ಬೆಂಗಳೂರು: ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಭಾರತ್ ಜೋಡೋ ಪಾದಯಾತ್ರೆಯ ಮಾರ್ಗದ ವಿಚಾರವಾಗಿ ಚರ್ಚೆ ನಡೆಯುತ್ತಿದ್ದು, ರಾಜ್ಯದಲ್ಲಿನ ಪಾದಯಾತ್ರೆಯ ಉಸ್ತುವಾರಿಯನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಪಾದಯಾತ್ರೆಯಲ್ಲಿ ನಿತ್ಯ ಎಷ್ಟು ದಿನ ನಡೆಯಬೇಕು, ಎಲ್ಲೆಲ್ಲಿಗೆ ಭೇಟಿ ನೀಡಬೇಕು ಎಂಬುವುದನ್ನು ಚರ್ಚಿಸಲಾಗುತ್ತಿದೆ. ಸೆ.7ರಂದು ರಾಜೀವ್ ಗಾಂಧಿ ಅವರ ಸಮಾಧಿಗೆ ನಮಿಸಿ, ಸಭೆ ನಡೆಸಿ ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಲಾಗುವುದು. ಇಡೀ ಕಾರ್ಯಕ್ರಮದ ಮಾಹಿತಿಯನ್ನು ಎಐಸಿಸಿ ಪ್ರಕಟಿಸಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಸೆಪ್ಟೆಂಬರ್ 2ಕ್ಕೆ ಕರ್ನಾಟಕಕ್ಕೆ ಮೋದಿ ಆಗಮನ?: ಚುನಾವಣೆ ಕಹಳೆ ಮೊಳಗುವ ನಿರೀಕ್ಷೆ
ರಾಜ್ಯದಲ್ಲಿ 510 ಕಿ.ಮೀ ದೂರ 21 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಕೆಲವು ಕಡೆ ಅರಣ್ಯ ಪ್ರದೇಶವಿದ್ದು, ಅಲ್ಲಿ ನಡೆಯಬೇಕೇ ಬೇಡವೇ ಎಂಬ ವಿಚಾರವಾಗಿ ಸ್ಥಳೀಯ ಪೋಲೀಸರ ಜತೆ ಚರ್ಚಿಸಿ ದೆಹಲಿಯ ತಂಡ ತೀರ್ಮಾನಿಸಲಿದೆ. ನಮ್ಮ ರಾಷ್ಟ್ರೀಯ ನಾಯಕರು ಇದರಲ್ಲಿ ಭಾಗವಹಿಸಲಿದ್ದು, ರಾಜ್ಯದ ಮಾಹಿತಿಯನ್ನು ಶೀಘ್ರದಲ್ಲಿ ತಿಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ 8 ಜಿಲ್ಲೆಗಳ ಮೂಲಕ ಈ ಪಾದಯಾತ್ರೆ ಸಾಗಲಿದ್ದು, ಬಳ್ಳಾರಿ ಹೊರತಾಗಿ ಚಿತ್ರದುರ್ಗ, ತುಮಕೂರು, ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಗಳ ಮಾರ್ಗವನ್ನು ಖುದ್ದಾಗಿ ನೋಡಿದ್ದೇನೆ. ಇಡೀ ರಾಜ್ಯದ ಕಾರ್ಯಕರ್ತರು ಹಾಗೂ ಮುಖಂಡರು ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ವಿವಿಧ ಜಿಲ್ಲಾ ನಾಯಕರಿಗೂ ಕೆಲ ಜವಾಬ್ದಾರಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತವನ್ನು ಒಗ್ಗೂಡಿಸಲು, ಶಾಂತಿ, ಸೌಹಾರ್ದತೆ ಸ್ಥಾಪಿಸಿ, ಜನರ ಸಮಸ್ಯೆಯನ್ನು ಚರ್ಚೆ ಮಾಡಲು ದೇಶದಾದ್ಯಂತ ಸುಮಾರು 600ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಸೇರಿ ಚರ್ಚೆ ಮಾಡಿದ್ದಾರೆ. ಅದರಂತೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗಾಗಿ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ. ಪಾದಯಾತ್ರೆ ಮಾಡಬೇಕು ಎಂಬ ಸೂಚನೆ ನೀಡಲಾಗಿತ್ತು. ಆದರೆ ನಮ್ಮ ನಾಯಕರು ಜಿಲ್ಲೆಯಲ್ಲಿ ಅಲ್ಲ, ಕ್ಷೇತ್ರದಲ್ಲೇ 200 ಕಿ.ಮೀ. ದೂರ ಪಾದಯಾತ್ರೆ ಮಾಡಿದ್ದಾರೆ. ಜಿಲ್ಲಾ ಮಟ್ಟದ ಪಾದಯಾತ್ರೆ ಅವಧಿಯನ್ನು ಆಗಸ್ಟ್ 30 ರವರೆಗೆ ವಿಸ್ತರಣೆ ಮಾಡಲಾಗಿದೆ. ನಾವು ಜನರ ಸಮಸ್ಯೆಯನ್ನು ಆಲಿಸುತ್ತಿದ್ದೇವೆ ಎಂದು ನಮ್ಮ ನಾಯಕರು ತಿಳಿಸಿದ್ದಾರೆ. ಉಳಿದಂತೆ 15 ರಂದು ರಾಜ್ಯಮಟ್ಟದಲ್ಲಿ ತಿರಂಗಾ ಯಾತ್ರೆ ಮಾಡಿದ್ದೇವೆ. ಆ ಮೂಲಕ ಉದಯಪುರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ನಾವು ಶೀಘ್ರದಲ್ಲೇ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಕರೆದು ಭಾರತ್ ಜೋಡೋ ಕಾರ್ಯಕ್ರಮದ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಅದಕ್ಕೂ ಮೊದಲು ಈಗ ಪ್ರಾಥಮಿಕವಾಗಿ ಬಿ.ಕೆ. ಹರಿಪ್ರಸಾದ್ ದೆಹಲಿ ತಂಡದ ಜತೆ ಚರ್ಚೆ ಮಾಡುತ್ತಿದ್ದಾರೆ. ಪಾದಯಾತ್ರೆ ಹಾದು ಹೋಗುವ ಜಿಲ್ಲೆಗಳ ನಾಯಕರನ್ನು ಕರೆದು ಚರ್ಚೆ ಮಾಡುತ್ತೇವೆ. ಸ್ಥಳೀಯರು ಈ ಪಾದಯಾತ್ರೆಯಲ್ಲಿ ಯಾವ ರೀತಿ ಭಾಗವಹಿಸಬೇಕು ಎಂಬ ಬಗ್ಗೆ ಮುಂದೆ ತಿಳಿಸುತ್ತೇವೆ ಎಂದರು.
ಇದನ್ನೂ ಓದಿ | ಪುದುಚೇರಿಯಲ್ಲಿ ದಿನೇಶ್ ಗುಂಡೂರಾವ್‌ಗೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ; ಕಾರಿಗೆ ಹಾನಿ