Site icon Vistara News

ಉರ್ದು ಶಾಲೆಯಲ್ಲಿ ಜನ್ಮಾಷ್ಟಮಿ; ಕೃಷ್ಣ, ರಾಧೆ, ರುಕ್ಮಿಣಿಯರ ವೇಷದಲ್ಲಿ ಗಮನ ಸೆಳೆದ ಮಕ್ಕಳು

ಜನ್ಮಾಷ್ಟಮಿ

ವಿಜಯನಗರ: ರಾಜ್ಯದಲ್ಲಿ ಧರ್ಮ ಸಂಘರ್ಷ, ಕೋಮುಗಲಭೆಗಳು ನಡೆಯುತ್ತಿರುವ ನಡುವೆ ಉರ್ದು ಶಾಲೆಯೊಂದರಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಲಾಗಿದೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಹಿಂದೂ – ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಶಾಲೆಯಲ್ಲಿ 94 ಜನ ವಿದ್ಯಾರ್ಥಿಗಳು ಓದುತ್ತಿದ್ದು, ಅದರಲ್ಲಿ 83 ವಿದ್ಯಾರ್ಥಿಗಳು ಮುಸ್ಲಿಮರಿದ್ದಾರೆ. ಉಳಿದ 11 ಜನ ಇತರ ಜಾತಿಯ ಮಕ್ಕಳಿದ್ದಾರೆ. ಆದರೆ ಮುಸ್ಲಿಂ ಮಕ್ಕಳೇ ಹೆಚ್ಚಿರುವ ಶಾಲೆಯಲ್ಲಿ ಕೃಷ್ಣ, ರಾಧೆ, ರುಕ್ಮಿಣಿಯರ ವೇಷಭೂಷಣ ತೊಟ್ಟು, ಗ್ರಾಮದ ಮುಖ್ಯ ಬೀದಿಗಳಲ್ಲಿ ಸಾಮೂಹಿಕವಾಗಿ ಹೆಜ್ಜೆ ಹಾಕುವ ಮೂಲಕ ನೋಡುಗರ ಗಮನ ಸೆಳೆದರು.

ಮುಖ್ಯ ಶಿಕ್ಷಕ ಎಲ್.ರೆಡ್ಡಿ ನಾಯ್ಕ ಮಾತನಾಡಿ, ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳು ಸೇರಿ ಎಲ್ಲ ಹಬ್ಬಗಳನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಇದಕ್ಕೆಲ್ಲ ಗ್ರಾಮಸ್ಥರು, ಶಾಲೆಯ ವಿದ್ಯಾರ್ಥಿಗಳ ಪಾಲಕರ ಸಹಕಾರ ಇದ್ದು, ಈ ವರ್ಷವೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನೂ ವಿಶೇಷವಾಗಿ ಆಚರಿಸಲಾಗಿದೆ ಎಂದರು.

ಎಸ್‌ಡಿಎಂಸಿ ಸದಸ್ಯರಾದ ರೇಷ್ಮಾ, ಗುಲ್ಜರ್, ಹಜರತ್ ಬೇಗಂ, ಶಿಕ್ಷಕಿಯರಾದ ಶಾಕೀರಾ ಬೇಗಂ, ಶೇಖ್ ಮುಮ್ತಾಜ್, ಗೌರವ ಶಿಕ್ಷಕರಾದ ಶಬೀನಾ, ಸಕ್ರಹಳ್ಳಿ ರವಿಕುಮಾರ್ ಇದ್ದರು.

ಇದನ್ನೂ ಓದಿ | Krishna Janmashtami | ವಿಟ್ಲಪಿಂಡಿಯೊಂದಿಗೆ ಉಡುಪಿ ಕೃಷ್ಣಜನ್ಮಾಷ್ಟಮಿ ಸಂಭ್ರಮ ಸಂಪನ್ನ

Exit mobile version