ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿಯಲ್ಲಿ (KPTCL Scam) ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಮತ್ತೂ ನಾಲ್ವರನ್ನು ಗೋಕಾಕ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂಡಲಗಿಯ ಮಂಜುನಾಥ ರಾಮಪ್ಪ ಮಾಳಿ (23), ಅರಭಾಂವಿಯ ಪುಂಡಲೀಕ ಫಕೀರಪ್ಪ ಬನಾಜ (26), ಮೂಡಲಗಿಯ ಮಹಾದೇವ ಹಣಮಂತ ದಾಸನಾಳ (26), ಮಾರುತಿ ರಾಮಣ್ಣ ಹೊಲದವರ (27) ಬಂಧಿತ ಆರೋಪಿಗಳಾಗಿದ್ದಾರೆ.
ಈ ಮೂಲಕ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದವರಲ್ಲಿ ಬಂಧಿತರ ಸಂಖ್ಯೆ 33ಕ್ಕೆ ಏರಿಕೆಯಾದಂತೆ ಆಗಿದೆ. ಈ ಎಲ್ಲರೂ ಎಲೆಕ್ಟ್ರಾನಿಕ್ ಡಿವೈಸ್, ಮೈಕ್ರೋಚಿಪ್ ಬಳಸಿ ಪರೀಕ್ಷೆ ಬರೆದಿದ್ದರು ಎಂಬ ಮಾಹಿತಿ ಇದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ತಿಂಗಳು ಗೋಕಾಕ ತಾಲೂಕಿನ ಉಪ್ಪಾರಟ್ಟಿ ಗ್ರಾಮದ ಭೀಮಪ್ಪ ಸಿದ್ದಪ್ಪ ಗುದಿಗೊಪ್ಪ (30) ಎಂಬಾತನ್ನು ಪೊಲೀಸರು ಬಂಧಿಸಿದ್ದರು. ಈತನಿಂದ 6 ಮೊಬೈಲ್, 1 ಲ್ಯಾಪ್‌ಟಾಪ್, 3 ಇಲೆಕ್ಟ್ರಾನಿಕ್ ಡಿವೈಸ್, ಕಾರೊಂದನ್ನು ಜಪ್ತಿ ಮಾಡಲಾಗಿತ್ತು.
ಏನಿದು ಪ್ರಕರಣ?
ಗೋಕಾಕ ಜಿಎಸ್ಎಸ್ ಪರೀಕ್ಷಾ ಕೇಂದ್ರದಲ್ಲಿ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಸಂಬಂಧ ಆ.7ರಂದು ನಡೆದ ಪರೀಕ್ಷೆಯ ವೇಳೆ ಅಕ್ರಮ ನಡೆದಿತ್ತು. ಸಿದ್ದಪ್ಪ ಮದಿಹಳ್ಳಿ ಎಂಬಾತ ಸ್ಮಾರ್ಟ್ ವಾಚ್ ಬಳಸಿ ಪ್ರಶ್ನೆಪತ್ರಿಕೆಯನ್ನು ಹೊರಗೆ ರವಾನಿಸಿದ್ದ. ಸಿಸಿ ಟಿವಿ ಫೂಟೇಜ್ ಆಧರಿಸಿ ಬೆಳಕಿಗೆ ಬಂದಿದ್ದ ಪ್ರಕರಣದಲ್ಲಿ ಆಗಸ್ಟ್ 10ರಂದು ಸಿದ್ದಪ್ಪ ಮದಿಹಳ್ಳಿಯನ್ನು ಬಂಧಿಸಲಾಗಿತ್ತು. ಸಿದ್ದಪ್ಪ ಅಕ್ರಮ ಎಸಗುವ ದೃಶ್ಯ ಪರೀಕ್ಷಾ ಕೇಂದ್ರದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮುಂದೆ ಆ. 23ರಂದು ಒಂಬತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಮುಂದೆ ಬಳಿಕ ಹಂತ ಹಂತವಾಗಿ ಆರೋಪಿಗಳನ್ನು ಜಿಲ್ಲಾ ಪೊಲೀಸರು ಸೆರೆ ಹಿಡಿಯುತ್ತಾ ಬಂದಿದ್ದು, ಈಗ ಒಟ್ಟಾರೆಯಾಗಿ ೩೩ ಮಂದಿಯನ್ನು ಬಂಧಿಸಿದಂತಾಗಿದೆ.