ಬಾಗಲಕೋಟೆ: ಚೀನಾ – ಭಾರತ ಯುದ್ಧದ ಸಂದರ್ಭದಲ್ಲಿ ನಡೆದ ಪಥಸಂಚಲನದಲ್ಲಿ ಭಾಗವಹಿಸುವಂತೆ ಅಂದಿನ ಪ್ರಧಾನಿ ನೆಹರೂ ಅವರು ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ಆಹ್ವಾನ ನೀಡಿದ್ದರು. ಪ್ರಣಬ್ ಮುಖರ್ಜಿ ಅವರು ನಾಗಪುರದ ಆರ್‌ಎಸ್ಎಸ್ ಸಂಘದ ಕಚೇರಿಗೆ ಹೋಗಿ, ರಾಷ್ಟ್ರವನ್ನು ಮುನ್ನಡೆಸಬಲ್ಲ ಸಂಘಟನೆ ಆರ್‌ಎಸ್‌ಎಸ್ ಎಂದು ಪ್ರಶಂಸಿಸಿದ್ದರು. ಅವರಿಗಿಂತ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ದೊಡ್ಡವರಾ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.
ಆರ್‌ಎಸ್‌ಎಸ್ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಹೇಳಿಕೆ ಬಗ್ಗೆ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ʼʼಇವರಿಗೆ ಆರ್‌ಎಸ್‌ಎಸ್ ಬಗ್ಗೆ ಗೊತ್ತಿಲ್ಲದೆ ಇದ್ದರೆ ಇತಿಹಾಸವನ್ನು ಒಮ್ಮೆ ನೋಡಿಕೊಳ್ಳಲಿ. ಚಡ್ಡಿ ಸುಡುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಬೇಕಿಲ್ಲ. ಆರ್‌ಎಸ್‌ಎಸ್ ಸಮವಸ್ತ್ರ ಸುಡುತ್ತೇವೆ ಎಂಬ ಮಟ್ಟಕ್ಕೆ ಅವರು ಬಂದರೆ, ಅವರ ರಾಜಕಾರಣ ಬಹಳ ಕೆಳ ಮಟ್ಟಕ್ಕೆ ಹೋಗಿದೆ ಎಂದರ್ಥ. ಅವರಿಗೆ ಪ್ರತಿಕ್ರಿಯೆ ಕೊಡುವ ಶಕ್ತಿ ಆರ್‌ಎಸ್ಎಸ್ ಹಾಗೂ ಬಿಜೆಪಿಗೆ ಇದೆ ಎಂದು ಪೂಜಾರಿ ಕಿಡಿಕಾರಿದರು.
ಇದನ್ನೂ ಓದಿ | ಅಂಬೇಡ್ಕರ್ ಪಠ್ಯ ಕೈಬಿಟ್ಟ ವಿವಿ: ರಾಜ್ಯದಲ್ಲಿ ಮತ್ತೊಂದು ಪಠ್ಯಪುಸ್ತಕ ಎಡವಟ್ಟು
ಆರ್‌ಎಸ್‌ಎಸ್ ರಾಷ್ಟ್ರಮಟ್ಟದ ಸಂಘಟನೆ ಎಂದು ಇಡೀ ಜಗತ್ತು ಒಪ್ಪಿಕೊಂಡಿದೆ. ಇನ್ನು ಕಾಂಗ್ರೆಸ್‌ನಲ್ಲಿ ಸಮರ್ಥನೆ ಮಾಡಿಕೊಳ್ಳೋದಕ್ಕೆ ಏನೂ ಉಳಿದಿಲ್ಲ. ದಿನದಿಂದ ದಿನಕ್ಕೆ ಆ ಪಕ್ಷ ಮಾಯ ಆಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಮೋದಿ ಅವರ ಕಾರ್ಯವೈಖರಿ, ರಾಷ್ಟ್ರ ಮುನ್ನಡೆಸುವ ರೀತಿಯನ್ನು ಜನ ಮೆಚ್ಚಿದ್ದಾರೆ. ಆರ್‌ಎಸ್‌ಎಸ್‌ನ ಟೀಕೆ ಮಾಡಿದಷ್ಟೂ ಲಾಭ ಆಗುತ್ತದೆ ಎಂಬ ಅವರ ಲೆಕ್ಕಾಚಾರ ಮೂರ್ಖತನದ್ದುʼʼ ಎಂದು ಸಚಿವರು ಹೇಳಿದರು.
ʼʼಬಿಜೆಪಿ ವಿರುದ್ಧ ಮತ ಸೆಳೆಯಲು ಒಂದು ಕಡೆ ಕಾಂಗ್ರೆಸ್, ಮತ್ತೊಂದೆಡೆ ಜೆಡಿಎಸ್ ಜಗ್ಗಾಡುತ್ತಿವೆ. ಚುನಾವಣೆ ಗೆಲ್ಲುವ ಮತಗಳು ಅವರ ಕಡೆ ಉಳಿದಿಲ್ಲʼʼ ಎಂದು ಪೂಜಾರಿ ನುಡಿದರು. ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು ʼʼಕಾಲಕಾಲಕ್ಕೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ ಉದಾಹರಣೆಗಳಿವೆ. ಪಠ್ಯಪುಸ್ತಕ ವಿರೋಧಿಸುವ ನೆಪದಲ್ಲಿ ಬಿಜೆಪಿ ಸರ್ಕಾರವನ್ನು ಟೀಕಿಸಲಾಗುತ್ತಿದೆ. ಯಾರಿಗೂ ಪಠ್ಯಪುಸ್ತಕದಲ್ಲಿ ಏನಿದೆ ಅಂತ ಓದುವ ಆಸಕ್ತಿ ಇದ್ದಂತಿಲ್ಲ. ಏನಾದರೂ ಮಾಡಿ ಸರ್ಕಾರದ ಮೇಲೆ ಆಪಾದನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಮುಖ್ಯಮಂತ್ರಿಗಳ ತೀರ್ಮಾನವೇ ಅಂತಿಮʼʼ ಎಂದು ತಿಳಿಸಿದರು.
ಇದನ್ನೂ ಓದಿ | ಪಠ್ಯ ವಿವಾದ-2: ಸದ್ಯದಲ್ಲೆ ಪಿಯು ಪಠ್ಯ ಪರಿಷ್ಕರಣೆ