ಬೆಂಗಳೂರು: ಬಿಜೆಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುಮಾರು 819 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಅಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಕರ್ನಾಟಕದ ಇಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಭಾಗಿಯಾಗಿದ್ದಾರೆ. ಇಷ್ಟು ದೊಡ್ಡಮಟ್ಟದ ಹಣ ಲೂಟಿ ಮಾಡಿದ ರಮೇಶ್ ಜಾರಕಿಹೊಳಿಗೆ ಇದುವರೆಗೆ ಒಂದೇ ಒಂದು ನೋಟಿಸ್ ಕೂಡ ಕೊಡಲಾಗಿಲ್ಲ ಎಂದೂ ಲಕ್ಷ್ಮಣ್ ಹೇಳಿದ್ದಾರೆ.
ಗೋಕಾಕ್ ತಾಲೂಕಿನಲ್ಲಿ ಸೌಭಾಗ್ಯ ಲಕ್ಷ್ಮೀ ಶುಗರ್ ಲಿಮಿಟೆಡ್ ಎಂಬ ಸಕ್ಕರೆ ಕಾರ್ಖಾನೆಯಿದೆ. ಇದಕ್ಕೆ ಒಟ್ಟು ಆರು ಮಂದಿ ನಿರ್ದೇಶಕರಿದ್ದು, ಅದರಲ್ಲಿ ನಾಲ್ವರು ರಮೇಶ್ ಜಾರಕಿಹೊಳಿ ಕುಟುಂಬದವರೇ (ರಮೇಶ್ ಜಾರಕಿಹೊಳಿ, ಅವರ ಪುತ್ರ, ಸೊಸೆ ಮತ್ತು ಮಗಳು) ಆಗಿದ್ದಾರೆ. ಇನ್ನಿಬ್ಬರು ಬೇನಾಮಿಗಳಾಗಿದ್ದು ರಮೇಶ್‌ಗೆ ತುಂಬ ಹತ್ತಿರದವರು. ಈ ಸೌಭಾಗ್ಯ ಲಕ್ಷ್ಮೀ ಶುಗರ್ ಲಿಮಿಟೆಡ್‌ನವರು ಯಾವೆಲ್ಲ ಬ್ಯಾಂಕ್‌ಗೆ ಎಷ್ಟು ಸಾಲ ಕೊಡುವುದು ಬಾಕಿ ಇದೆ ಎಂಬುದನ್ನು ಅವರೇ ತಮ್ಮ ಲೆಟರ್‌ಹೆಡ್‌ನಲ್ಲಿ ಬರೆದು ಇಂಟರ್ ಬ್ಯುಸಿನೆಸ್ ಪ್ರೊಸೆಸಸ್‌ನ ಆರ್ಬಿಟ್ರೇಟರ್‌ಗೆ ಸಲ್ಲಿಸಿರುವ ದಾಖಲೆಯನ್ನೇ ನಾನಿಲ್ಲಿ ಬಿಡುಗಡೆ ಮಾಡುತ್ತಿದ್ದೇನೆ. ಅದರ ಅನ್ವಯ ಏಳೆಂಟು ಬ್ಯಾಂಕ್‌ಗಳಿಗೆ ಅವರು ಕೋಟ್ಯಂತರ ರೂಪಾಯಿ ಸಾಲ ಮರುಪಾವತಿ ಮಾಡುವುದು ಬಾಕಿ ಇದೆ ಎಂದು ಹೇಳಿದ ಲಕ್ಷ್ಮಣ್, ಸೌಭಾಗ್ಯ ಲಕ್ಷ್ಮೀ ಶುಗರ್ ಕಾರ್ಖಾನೆ ಯಾವ ಬ್ಯಾಂಕ್‌ಗಳಿಗೆ ಎಷ್ಟು ಹಣ ಕೊಡಬೇಕು ಎಂಬುದನ್ನೂ ವಿವರಿಸಿದರು.
ರಮೇಶ್ ಜಾರಕಿಹೊಳಿಯ ಸಕ್ಕರೆ ಕಾರ್ಖಾನೆ ವಿವಿಧ ಡಿಸಿಸಿ ಬ್ಯಾಂಕ್‌ಗಳಿಂದ ಸಾಲ ಪಡೆಯುವ ಜತೆ , ರೈತರಿಗೆ ೫೦ ಕೋಟಿ ರೂಪಾಯಿ ಸಾಲ ನೀಡಬೇಕು. ಗುತ್ತಿಗೆ ದಾರರಿಗೆ ೫ ಕೋಟಿ ರೂ, ಪೂರೈಕೆದಾರರಿಗೆ ೫೦ ಕೋಟಿ ರೂಪಾಯಿ ಕೊಡಬೇಕು. ಅಷ್ಟೇ ಅಲ್ಲ, ೨೦೧೧ರಿಂದ ೨೦೨೨ರವರೆಗೆ ಒಟ್ಟು ೧೫೬ ಕೋಟಿ ರೂಪಾಯಿ ಆದಾಯ ತೆರಿಗೆ ಬಾಕಿ ಇದೆ. ಇದನ್ನೂ ನಾನು ಹೇಳುತ್ತಿರುವುದಲ್ಲ. ಆದಾಯ ತೆರಿಗೆ ಇಲಾಖೆಯ ಬೆಳಗಾವಿ ಅಸಿಸ್ಟೆಂಟ್ ಕಮಿಷನರ್, ಶುಗರ್ ಕಾರ್ಖಾನೆಯ ಆರ್ಬಿಟ್ರೇಟರ್‌ಗೆ ಈ ಬಗ್ಗೆ ಉಲ್ಲೇಖಿಸಿ ಬರೆದಿರುವ ಪತ್ರವೂ ನನ್ನ ಬಳಿ ಇದೆ ಎಂದು ಹೇಳಿದ ಲಕ್ಷ್ಮಣ್, ಇದೆಲ್ಲವೂ ಸೇರಿ ರಮೇಶ್ ಜಾರಕಿಹೊಳಿ ಒಟ್ಟಾರೆ ೮೧೯ ಕೋಟಿ ರೂಪಾಯಿಗಳಷ್ಟು ವಂಚನೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
2019ರಲ್ಲಿ ಸೌಭಾಗ್ಯ ಲಕ್ಷ್ಮೀ ಶುಗರ್ ಕಾರ್ಖಾನೆಗೆ ಅಪೆಕ್ಸ್ ಬ್ಯಾಂಕ್ ಒಂದು ನೋಟಿಸ್ ಕೊಡುತ್ತದೆ. ಅದರ ಅಧ್ಯಕ್ಷ ಬಿಜೆಪಿ ಮುಖಂಡ ಬೆಳ್ಳಿ ಪ್ರಕಾಶ್. ನೀವು ಡಿಸಿಸಿ ಬ್ಯಾಂಕ್‌ಗಳಿಂದ ತೆಗೆದುಕೊಂಡ ಸಾಲಗಳನ್ನು ಮರುಪಾವತಿ ಮಾಡದೆ ಇರುವ ಕಾರಣಕ್ಕೆ ನಿಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕುವ ಬಗ್ಗೆ ನಾವ್ಯಾಕೆ ನಿರ್ಧಾರ ಕೈಗೊಳ್ಳಬಾರದು ಎಂದು ನೋಟಿಸ್‌ನಲ್ಲಿ ಉಲ್ಲೇಖವಿರುತ್ತದೆ. ಆದರೆ ಆ ನೋಟಿಸ್ ವಿರುದ್ಧ ರಮೇಶ್ ಜಾರಕಿಹೊಳಿ ಕೋರ್ಟ್ ಮೆಟ್ಟಿಲೇರುತ್ತಾರೆ. ಆಗ ಮೊದಲು ಸಾಲದ ಅರ್ಧದಷ್ಟು ಪಾವತಿ ಮಾಡಿ ಎಂದು ನ್ಯಾಯಾಲಯ ಸೂಚನೆ ನೀಡುತ್ತದೆ. ಆದರೆ ಆ ಆದೇಶವನ್ನು ಶುಗರ್ ಕಾರ್ಖಾನೆಯ ಪ್ರಮುಖರು ಪಾಲಿಸದೆ ಇದ್ದಾಗ ಬೆಳ್ಳಿ ಪ್ರಕಾಶ್ ಮತ್ತೆ ಬೆಳಗಾವಿಯ ಜಿಲ್ಲಾಧಿಕಾರಿಗೆ ಪತ್ರ ಬರೆದು, ʼಸಕ್ಕರೆ ಕಾರ್ಖಾನೆಯವರು ಕೋರ್ಟ್‌ನ ಆದೇಶ ಪಾಲನೆ ಮಾಡಲಿಲ್ಲ. ಅರ್ಧದಷ್ಟು ಸಾಲ ಪಾವತಿ ಮಾಡದೆ ಇರುವ ಕಾರಣಕ್ಕೆ ಅವರ ಆಸ್ತಿಗಳನ್ನು ಸ್ವಾಧೀನಕ್ಕೆ ಪಡೆಯಲು ಕ್ರಮ ಕೈಗೊಳ್ಳಿʼ ಎಂದು ಹೇಳುತ್ತಾರೆ. ಆದರೆ ಜಿಲ್ಲಾಧಿಕಾರಿ ಇವತ್ತಿನವರೆಗೆ ಏನೂ ಮಾಡಿಲ್ಲ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.
ಈ ಶುಗರ್ ಕಾರ್ಖಾನೆ ಆಸ್ತಿ ಮೌಲ್ಯ 900 ಕೋಟಿ ರೂಪಾಯಿಗೂ ಹೆಚ್ಚು. ಆದರೆ ಅದು ನಷ್ಟದಲ್ಲಿದೆ ಎಂದು ಘೋಷಿಸಿಕೊಂಡಿದ್ದಾರೆ. ಆದರೂ ಕಬ್ಬು ಅರೆಯುವ ಕಾಯಕ ಮುಂದುವರಿದಿದ್ದು, ಅದರ ಲಾಭವನ್ನೆಲ್ಲ ಕಾರ್ಖಾನೆಯ ಮಂಡಳಿಯೇ ಪಡೆಯುತ್ತಿದೆ ಹೊರತು ಸಾಲ ತೀರಿಸಿಲ್ಲ . ಇಷ್ಟೆಲ್ಲ ಆದರೂ ರಮೇಶ್ ಜಾರಕಿಹೊಳಿ ಮೇಲೆ ಇ.ಡಿ. ಮತ್ತು ಐ.ಟಿ. ದಾಳಿಯಾಗಿಲ್ಲ. ಕೇಂದ್ರ ಸರ್ಕಾರ ಏನು ಮಾಡುತ್ತಿದೆ? ರಮೇಶ್ ಜಾರಕಿಹೊಳಿಯಿಂದಲೇ ಕರ್ನಾಟದಲ್ಲಿ ಬಿಜೆಪಿ ಸರ್ಕಾರ ಬಂತು ಎಂದು ಹಾಗೇ ಬಿಟ್ಟಿದ್ದಾರಾ? ಅವರ ಅಕ್ರಮಗಳು ಕಣ್ಣಿಗೆ ಕಾಣುತ್ತಿಲ್ಲವಾ? ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲೇ ಇದ್ದಿದ್ದರೆ ಅವರನ್ನು ಬಿಡುತ್ತಿದ್ದರಾ ಎಂದು ಕೆಪಿಸಿಸಿ ವಕ್ತಾರ ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ವಿರುದ್ಧವೂ ಆರೋಪ
ಇದೇ ವೇಳೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಕುಮಾರಸ್ವಾಮಿ ವಿರುದ್ಧವೂ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರವಿದ್ದಾಗ ಸಿಎಂ ಕುಮಾರಸ್ವಾಮಿ ಗಮನಕ್ಕೂ ಈ ಅಕ್ರಮ ಬಂದಿದೆ. ಆದರೆ ಕುಮಾರಸ್ವಾಮಿಗೆ ರಮೇಶ್ ಜಾರಕಿಹೊಳಿ ಎಂದರೆ ಅದೇನೋ ಸಾಫ್ಟ್ ಕಾರ್ನರ್. ಹಾಗಾಗಿ ಅವರು ನೋಟಿಸ್ ಕೊಡುವ ಕೆಲಸವನ್ನು ಮಾಡಲಿಲ್ಲ. ಕ್ರಮಕ್ಕೂ ಮುಂದಾಗಲಿಲ್ಲ. ಬಹುಶಃ ಅವರಿಗೂ ಇದರಲ್ಲಿ ದುಡ್ಡು ಹೋಗಿರಬಹುದು ಎಂದು ಹೇಳಿದರು.
ಇದನ್ನೂ ಓದಿ: Maha politics | ಫಡ್ನವೀಸ್ ಬುಲಾವ್, ಮಹಾರಾಷ್ಟ್ರಕ್ಕೆ ಇಂದು ಮತ್ತೆ ರಮೇಶ್ ಜಾರಕಿಹೊಳಿ ದೌಡು