Site icon Vistara News

CM Siddaramaiah: ತುಂಗಭದ್ರಾ ಜಲಾಶಯ ಮತ್ತೆ ತುಂಬುವ ನಿರೀಕ್ಷೆ, ರೈತರಿಗೆ ತೊಂದರೆಯಾಗದಂತೆ ಕ್ರಮ: ಸಿಎಂ

cm siddaramaiah tungabhadra dam

ಕೊಪ್ಪಳ: ಹವಾಮಾನ ಮುನ್ಸೂಚನೆಯಂತೆ ತುಂಗಭದ್ರಾ ಜಲಾಶಯದಿಂದ (Tungabhadra Dam) ಪೋಲಾಗಿರುವ ನೀರು ಮತ್ತೆ ತುಂಬಿಕೊಳ್ಳಲಿದ್ದು, ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ತುಂಗಭದ್ರಾ ಜಲಾಶಯದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪ ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಇದು ರಾಜಕೀಯ ಮಾಡುವ ವಿಷಯವಲ್ಲ. ತುಂಗಭದ್ರಾ ಮಂಡಳಿಯ ನೇತೃತ್ವವನ್ನು ಭಾರತ ಸರ್ಕಾರ ನೇಮಿಸಿದ ಅಧ್ಯಕ್ಷರು ನಿರ್ವಹಿಸುತ್ತಾರೆ. ಆಂಧ್ರ, ಕರ್ನಾಟಕ, ತೆಲಂಗಾಣ ರಾಜ್ಯದ ಸದಸ್ಯರು ಮಂಡಳಿಯಲ್ಲಿರುತ್ತಾರೆ.. ಈ ಜಲಾಶಯದ ನಿರ್ವಹಣೆಯ ಜವಾಬ್ದಾರಿ ತುಂಗಭದ್ರಾ ಮಂಡಳಿಗೆ ಸೇರಿರುತ್ತದೆ. ಆದರೆ ಈ ವಿಷಯದಲ್ಲಿ ನಾನು ಯಾರನ್ನೂ ದೂಷಿಸುವುದಿಲ್ಲ ಎಂದರು.

ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 105 ಟಿಎಂಸಿ ನೀರು ತುಂಬಿತ್ತು. ಆದರೆ ತುಂಡಾಗಿರುವ ಗೇಟ್ ನ ದುರಸ್ತಿಗಾಗಿ 50 ರಿಂದ 60 ಟಿಎಂಸಿ ನೀರು ಹೊರಗೆ ಬಿಡಬೇಕಾಗಿದೆ. ಈ ವರ್ಷದ ಅಕ್ಟೋಬರ್ ವರೆಗೆ ಮಳೆಯಾಗಲಿದ್ದು, ಜಲಾಶಯದಲ್ಲಿ ಪುನ: ನೀರು ತುಂಬುವ ಸಾಧ್ಯತೆಯಿದೆ. ಹವಾಮಾನ ಮುನ್ಸೂಚನೆಯಂತೆ ಆಗಸ್ಟ್ 15 ರ ನಂತರ ಪುನಃ ಮಳೆಬರುವ ನಿರೀಕ್ಷೆಯಿದೆ. ಆದ್ದರಿಂದ ಈಗ ಪೋಲಾಗಿರುವ ನೀರು ಮತ್ತೊಮ್ಮೆ ಜಲಾಶಯದಲ್ಲಿ ತುಂಬಲಿದ್ದು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದರು.

ಎರಡನೇ ಬೆಳೆಗೆ ನೀರು ಸಿಗುವುದೇ?

ಗೇಟ್ ರಿಪೇರಿಗಾಗಿ 60 TMC ನೀರನ್ನು ಅಣೆಕಟ್ಟಿನಿಂದ ಖಾಲಿ ಮಾಡುವ ಅನಿವಾರ್ಯತೆ ಇದೆ. 105 TMC ಸಾಮರ್ಥ್ಯದ TB ಡ್ಯಾಂನಲ್ಲಿ 20 ಅಡಿ ನೀರು ಕುಗ್ಗಿಸಿ 60 TMCಯಷ್ಟು ನೀರನ್ನು‌ ಅಧಿಕಾರಿಗಳು ಖಾಲಿ ಮಾಡುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಿಂದ ಮಳೆ ಪ್ರಮಾಣ ಕುಗ್ಗಬಹುದು. ಹೀಗಾಗಿ ಖಾಲಿಯಾದ 60 ಟಿಎಂಸಿ ನೀರನ್ನು ಮತ್ತೆ ತುಂಬಿಸುವುದು ಕಷ್ಟಸಾಧ್ಯ. ಬೇಸಿಗೆಯಲ್ಲಿ ನಿರ್ವಹಣೆಗಾಗಿ ಡ್ಯಾಂ ತುಂಬಿಸುವುದು ಅಧಿಕಾರಿಗಳಿಗೆ ಸವಾಲು ಆಗುತ್ತದೆ. ಸೆಪ್ಟೆಂಬರ್ ಬಳಿಕ ಕಾಲುವೆ ನೀರು ಕೈಕೊಟ್ಟರೆ ಬೆಳೆಗಳು ಬಾಡುತ್ತವೆ. ಹೀಗಾಗಿ ಈ ಬಾರಿ ಬೆಳೆಗಳಿಗೆ‌ ಡ್ಯಾಂ ನೀರು ಸಿಗುವುದೇ ಅನುಮಾನ ಎಂಬಂತಾಗಿದೆ.

ಎರಡನೇ ಬೆಳೆಗಿಂತ ಮೊದಲ ಬೆಳೆಗಾದರೂ ಸರಿಯಾಗಿ ನೀರು ಸಿಗುವುದೇ ಎಂಬ ಆತಂಕವೂ ರೈತರನ್ನು ಕಾಡುತ್ತಿದೆ. 60 ಟಿಎಂಸಿ ನೀರು ಖಾಲಿಯಾದ್ರೆ ಡ್ಯಾಂನಲ್ಲಿ ಉಳಿಯುವುದು ಕೇವಲ 45 ಟಿಎಂಸಿ ನೀರು ಮಾತ್ರ. ಇದರಲ್ಲಿ ಆಂಧ್ರಪ್ರದೇಶದ ಕೋಟಾ ಕೂಡಾ ಇದೆ. ಹೀಗಾಗಿ ಕರ್ನಾಟಕ ಕೋಟಾ ಉಳಿಯುವುದು ಕೇವಲ ಇಪ್ಪತ್ತೈದು ಟಿಎಂಸಿ ನೀರು. ಇದರಲ್ಲಿಯೇ ಕುಡಿಯುವ ನೀರಿಗೆ ಹೆಚ್ಚಿನ ನೀರು ಇಟ್ಟುಕೊಳ್ಳುವುದರಿಂದ ರೈತರಿಗೆ ಇದೀಗ ಬೆಳೆಗೆ ನೀರು ಸಿಗುತ್ತಾ ಇಲ್ಲವೋ ಅನ್ನೋ ಆತಂಕ ಎದುರಾಗಿದೆ.

ತುಂಗಭದ್ರಾ ಜಲಾಶಯದ ನೀರಿನ ಮೇಲೆಯೇ ನಾಲ್ಕು ಜಿಲ್ಲೆಗಳ ಅನೇಕ ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತದೆ. ಡ್ಯಾಂನಲ್ಲಿರೋ ನೀರು ಖಾಲಿಯಾದ್ರೆ ಕುಡಿಯುವ ನೀರಿಗೆ ಕೂಡಾ ತತ್ವಾರವಾಗುತ್ತದೆ. ಕಳೆದ ಬೇಸಿಗೆಯಲ್ಲಿ ಅನೇಕ ಕಡೆ ಕುಡಿಯಲು ಕೂಡಾ ನೀರು ಬಿಡದ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮತ್ತೆ ಡ್ಯಾಂ ಖಾಲಿಯಾಗುತ್ತಿರುವುದರಿಂದ ಬೇಸಿಗೆಯಲ್ಲಿ ಈ ಬಾರಿ ಕೂಡಾ ತತ್ವಾರವಾಗೋ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: Tungabhadra Dam: ತುಂಗಭದ್ರಾ ಜಲಾಶಯದಿಂದ 15 ಟಿಎಂಸಿ ನೀರು ವ್ಯರ್ಥ

Exit mobile version