Site icon Vistara News

ಚುನಾವಣೆಗೆ ಸಿದ್ಧತೆ: ನಾಯಕರ ಸರಣಿ ಸಭೆ ನಡೆಸಲಿರುವ ಕಾಂಗ್ರೆಸ್‌

ಕಾಂಗ್ರೆಸ್

ಬೆಂಗಳೂರು: ಚುನಾವಣೆಗೆ ಈಗಗಲೇ ಸಿದ್ಧತೆ ಆರಂಭಿಸಿರುವ ರಾಜ್ಯ ಕಾಂಗ್ರೆಸ್‌, ಒಂದರ ಹಿಂದೊಂದರಂತೆ ಪಕ್ಷದ ನಾಯಕರ ಸಭೆ ನಡೆಸುತ್ತಿದೆ. ಅಗಸ್ಟ್ 28 ಮತ್ತು 29 ರಂದು ಮತ್ತೆ ಸರಣಿ ಸಭೆ ನಡೆಸಲಿದೆ. ಮುಖ್ಯವಾಗಿ ಭಾರತ್‌ ಜೋಡೋ ಯಾತ್ರೆ, ಮುಂಬರುವ ಚುನಾವಣೆಗಳು ಮತ್ತು ಪಕ್ಷ ಸಂಘಟನೆ ಹಾಗೂ ಇನ್ನಿತರ ವಿಷಯಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ.

ಪಕ್ಷದ ರಾಜ್ಯ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲರ ಸಮ್ಮುಖದಲ್ಲಿ ಈ ಸಭೆಗಳು ನಡೆಯಲಿದ್ದು, ಮೊದಲಿಗೆ ಹಾಲಿ ಶಾಸಕರು, ಪರಿಷತ್ ಸದಸ್ಯರ ಸಭೆಯು ವಿಧಾನ ಸೌಧದಲ್ಲಿ ನಡೆಯಲಿದೆ. ನಂತರ ಕೆಪಿಸಿಸಿ ಪದಾಧಿಕಾರಿಗಳ ಹಾಗೂ ಜಿಲ್ಲಾಧ್ಯಕ್ಷರ ಸಭೆ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿದೆ.

ನಂತರ ಹಾಲಿ ಶಾಸಕರು, ಪರಿಷತ್ ಸದಸ್ಯರು, ಸಂಸದರು, ಮಾಜಿ ಸಂಸದರು, ಮಾಜಿ ಶಾಸಕರು, ಮಾಜಿ ಪರಿಷತ್ ಸದಸ್ಯರು, 2018 ರಲ್ಲಿ ಸೋತ ಅಭ್ಯರ್ಥಿಗಳು ಹಾಗು ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಸಲಾಗುತ್ತದೆ. ಚುನಾವಣೆ ಯಲ್ಲಿ ಗೆಲುವಿಗೆ ಮಾಡಬೇಕಾದ ತಂತ್ರಗಳು ಹಾಗೂ ಸಂಘಟನೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ವಿರೋಧಪಕ್ಷದನಾಯಕ ಬಿ ಕೆ ಹರಿಪ್ರಸಾದ್‌, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ ಬಿ ಪಾಟೀಲ್‌ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್‌ ಸಮಿತಿಯ ಪ್ರಕಟಣೆಯು ತಿಳಿಸಿದೆ.

ಇದನ್ನೂ ಓದಿ| ಭಾರತ್ ಜೋಡೋ ಪಾದಯಾತ್ರೆ ಉಸ್ತುವಾರಿ ಬಿಕೆಎಚ್‌ ಹೆಗಲಿಗೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌

Exit mobile version