಯೂ ಹೋಟೆಲ್ ಬಂದ್ ಇವೆ ಎಂದ ಸಚಿವ ಆನಂದ್ ಸಿಂಗ್ ಹೇಳಿಕೆ ನೀಡಿದರು. ಆದರೆ ಆ ಭಾಗದಲ್ಲಿ ಹೋಟೆಲ್ ಆರಂಭವಿದ್ದು, ನಮಗೂ ಹೋಟೆಲ್ ಆರಂಭಕ್ಕೆ ಅವಕಾಶ ಕೊಡಿ ಎಂದು ಮಾಲೀಕರು ಪಟ್ಟು ಹಿಡಿದರು.
ಇದನ್ನೂ ಓದಿ | ಮತ್ತೊಬ್ಬ ಮಹಿಳೆಯೊಂದಿಗೆ ಇದ್ದಾಗ ಪತ್ನಿ ಕೈಯ್ಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ