Site icon Vistara News

ಗುಲಾಂ ನಬಿ ಆಜಾದ್ ಉಪಕಾರ ಸ್ಮರಣೆ ಮರೆತಿರುವುದು ಖಂಡನೀಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌

ಡಿ.ಕೆ.ಶಿವಕುಮಾರ್‌

ಬೆಂಗಳೂರು: 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲ ಅಧಿಕಾರ ಅನುಭವಿಸಿದ ಗುಲಾಂ ನಬಿ ಆಜಾದ್ ಅವರು ಪಕ್ಷಕ್ಕೆ ಶಕ್ತಿ ತುಂಬ ಬೇಕಾದ ಹೊತ್ತಿನಲ್ಲಿ ಉಪಕಾರ ಸ್ಮರಣೆ ಮರೆತಿರುವುದು ಖಂಡನೀಯ. ದೇಶ ಕಷ್ಟ ಕಾಲದಲ್ಲಿರುವಾಗ, ಎಲ್ಲರನ್ನೂ ಒಂದುಗೂಡಿಸಿ ದೇಶದಲ್ಲಿ ಐಕ್ಯತೆ, ಸಮಗ್ರತೆ, ಶಾಂತಿ ತರಲು ನಾವೆಲ್ಲ ಹೋರಾಟ ಮಾಡುವಾಗ ಅವರು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ಆ ಮೂಲಕ ಹೆತ್ತ ತಾಯಿಗೆ ದ್ರೋಹ ಬಗೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಸ್ಥಾನದ ಉದಯಪುರದಲ್ಲಿ ನಡೆದ ಚಿಂತನಾ ಶಿಬಿರದಲ್ಲಿ 600 ಜನ ನಾಯಕರು ಚರ್ಚೆ ಮಾಡಿ ಭಾರತವನ್ನು ಯಾವ ರೀತಿ ಉಳಿಸಬೇಕು, ಮುಂದೆ ತೆಗೆದುಕೊಂಡು ಹೋಗಬೇಕು ಎಂದು ತೀರ್ಮಾನಿಸಲಾಗಿತ್ತು. ಆ ಸಭೆಯಲ್ಲಿ ಗುಲಾಂ ನಬಿ ಆಜಾದ್ ಅವರ ಪಾತ್ರವೂ ಪ್ರಮುಖವಾಗಿತ್ತು. ಆದರೆ ಅವರು ಈಗ ರಾಜೀನಾಮೆ ನೀಡಿದ್ದು, ಐದು ಪುಟಗಳ ರಾಜೀನಾಮೆ ಪತ್ರದಲ್ಲಿ ಅನೇಕ ವಿಚಾರ ಪ್ರಸ್ತಾಪಿಸಿದ್ದಾರೆ ಎಂದರು.‌

ಇದನ್ನೂ ಓದಿ | Congress Party | ಕಿರಿಯರಿಗೆ ಬೆಲೆಯಿಲ್ಲ, ಹಿರಿಯರಿಗೆ ನೆಲೆಯಿಲ್ಲ; ಯಾರಿಗೆ ಸಲ್ಲುವ ಪಕ್ಷವಾಗಿ ಉಳೀತು ಕಾಂಗ್ರೆಸ್​?

ಆಜಾದ್‌ ಅವರು 1977ರಿಂದ 2022ರವೆರೆಗೆ ಸುಮಾರು 50 ವರ್ಷ ಕಾಂಗ್ರೆಸ್‌ನಲ್ಲಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಕಾರಣ ಆರಂಭಿಸಿ ಅವರು ಎಲ್ಲ ಪ್ರಮುಖ ವಿಭಾಗದಲ್ಲಿ ಕೆಲಸ ಮಾಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜತೆಗೆ 20 ವರ್ಷಗಳ ಕಾಲ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ರಾಜ್ಯ ಸಭೆ ಹಾಗೂ ಲೋಕಸಭೆ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದಾರೆ. ಅವರಿಗೆ ರಾಜಕೀಯದಲ್ಲಿ ಇಷ್ಟು ದೊಡ್ಡ ಹೆಸರು ಬರಬೇಕಾದರೆ ಅದಕ್ಕೆ ಕಾಂಗ್ರೆಸ್ ಪಕ್ಷ, ಗಾಂಧಿ ಕುಟುಂಬ ಕಾರಣ. ಇಷ್ಟಾದರೂ ರಾಜೀನಾಮೆ ತೀರ್ಮಾನ ಮಾಡಿದ್ದಾರೆ. ಅವರಿಗೆ ಏನೆಂದು ಹೇಳಬೇಕೋ ಮಾಧ್ಯಮದವರೇ ವಿಶ್ಲೇಷಿಸಬೇಕು ಎಂದರು.

ಆಜಾದ್ ಅವರ ತೀರ್ಮಾನದಿಂದ ಕೆ.ಎಚ್.ಮುನಿಯಪ್ಪ, ವೀರಪ್ಪ ಮೋಯ್ಲಿ ಸೇರಿ ಬೇರೆ ನಾಯಕರು ಪ್ರಭಾವಿತರಾಗುವರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ರಾಜ್ಯ ನಾಯಕರು ಈ ರೀತಿ ಮಾಡುವುದಿಲ್ಲ. ಒಂದು ವೇಳೆ ಮಾಡಿದರೆ, ಕಾಂಗ್ರೆಸ್ ಪಕ್ಷದ ಹೊರತಾಗಿ ಅವರು ಶೂನ್ಯವಾಗುತ್ತಾರೆ. ಮುನಿಯಪ್ಪ, ಮೋಯ್ಲಿ ಅವರ ಹಿರಿತನವನ್ನು ಕಾಂಗ್ರೆಸ್ ಪಕ್ಷ ಗೌರವಿಸಲಿದೆ ಎಂದು ಅವರಿಗೆ ಅರಿವಿದೆ. ಅವರು ಸಾಕಷ್ಟು ಸಲಹೆ ನೀಡಿದ್ದಾರೆ. ಏನೇ ಭಿನ್ನಾಭಿಪ್ರಾಯ ಇದ್ದರೂ ಇಂತಹ ತೀರ್ಮಾನ ಕೈಗೊಳ್ಳುವುದಿಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ದುಷ್ಪರಿಣಾಮ ಬೀರುವುದಿಲ್ಲ. ಬದಲಿಗೆ ಕಾಂಗ್ರೆಸ್ ಬಲಿಷ್ಠವಾಗಿ ಬೆಳೆಯಲಿದೆ. ಆಜಾದ್ ಅಂತಹವರು, ನಮ್ಮಂತಹವರು ಕಾಂಗ್ರೆಸ್ ಪಕ್ಷ ಮುಳುಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸಾವಿರಾರು ನಾಯಕರನ್ನು ಹುಟ್ಟು ಹಾಕಿದೆ. ಹಲವರು ಬರುತ್ತಾರೆ, ಹೋಗುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ | ಕಾಂಗ್ರೆಸ್​​ಗೆ ಮತ್ತಷ್ಟು ಹಿನ್ನಡೆ; ಗುಲಾಂ ನಬಿ ಆಜಾದ್​ ಬೆನ್ನಲ್ಲೇ ಮತ್ತೂ ಐವರು ಪ್ರಮುಖರ ರಾಜೀನಾಮೆ

Exit mobile version