Site icon Vistara News

Karnataka Politics: ನಿಗಮ-ಮಂಡಳಿಗೆ ಕಾರ್ಯಕರ್ತರನ್ನು ನೇಮಕ ಮಾಡಿ; ಕೆಪಿಸಿಸಿ ಪ್ರಚಾರ ಸಮಿತಿ ಪದಾಧಿಕಾರಿಗಳ ಆಗ್ರಹ

ಬೆಂಗಳೂರು: ನಿಗಮ-ಮಂಡಳಿಗಳಿಗೆ ಶಾಸಕರ ಬದಲಿಗೆ ನಿಷ್ಠಾವಂತ ಕಾರ್ಯಕರ್ತರನ್ನು ನೇಮಕ ಮಾಡಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಪದಾಧಿಕಾರಿಗಳು ಅಗ್ರಹಿಸಿದ್ದಾರೆ. ಚುನಾವಣೆ (Karnataka Politics) ಸಂದರ್ಭದಲ್ಲಿ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಎಲ್ಲರಿಗೂ ಅಧಿಕಾರ ಕೊಡಲು ಆಗುವುದಿಲ್ಲ. ಆದರೆ, ಕೆಲವರನ್ನಾದರೂ ಗುರುತಿಸಿ ಅಧಿಕಾರ ಕೊಡಬೇಕು ಎಂದು ಕೈ ನಾಯಕರಿಗೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯ ಭಾರತ್ ಜೋಡೊ ಸಭಾಂಗಣದಲ್ಲಿ ಭಾನುವಾರ ಸಚಿವ ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆ ನಡೆಯಿತು. ಈ ವೇಳೆ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮತನಾಡಿ, ಕಾರ್ಯಕರ್ತರಿಗೆ ಉತ್ತಮ ಸ್ಥಾನಮಾನ ಕೊಟ್ಟರೆ, ನಮ್ಮನ್ನು ಗುರುತಿಸಿದ್ದಾರೆ ಎಂದು ಉತ್ಸಾಹ ಹೆಚ್ಚಾಗಲಿದೆ ಎಂದು ತಿಳಿಸಿದರು.

ಬಿ.ಎಲ್.ಶಂಕರ್ ಮಾತನಾಡಿ, ಹಣವಂತರು ಹೇಗಿದ್ದರೂ ಚುನಾವಣೆಗೆ ನಿಲ್ಲುತ್ತಾರೆ. ಆದರೆ ಪಕ್ಷ ನಿಷ್ಠರಿಗೆ ಹೆಚ್ಚಿನ ಅವಕಾಶ ನೀಡಬೇಕು. ಶಾಸಕರಿಗಿಂತ ಹೆಚ್ಚಾಗಿ ಕಾರ್ಯಕರ್ತರಿಗೆ ಅವಕಾಶ ನೀಡಬೇಕು. ನಗರ, ಸ್ಥಳೀಯ ಮಟ್ಟದ ಕಮಿಟಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರ ನೇಮಕ ಮಾಡಬೇಕು. ಯತೀಂದ್ರ ಸಿದ್ದರಾಮಯ್ಯರನ್ನು ಆಶ್ರಯ ಸಮಿತಿ ಸದಸ್ಯರಾಗಿ ಮಾಡಲಾಗಿದ್ದು, ಅದೇ ಮಾದರಿಯಲ್ಲಿ ಪಕ್ಷಕ್ಕೆ ದುಡಿದ ಕಾರ್ಯಕರ್ತರನ್ನು ಸಮಿತಿಗಳಿಗೆ ನೇಮಕ ಮಾಡಿ. ಮಾಜಿ ಶಾಸಕರು, ಚುನಾವಣೆಯಲ್ಲಿ ಸೋತಂತಹವರು ಮತ್ತೆ ಬೋರ್ಡ್, ಕಾರ್ಪೋರೇಷನ್ ಸದಸ್ಯರಾಗುವುದು ಬೇಡ ಎಂದು ಹೇಳಿದರು.

KPCC campaign committee meeting

ಇದನ್ನೂ ಓದಿ | Power Point with HPK : ಕಾಂಗ್ರೆಸ್‌ ಸರ್ಕಾರಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಏನೆಂಬುದೇ ಗೊತ್ತಿಲ್ಲ!

ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದೆ, ಆದರೆ ಬಿಜೆಪಿ ಸೋತಿದ್ಯಾ? ನಾವು ಹೆಚ್ಚಿನ ಸ್ಥಾನ ಗೆದ್ದಿರಬಹುದು, ಆದರೆ ಬಿಜೆಪಿಯ ಓಟ್ ಶೇರ್ ಹಾಗೆಯೇ ಇದೆ. ನಾವು ಬಿಜೆಪಿ ಓಟ್ ಶೇರ್ ಹೆಚ್ಚಾಗುವುದಕ್ಕೆ ಬಿಟ್ಟರೆ‌ ನಮಗೆ ಕಷ್ಟ. ಈ ಬಾರಿ ಇರುವಷ್ಟು ಅವಕಾಶ ಯಾವತ್ತೂ ಇರಲಿಲ್ಲ. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಭೆ ಸಮಾವೇಶವನ್ನು ಮಾಡಬೇಕು. ಅಲ್ಪ ಸಂಖ್ಯಾತ, ದಲಿತ, ಮೇಲ್ವರ್ಗದ ಸಮುದಾಯಗಳೆಲ್ಲ ಈ ಬಾರಿ ನಮ್ಮ ಜತೆಗೆ ನಿಂತಿದ್ದಾರೆ ಎಂದರು.

ಆಪರೇಷನ್ ಹಸ್ತದ ಪಾಲಿಟಿಕ್ಸ್‌ಗೆ ಬೇಸರ

ಪ್ರಚಾರ ಸಮಿತಿ ಸಭೆ ವೇದಿಕೆಯಲ್ಲಿ ಆಪರೇಷನ್ ಹಸ್ತದ ಪಾಲಿಟಿಕ್ಸ್‌ಗೆ ಕಲ್ಯಾಣ ಕರ್ನಾಟಕ ವಿಭಾಗವನ್ನು ಪ್ರತಿನಿಧಿಸಿ ಮಾತನಾಡಿದ ಸಂಜಯ್ ಜಾಗಿರ್ದಾರ್ ಬಹಿರಂಗವಾಗಿ ಬೇಸರ ಹೊರಹಾಕಿದರು. ನಾವು ಮೊದಲಿಂದಲೂ ಪಕ್ಷದ ಕೆಲಸ ಮಾಡುತ್ತಿದ್ದೇವೆ. ಯೂತ್ ಕಾಂಗ್ರೆಸ್ ಸೇರಿ ಅನೇಕ ವಿಭಾಗಗಳಲ್ಲಿ ಕೆಲಸ ಮಾಡಿದ್ದೇವೆ. ಆದರೆ, ಕೆಲವರು ಬೇರೆ ಪಕ್ಷಗಳಿಂದ ನೇರವಾಗಿ ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ. ಹೀಗಾದರೆ ನಾವು ಏನು ಮಾಡಬೇಕು ಎಂದು ಆಪರೇಷನ್ ಹಸ್ತಕ್ಕೆ ಬೇಸರ ಹೊರಹಾಕಿದರು. ಈ ವೇಳೆ ಸಭೆಯಲ್ಲಿ ಮಾಧ್ಯಮಗಳು ಇವೆ. ಯಾರು ಬಹಿರಂಗವಾಗಿ ಮಾತನಾಡಬೇಡಿ ಎಂದು ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಮನವಿ ಮಾಡಿದರು. ಈ ವೇಳೆ ಪದಾಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಕೇಳಿ ಎಂದು ಮನವಿ ಮಾಡಿದರು.

ಶಾಸಕರಿಗೆ ನಿಗಮ ಮಂಡಳಿ‌ ಸ್ಥಾನ ನೀಡಬೇಡಿ

ಶಾಸಕರಿಗೆ ಈಗಾಗಲೇ ಟಿಕೆಟ್ ನೀಡಿ ಅವಕಾಶ ನೀಡಲಾಗಿದೆ. ಮತ್ತೆ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡುವುದು ಬೇಡ. ಪಕ್ಷಕ್ಕಾಗಿ ದುಡಿದ ಅನೇಕ ಕಾರ್ಯಕರ್ತರು ಇದ್ದಾರೆ. ಅವರಿಗೆ ಮೊದಲು ಆದ್ಯತೆ ನೀಡಿ. ಈಗಾಗಲೇ ಸರ್ಕಾರ ಬಂದು ಮೂರು ತಿಂಗಳು ಕಳೆದಿವೆ, ಹೀಗೆ ಮುಂದುವರಿದರೆ ಅನೇಕರು‌ ಬಿಜೆಪಿ ಕಡೆ ಮುಖ ಮಾಡಿದ್ದಾರೆ. ತಕ್ಷಣ ಕಾರ್ಯಕರ್ತರಿಗೆ ನಿಗಮ ಮಂಡಳಿ ಸ್ಥಾನ ನೀಡಿ. ಯಾವುದೇ ಕಾರಣಕ್ಕೂ ಶಾಸಕರ ಒತ್ತಡಕ್ಕೆ ಮಣಿಯಬೇಡಿ. ಶಾಸಕರಿಗೆ ನಿಗಮ ಮಂಡಳಿ‌ ಸ್ಥಾನ ನೀಡಬೇಡಿ ಎಂದು ಬೆಳಗಾವಿ ಗ್ರಾಮೀಣ ಪ್ರಚಾರ ಸಮಿತಿ ಅಧ್ಯಕ್ಷ ಒತ್ತಾಯಿಸಿದರು.

ಮುಖಂಡ ನಾರಾಯಣಸ್ವಾಮಿ ಮಾತನಾಡಿ, ಮಾಜಿ ಸಚಿವ ಸುಧಾಕರ್ ನನ್ನ ಮೇಲೆ 7 ಕೇಸ್ ಹಾಕಿಸಿದ್ದಾರೆ. ಪ್ರದೀಪ್ ಈಶ್ವರ್ ಮೇಲೆಯೂ ಕೇಸ್ ಹಾಕಿಸಿದ್ದಾರೆ. ಗೆದ್ದ ಮೇಲೆ ನನ್ನ ವೈಯಕ್ತಿಕ ಹಣದಿಂದ ಮೆರವಣಿಗೆ ಮಾಡಿದ್ದೆ. ಆದರೆ, ಆ ಬೃಹಸ್ಪತಿ ನನ್ನ ಮೇಲೆ ಕೇಸ್ ಹಾಕಿಸಿ‌ ಜೈಲಿಗೆ ಹಾಕಿದ್ದ. ಹೀಗಾಗಿ ದಯಮಾಡಿ ಕಾರ್ಯಕರ್ತರಿಗೆ ಬೆಂಬಲ ಕೊಡಬೇಕು. ನಮ್ಮ ಶ್ರಮದಿಂದ ಸುಧಾಕರ್ ಗೆದ್ದು, ಸಚಿವರಾಗಿ ನಮಗೆ ಮೋಸ ಮಾಡಿದ್ದಾನೆ. ಪ್ರದೀಪ್ ಈಶ್ವರ್‌ನನ್ನು ಕಾರ್ಯಕರ್ತರ‌ ಬೆಂಬಲದಿಂದ 20 ದಿನಗಳಲ್ಲಿ ಗೆಲ್ಲಿಸಿಕೊಂಡಿದ್ದೀವಿ, ಶಾಸಕರಿಗೆ ಈಗಾಗಲೇ ಅಧಿಕಾರ ಇದೆ. ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ನಿಗಮ ಮಂಡಳಿ ಸ್ಥಾನಮಾನ ಕೊಡಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ | Cauvery Dispute: ಕಾವೇರಿ ವಿಚಾರದಲ್ಲಿ ಸ್ಟಾಲಿನ್‌ ಉದ್ಧಟತನ; ತಮಿಳಿಗರನ್ನು ವಾಪಸ್‌ ಕರೆಸಿಕೊಳ್ಳಿ ಎಂದ ವಾಟಾಳ್

ಕಾಂಗ್ರೆಸ್ ಸಾಧನೆಗಳ ಬಗ್ಗೆ ಪ್ರಚಾರ ಮಾಡಿ: ಸಚಿವ ಎಂ.ಬಿ.ಪಾಟೀಲ್‌ ಕರೆ

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಈ ಬಾರಿ ನರೇಂದ್ರ ಮೋದಿಯವರನ್ನು ನೇರವಾಗಿ ಎದುರಿಸುವ ಚುನಾವಣೆ ಇರಲಿದೆ. ವಿಧಾನಸಭೆ ಚುನಾವಣೆ ಪ್ರಚಾರವೇ ಬೇರೆ, ಲೋಕಸಭಾ ಚುನಾವಣೆ ಪ್ರಚಾರವೇ ಬೇರೆ. ಕಾಂಗ್ರೆಸ್ 70 ವರ್ಷದಲ್ಲಿ ಏನು ಮಾಡಿದೆ, ಮೋದಿ ಏನು ಕೆಲಸ ಮಾಡಿದ್ದಾರೆ ಎಂಬುವುದನ್ನು ಜನರಿಗೆ ಹೇಳಬೇಕು. ಕಾಂಗ್ರೆಸ್ ಅವಧಿಯಲ್ಲಿ 90% ಡ್ಯಾಂ ಕಟ್ಟಲಾಗಿದೆ. ಮೋದಿ ಅವರ ಕಾಲದಲ್ಲಿ ಯಾವ ಸಂಸ್ಥೆ ಕೂಡ ನಿರ್ಮಾಣವಾಗಿಲ್ಲ. ಇಸ್ರೋ, ಎಚ್‌ಎಎಲ್, ಐಐಟಿ, ಎಚ್ಎಂಟಿಯಂತಹ ಸಂಸ್ತೆಗಳು ಕಾಂಗ್ರೆಸ್ ಕಾಲದಲ್ಲಿ ಆಗಿದ್ದು, ಆದರೆ, ಮೋದಿ ಸುಮ್ಮನೆ ಪ್ರಚಾರ ಮಾಡುತ್ತಾರೆ ಎಂದು ಹೇಳಿದರು.

Exit mobile version