ಕೊಪ್ಪಳದಲ್ಲಿ ರೈತನೊಬ್ಬನ ಜೇಬು ಕತ್ತರಿಸಿ ಹಣ ಕದ್ದಿದವನನ್ನು (Theft Case) ಪೊಲೀಸರು ಬಂಧಿಸಿದ್ದಾರೆ. ಅನಿಲ್ ಕಂಜರಬಾಟ್ ಬಂಧಿತನಾಗಿದ್ದು, ಈತ ಹುಬ್ಬಳ್ಳಿಯವನು. ಜುಲೈ 7ರಂದು ಹನಕುಂಟಿಯ ಸಿದ್ದಯ್ಯ ಸಾರಂಗಮಠ ಎಂಬ ರೈತನ ಜೇಬಿನಲ್ಲಿದ್ದ 1.60 ಲಕ್ಷ ರೂಪಾಯಿಯನ್ನು ಈತ ಎಗರಿಸಿದ್ದ. ಕಳ್ಳ ಸಿಕ್ಕರೂ ರೈತನ ಪೂರ್ತಿ ಹಣ ಸಿಗಲಿಲ್ಲ.
ಜು.7ರಂದು ಕಳ್ಳತನ ಮಾಡಿದ ಬಳಿಕ ಅನಿಲ್ ಹುಬ್ಬಳ್ಳಿಗೆ ಹೋಗಿದ್ದ. ಇತ್ತೀಚೆಗೆ ಮತ್ತೆ ಕೊಪ್ಪಳಕ್ಕೆ ಆಗಮಿಸಿದ್ದ. ನಗರ ಠಾಣೆಯಲ್ಲಿ ಈ ಕೇಸ್ ದಾಖಲಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಹೆಚ್ಚಿನ ನಿಗಾ ವಹಿಸಿದ್ದರು. ಅನಿಲ್ ಕಂಜರಬಾಟ್ನನ್ನು ಬಸ್ ಸ್ಟ್ಯಾಂಡ್ನಲ್ಲಿ ನೋಡಿದ ಪೊಲೀಸರು ಅನುಮಾನ ಬಂದು ಅವನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆತ ಹಣ ಕದ್ದಿದ್ದನ್ನು ಒಪ್ಪಿಕೊಂಡಿದ್ದ. ಕದ್ದ 1.60 ಲಕ್ಷ ರೂಪಾಯಿಯಲ್ಲಿ, 20 ಸಾವಿರ ರೂ.ನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದೇನೆ ಎಂದು ಹೇಳಿ, ಉಳಿದ 1.40ಲಕ್ಷ ರೂ.ನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ.
ಇದನ್ನೂ ಓದಿ: ಎಟಿಎಂನಿಂದ 24 ಲಕ್ಷ ರೂ. ದೋಚಿದ್ದ ಗ್ಯಾಂಗ್ ಅರೆಸ್ಟ್; ಹಣ ಹಾಕಿದ್ದವನೇ ಕಳ್ಳರ ಲೀಡರ್!
ಪೊಲೀಸರಂತೆ ಬಂದು ಚಿನ್ನ ದೋಚಿದ ದುಷ್ಕರ್ಮಿಗಳು
ಕಲಬುರಗಿ: ಪೊಲೀಸರಂತೆ ಬಂದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇಲ್ಲಿನ ಚಿಂಚೋಳಿ ತಾಲೂಕಿನ ಸುಲೇಪೇಟ್ ಬಳಿಯ ರಾಯಚೂರು-ವನ್ಮಾರಪಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಪಂಚನಪಳ್ಳಿ ಗ್ರಾಮದ ಚಂದ್ರಶೇಖರ್ ಅವರ ಬಳಿಯಿದ್ದ 12 ಗ್ರಾಂ ಚಿನ್ನದ ಉಂಗುರ, 6 ಗ್ರಾಂ. ತೂಕದ ಹರಳಿನ ಉಂಗುರವನ್ನು ಕಸಿದು ಪರಾರಿಯಾಗಿದ್ದಾರೆ. ಚಂದ್ರಶೇಖರ್ ಅವರು ಪೇಪರ್ ತರಲೆಂದು ಇದೇ ಮಾರ್ಗದಲ್ಲಿ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಕಳ್ಳರೂ ಕೂಡ ಬೈಕ್ನಲ್ಲಿ ಬಂದಿದ್ದಾರೆ. ತಮ್ಮನ್ನು ತಾವು ಪೊಲೀಸ್ ಅಧಿಕಾರಿಗಳು, ಬೈಕ್ ತಪಾಸಣೆ ಮಾಡಬೇಕು ಎಂದು ಹೇಳಿಕೊಂಡು ಚಂದ್ರಶೇಖರ್ ಬೈಕ್ ನಿಲ್ಲಿಸಿದ್ದಾರೆ. ಆಗ ಚಾಕು ತೋರಿಸಿ ಚಿನ್ನ ಪಡೆದು ಹೋಗಿದ್ದಾರೆ.