Site icon Vistara News

KR Market Flyover: ನೋಟು ಎಸೆದವನಿಗೆ ಪೊಲೀಸ್‌ ನೋಟಿಸ್‌; ಇಷ್ಟೆಲ್ಲ ಮಾಡಿದ್ದಕ್ಕೆ ನೂರೇ ರೂಪಾಯಿ ದಂಡ!

ಬೆಂಗಳೂರು: ಕೆ.ಆರ್. ಮಾರುಕಟ್ಟೆ ಫ್ಲೈಓವರ್‌ (KR Market Flyover) ಮೇಲಿಂದ ಹಣ ಎಸೆದು ಸುದ್ದಿಯಾಗಿದ್ದ ಅರುಣ್‌, ಪೊಲೀಸರ ಕಂಡೊಡನೆ ಸ್ಥಳದಿಂದ ಕಾಲ್ಕಿತ್ತಿದ್ದ. ಇದೀಗ ಸಾರ್ವಜನಿಕ ಸ್ಥಳದಲ್ಲಿ ನ್ಯೂಸೆನ್ಸ್‌ ಕ್ರಿಯೇಟ್‌ ಮಾಡಿದವನಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ಜತೆಗೆ ಆತನ ಮೇಲೆ ಕೇಸ್‌ ಕೂಡ ದಾಖಲಾಗಿದೆ. ಈಗ ಎರಡು ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಒಂದರಲ್ಲಿ ೨೦೦ ರೂಪಾಯಿ, ಇನ್ನೊಂದರಲ್ಲಿ ೧೦೦ ರೂಪಾಯಿ ವರೆಗೆ ದಂಡವನ್ನು ಕಟ್ಟಿಸಿಕೊಳ್ಳಬಹುದಾಗಿದೆ. ಒಂದು ವೇಳೆ ೧೦೦ ರೂಪಾಯಿ ಕಟ್ಟಲು ಸಾಧ್ಯವಾಗದಿದ್ದರೆ ೮ ದಿನ ಸೆರೆವಾಸವನ್ನು ಅನುಭವಿಸಬೇಕಿದೆ.

ಜನವರಿ 24ರಂದು ಬೆಳಗ್ಗೆ 11.30ರ ಸುಮಾರಿಗೆ ಕೆ.ಆರ್‌ ಮಾರುಕಟ್ಟೆ ಫ್ಲೈಓವರ್‌ ಮೇಲಿಂದ ಏಕಾಏಕಿ ದುಡ್ಡಿನ ಸುರಿಮಳೆಯನ್ನೇ ಗೈಯಲಾಗಿತ್ತು. ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದ ಸಾರ್ವಜನಿಕರ ತಲೆ ಮೇಲೆ ಒಮ್ಮೆಲೆ ಗರಿ ಗರಿ ನೋಟುಗಳ ಬೀಳತೊಡಗಿತು. ನೋಟು ಕಂಡ ಕೂಡಲೇ ಜನರು ಬಾಚಿಕೊಳ್ಳಲು ಮುಂದಾಗಿದ್ದರು.

ಸೂಟು ಬೂಟು ಧರಿಸಿ ಜತೆಗೆ ಕತ್ತಿಗೆ ಗಡಿಯಾರವೊಂದನ್ನು ನೇತು ಹಾಕಿಕೊಂಡು ಬ್ಯಾಗ್‌ನಲ್ಲಿ ದುಡ್ಡಿನ ಕಂತೆ ಹಿಡಿದು ಬಂದಿದ್ದ ಅರುಣ್‌ ನೇರವಾಗಿ ಕೆಳಗಡೆ ಜನರತ್ತ ದುಡ್ಡನ್ನು ಚೆಲ್ಲಿದ್ದ. ೧೦,೨೦ ರೂಪಾಯಿಯ ಕಂತೆ ಕಂತೆ ಹಣವನ್ನು ಕೆಳಗೆ ಬಿಸಾಡಿರುವುದು ಸಖತ್‌ ಸುದ್ದಿಯಾಯ್ತು. ಜತೆಗೆ ಕ್ಷಣ ಮಾತ್ರದಲ್ಲಿಯೇ ವಿಡಿಯೊ ವೈರಲ್‌ ಆಗಿತ್ತು.

ಹೀಗೆ ಹಣ ಎಸೆದ ಅರುಣ್‌ಗೆ ಸಂಕಷ್ಟ ಎದುರಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೆ.ಆರ್‌. ಮಾರುಕಟ್ಟೆ ಬಳಿ ನ್ಯೂಸೆನ್ಸ್‌ ಆಗುತ್ತಿದ್ದಂತೆ ಸ್ಥಳಕ್ಕೆ ಟ್ರಾಫಿಕ್‌ ಪೊಲೀಸರು ಆಗಮಿಸಿ ಸೇರಿದ್ದ ಸಾರ್ವಜನಿಕರನ್ನು ಚದುರಿಸುವ ಕೆಲಸವನ್ನು ಮಾಡಿದರು. ಇತ್ತ ಫ್ಲೈಓವರ್‌ ಮೇಲೆ ಪೊಲೀಸರು ಬರುತ್ತಿದ್ದಂತೆ ಸ್ಕೂಟರ್ ಏರಿ ಅರುಣ್‌ ಪರಾರಿ ಆಗಿದ್ದು, ಮೊಬೈಲ್ ಸ್ವಿಚ್ಡ್‌ ಆಫ್‌ ಮಾಡಿ ನಾಪತ್ತೆಯಾಗಿದ್ದಾನೆ.

ನೋಟು ಎಸೆಯುವುದು ಅಪರಾಧವೇ?

ಇತ್ತ ಈಗಾಗಲೇ ನಾಗರಬಾವಿಯಲ್ಲಿರುವ ಅರುಣ್ ಮನೆಗೆ ಕೆ.ಆರ್‌ ಮಾರುಕಟ್ಟೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ಒಂದು ವೇಳೆ ಮನೆಯಲ್ಲಿ ಇದ್ದಲ್ಲಿ ವಶಕ್ಕೆ ಪಡೆಯಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ನೋಟು ಎಸೆದು ಸಾರ್ವಜನಿಕ ಸ್ಥಳದಲ್ಲಿ ತೊಂದರೆಯುಂಟು ಮಾಡಿದ್ದಕ್ಕೆ ಅರುಣ್‌ ಮೇಲೆ ಐಪಿಸಿ ಸೆಕ್ಷನ್‌ 283, ಕೆ.ಪಿ ಆ್ಯಕ್ಟ್ 92d ಅಡಿ ನೋಟಿಸ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ: KR Market Flyover: ಕೆ.ಆರ್‌. ಮಾರುಕಟ್ಟೆಯಲ್ಲಿ ಸೂಟ್‌ ಧರಿಸಿ ಹಣ ಎಸೆದವನು ಖಾಕಿ ಕಂಡೊಡನೆ ಪರಾರಿ!

ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ್ದು, ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆಯುಂಟು ಮಾಡಿದ್ದಕ್ಕೆ ಅರುಣ್ ವಿರುದ್ಧ ಎನ್‌ಸಿಆರ್ ಅನ್ನು ದಾಖಲಿಸಿದ್ದಾರೆ. ಇದಕ್ಕಾಗಿ ಐಪಿಸಿ ಸೆಕ್ಷನ್‌ 283 ಪ್ರಕಾರ 200 ರೂ. ಹಾಗೂ ಕೆ.ಪಿ ಆ್ಯಕ್ಟ್ 92d 100 ರೂ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ದಂಡ ಕಟ್ಟಲು ಆಗದೆ ಇದ್ದರೆ 8 ದಿವಸ ಜೈಲು ವಾಸ ಇರಲಿದೆ.

ರಾಜಧಾನಿ ಬೆಂಗಳೂರಿನ ಇನ್ನಷ್ಟು ಸುದ್ದಿಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version