Site icon Vistara News

KPTCL Strike : ಮಾ.16 ರಿಂದ ಕೆಪಿಟಿಸಿಎಲ್‌ ನೌಕರರ ಮುಷ್ಕರ ಖಚಿತ; ಎನ್‌ಪಿಎಸ್‌ ನೌಕರರ ಬೆಂಬಲ

KPTCL

ಬೆಂಗಳೂರು: ವೇತನ ಪರಿಷ್ಕರಣೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಲ್‌) ಮತ್ತು ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳ (ಎಸ್ಕಾಂಗಳ) (KPTCL Strike) ಅಧಿಕಾರಿಗಳು ಮತ್ತು ನೌಕರರು ಮಾ. 16ರಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.

ಇಂದರಿಂದ ರಾಜ್ಯಾದ್ಯಂತ ವಿದ್ಯುತ್‌ ಪೂರೈಕೆ ಮತ್ತು ಸಂಬಂಧಿಸಿದ ಸೇವೆಗಳಲ್ಲಿ ಅಡಚಣೆಯುಂಟಾಗುವ ಸಾಧ್ಯತೆಗಳಿವೆ. ಕಂಪನಿಯ ಮತ್ತು ನಿಗಮದ ಒಟ್ಟು 60 ಸಾವಿರ ಸಿಬ್ಬಂದಿ ಈ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ ಎಂದು ಕೆಪಿಟಿಸಿಎಲ್‌ ನೌಕರರ ಸಂಘದ ಮತ್ತು ಒಕ್ಕೂಟದ ಅಧ್ಯಕ್ಷ ಆರ್‌ ಎಚ್‌. ಲಕ್ಷ್ಮೀಪತಿ ʻವಿಸ್ತಾರ ನ್ಯೂಸ್‌ʼಗೆ ತಿಳಿಸಿದ್ದಾರೆ.

ಕಳೆದ ಶನಿವಾರ ನಡೆದ ಸಭೆಯ ತೀರ್ಮಾನದಂತೆ ಈ ಮುಷ್ಕರ ನಡೆಸುವುದು ಖಚಿತ. ಇದಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಮುಷ್ಕರದಲ್ಲಿ ಎಲ್ಲ ಅಧಿಕಾರಿಗಳು, ಎಂಜಿನಿಯರ್‌ಗಳು ಹಾಗೂ ಎಲ್ಲ ವೃಂದದ ನೌಕರರು ಭಾಗವಹಿಸಲಿದ್ದಾರೆ. ಇದರಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯಗಳಾದರೆ ಇದಕ್ಕಾಗಿ ಸರ್ವಾಜನಿಕರಲ್ಲಿ ನಾವು ಕ್ಷಮೆ ಯಾಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಬೇಡಿಕೆಗಳೇನು?
* ವೇತನ ಪರಿಷ್ಕರಣೆ ಮಾಡಬೇಕು. ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ಪರಿಷ್ಕರಣೆಯನ್ನು ಏಪ್ರಿಲ್‌ 1ರಿಂದ ಜಾರಿಗೆ ತರಬೇಕು.
* ವಿದ್ಯುತ್ ಕಂಪನಿಗಳ ಖಾಸಗೀಕರಣವನ್ನು ಉದ್ದೇಶವಾಗಿ ಇಟ್ಟುಕೊಂಡಿರುವ ಪ್ರಸ್ತಾವಿತ ಮಸೂದೆಯನ್ನು ಸರ್ಕಾರ ತಕ್ಷಣವೇ ಹಿಂದೆಗೆದುಕೊಳ್ಳಬೇಕು.
* ಖಾಲಿ ಇರುವ ಹುದ್ದೆಗಳನ್ನು ಬಹಳ ವರ್ಷಗಳಿಂದ ಭರ್ತಿ ಮಾಡದ್ದರಿಂದ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಹೀಗಾಗಿ ತಕ್ಷಣವೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.
* ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ನೌಕರರಿಗೆ ಅನುಕೂಲವಾಗಿರುವ ಹಳೇ ಪಿಂಚಣಿ ವ್ಯವಸ್ಥೆಯನ್ನೇ ಮರು ಜಾರಿಗೊಳಿಸಬೇಕು
* ನೌಕರರಿಗೆ ಕ್ಯಾಶ್ ಲೆಸ್ ಆರೋಗ್ಯ ವಿಮೆ ಒದಗಿಸಬೇಕು.

ಈಗಾಗಲೇ ನಾವು ವೇತನ ಪರಿಷ್ಕರಣೆ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಕೆಪಿಟಿಸಿಎಲ್‌ ಆಡಳಿತ ಮಂಡಳಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ನಮ್ಮ ಬೇಡಿಕೆಯ ಕುರಿತು ತೀರ್ಮಾನ ತೆಗೆದುಕೊಳ್ಳುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಹೀಗಾಗಿ ಶಾಂತಿಯುತವಾಗಿ ಕರ್ತವ್ಯಕ್ಕೆ ಗೈರಾಗುವ ಹೋರಾಟ ನಡೆಸುತ್ತೇವೆ. ಸರ್ಕಾರ ನಮ್ಮ ನ್ಯಾಯಾಯುತ ಬೇಡಿಕೆಗಳನ್ನು ಈಡೇರಿಸುವವರೆಗೂ ಈ ಹೋರಾಟ ನಡೆಯಲಿದೆ ಎಂದು ಲಕ್ಷ್ಮೀಪತಿ ಹೇಳಿದ್ದಾರೆ.

ಕೆಇಬಿ ಎಂಜಿನಿಯರುಗಳ ಸಂಘ, ಕೆಇಬಿ ಎಸ್‌.ಸಿ/ಎಸ್‌.ಟಿ ನೌಕರರ ಕಲ್ಯಾಣ ಸಂಸ್ಥೆ, ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘ, ಕವಿಪ್ರನಿನಿ ಡಿಪ್ಲಮೊ ಎಂಜಿನಿಯರುಗಳ ಸಂಘ ಸೇರಿದಂತೆ ಕೆಪಿಟಿಸಿಎಲ್‌ನ ನೌಕರರ ಎಲ್ಲ ಸಂಘಟನೆಗಳು ಈ ಹೋರಾಟದಲ್ಲಿ ಭಾಗಿಯಾಗುವುದಾಗಿ ಈಗಾಗಲೇ ಪ್ರಕಟಿಸಿವೆ.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ಎನ್‌ಪಿಎಸ್‌ ನೌಕರರ ಬೆಂಬಲ

ವೇತನ ಪರಿಷ್ಕರಣೆಗೆ ಒತ್ತಾಯಿಸಿ ಕೆಪಿಟಿಸಿಎಲ್‌ ಹಾಗೂ ಎಸ್ಕಾಂಗಳ ಅಧಿಕಾರಿಗಳು/ನೌಕರರು ನಡೆಸಲಿರುವ ಮುಷ್ಕರಕ್ಕೆ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘವು ಬೆಂಬಲ ಘೋಷಿಸಿದೆ.

ಎನ್‌ಪಿಎಸ್‌ ನೌಕರರು ನಡೆಸುತ್ತಿರುವ ಹೋರಾಟಕ್ಕೆ ಕೆಪಿಟಿಸಿಎಲ್‌ ಹಾಗೂ ಎಸ್ಕಾಂಗಳ ನೌಕರರು ಬೆಂಬಲ ನೀಡುತ್ತಲೇ ಬಂದಿದ್ದಾರೆ. ಹೀಗಾಗಿ ಈಗ ಅವರು ನಡೆಸುತ್ತಿರುವ ಹೋರಾಟಕ್ಕೆ ಎನ್‌ಪಿಎಸ್‌ ನೌಕರರ ಸಂಘವು ಬೆಂಬಲ ನೀಡುವುದರ ಜತೆಗೆ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಲಿದೆ ಎಂದು ರಾಜ್ಯ ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: KSRTC: ನೌಕರರ ವೇತನ ಪರಿಷ್ಕರಣೆ ಮಾಡುವಂತೆ ನಾಲ್ಕು ಸಾರಿಗೆ ನಿಗಮ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್

Exit mobile version