Site icon Vistara News

Krishna Mutt politics : ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಭೂಮಿ ನೀಡಿದ್ದರೇ? ಚರ್ಚೆಗೆ ಕಾರಣವಾದ ಡಿಕೆಶಿ ಆಪ್ತ ಮಿಥುನ್‌ ರೈ ಹೇಳಿಕೆ

Udupi Krishna mutt

#image_title

ಉಡುಪಿ/ಮಂಗಳೂರು: ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠ ನಿರ್ಮಾಣಕ್ಕೆ ಮುಸ್ಲಿಂ ರಾಜರೊಬ್ಬರು ಜಾಗ ನೀಡಿದ್ದಾರೆ ಎಂಬ ಕಾಂಗ್ರೆಸ್‌ ನಾಯಕ, ಡಿ.ಕೆ. ಶಿವಕುಮಾರ್‌ ಆಪ್ತ ವಲಯದಲ್ಲಿರುವ ಮಿಥುನ್‌ ರೈ ಅವರ ಹೇಳಿಕೆ (Krishna Mutt politics) ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಚುನಾವಣೆಯ ಹೊತ್ತಿನಲ್ಲಿ ನೀಡಿದ ಈ ಹೇಳಿಕೆ ವಿರುದ್ಧ ಹಿಂದುಗಳು ತಿರುಗಿಬಿದ್ದಿದ್ದಾರೆ. ಉಡುಪಿ ಶಾಸಕರಾಗಿರುವ ರಘುಪತಿ ಭಟ್‌ ಅವರು ಕೂಡಾ ಇದರ ಬಗ್ಗೆ ಪ್ರತಿಕ್ರಿಯೆ ನೀಡಿ ಮಿಥುನ್‌ ರೈ ಅವರ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.

ಕಾಂಗ್ರೆಸ್‌ ನಾಯಕ ಮಿಥುನ್‌ ರೈ ಹೇಳಿದ್ದೇನು?

ದ.ಕ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುತ್ತಿಗೆಯ ನೂರಾನಿ ಮಸೀದಿಯಲ್ಲಿ ನಡೆದ ʻನಮ್ಮೂರ ಮಸೀದಿ ನೋಡ ಬನ್ನಿʼ ಕಾರ್ಯಕ್ರಮದಲ್ಲಿ ಮಾತನಾಡಿದ ಮಿಥುನ್‌ ರೈ ಅವರು, ಉಡುಪಿಯ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂಬ ಹೇಳಿಕೆ ನೀಡಿದ್ದರು. ಇದು ಆಕ್ರೋಶಕ್ಕೆ ಕಾರಣವಾದಾಗ ಮಿಥುನ್‌ ರೈ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ಹಿಂದೆ ಉಡುಪಿಯ ಹಿರಿಯ ಯತಿಗಳೊಬ್ಬರು ನೀಡಿದ್ದ ಹೇಳಿಕೆಯನ್ನು ಆಧರಿಸಿ ತಾನು ಮಾತನಾಡಿದ್ದಾಗಿ ಸಮರ್ಥಿಸಿದ್ದರು. ನಿಜವೆಂದರೆ ಪೇಜಾವರ ಮಠದ ಹಿಂದಿನ ಶ್ರೀಗಳು ಈ ರೀತಿಯ ಹೇಳಿಕೆ ನೀಡಿದ್ದು ನಿಜವಾದರೂ ಆಗಲೂ ಆಕ್ಷೇಪ ವ್ಯಕ್ತವಾದಾಗ ಹಿಂದಕ್ಕೆ ಪಡೆದಿದ್ದರು ಎನ್ನಲಾಗಿದೆ. ಆದರೆ, ಈಗಲೂ ಹಿರಿಯ ಶ್ರೀಗಳ ಹೇಳಿಕೆಯನ್ನು ಉಲ್ಲೇಖಿಸುತ್ತಿದ್ದಾರೆ ಎನ್ನಲಾಗಿದೆ. ಸೌಹಾರ್ದತೆಯ ಉಲ್ಲೇಖಕ್ಕಾಗಿ ಆಗೊಮ್ಮೆ ಈಗೊಮ್ಮೆ ಇಂಥ ಸಹಕಾರದ ದಂತ ಕಥೆಗಳು ಚಲಾವಣೆಗೆ ಬರುತ್ತವೆ. ಆದರೆ, ಇದು ಚುನಾವಣಾ ಸಮಯವಾಗಿರುವುದರಿಂದ ಅದು ಹೆಚ್ಚು ಕಾವು ಪಡೆದುಕೊಂಡಿದೆ.

ಅದರ ಜತೆಗೆ ಮಿಥುನ್‌ ರೈ ಅವರು ಮೂಲ್ಕಿ-ಮೂಡುಬಿದರೆ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯೂ ಆಗಿದ್ದಾರೆ. ಹೀಗಾಗಿ ಅದು ಬೇಗನೆ ವೈರಲ್‌ ಆಗಿ ಪ್ರತಿಕ್ರಿಯೆಗಳ ಸುರಿಮಳೆ ಸುರಿಯುತ್ತಿದೆ. ಸಾಮಾಜಿಕ ಜಾಲ ತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.

ತಿರುಗೇಟು ನೀಡಿದ ಶಾಸಕ ರಘುಪತಿ ಭಟ್‌

ಈ ನಡುವೆ, ಮುಸಲ್ಮಾನ ಅರಸರು ಕೃಷ್ಣಮಠಕ್ಕೆ ಜಾಗ ಕೊಟ್ಟರು ಮಿಥುನ್ ರೈ ಹೇಳಿಕೆಗೆ ಉಡುಪಿಯ ಬಿಜೆಪಿ ಶಾಸಕ ಕೆ. ರಘುಪತಿ ಭಟ್‌ ತಿರುಗೇಟು ನೀಡಿದ್ದಾರೆ.

ʻʻಮುಸಲ್ಮಾನ ಅರಸರು ಯಾವುದೇ ಜಾಗವನ್ನು ಉಡುಪಿ ಶ್ರೀ ಕೃಷ್ಣ ಮಠಕ್ಕಾಗಲಿ. ಅನಂತೇಶ್ವರ ದೇವಸ್ಥಾನಕ್ಕಾಗಲೀ ನೀಡಿಲ್ಲ. ಅನಂತೇಶ್ವರ ದೇಗುಲಕ್ಕೆ ರಾಮಭೋಜನು ಭೂಮಿ ಕೊಟ್ಟ ಬಗ್ಗೆ ಉಲ್ಲೇಖ ಇದೆ. ಮುಂದೆ ಆ ಭೂಮಿಯೇ ಕೃಷ್ಣ ಮಠಕ್ಕೆ ಬಳಕೆಯಾಗಿದೆ. ಅನಂತೇಶ್ವರ ದೇಗುಲದ ನಂತರ ಕೃಷ್ಣ ಮಠ ನಿರ್ಮಾಣಗೊಂಡಿದೆʼʼ ಎಂದು ಹೇಳಿದ್ದಾರೆ.

ʻʻಕೃಷ್ಣ ಮಠಕ್ಕೆ ಯಾವ ಅನ್ಯಧರ್ಮೀಯರೂ ಭೂಮಿ ಕೊಟ್ಟಿಲ್ಲ. ಕೃಷ್ಣ ಮಠ ಅಥವಾ ಹಿಂದೂಗಳೇ ಮುಸ್ಲಿಮ್‌ ಮತ್ತು ಕ್ರೈಸ್ತರ ಮಂದಿರಗಳಿಗೆ ಜಾಗ ನೀಡಿದ್ದುʼʼ ಎಂದು ಉಲ್ಲೇಖಿಸಿರುವ ರಘುಪತಿ ಭಟ್‌, ʻʻಉಡುಪಿಯಲ್ಲಿರುವ ಜಾಮಿಯಾ ಮಸೀದಿ ಕೂಡ ಜಂಗಮರ ಮಠದ ಜಾಗದಲ್ಲಿತ್ತು ಎಂದು ಹೇಳಲಾಗುತ್ತದೆ. ಶೋಕಮಾತಾ ಚರ್ಚ್ ಕೃಷ್ಣ ಮಠದವರು ಕೊಟ್ಟ ಲೀಸ್ ಭೂಮಿಯಲ್ಲಿದೆʼʼ ಎಂದು ನೆನಪಿಸಿದ್ದಾರೆ.

ʻʻಉಡುಪಿ ಸೌಹಾರ್ದತೆಗೆ ಹೆಸರಾದ ಕ್ಷೇತ್ರ. ಮುಸಲ್ಮಾನರಿಗೂ ಮಸೀದಿ ಕಟ್ಟಲು ಜಂಗಮರ ಮಠ ಜಾಗ ಕೊಟ್ಟಿದೆ. ಕ್ರಿಶ್ಚಿಯನ್ ಸಮುದಾಯಕ್ಕೆ ಚರ್ಚ್ ಕಟ್ಟಲು ಕೃಷ್ಣಾಪುರ ಮಠ ಭೂಮಿ ಕೊಟ್ಟಿದೆʼʼ ಎಂದು ಹೇಳಿರುವ ಅವರು ಕಾರ್ಪೊರೇಷನ್‌ ಬ್ಯಾಂಕ್‌ ಸ್ಥಾಪಕರಾದ ಹಾಜಿ ಅಬ್ದುಲ್ಲಾ ಸಾಹೇಬರು ಭಕ್ತರಾಗಿ ಕೃಷ್ಣ ಮಠಕ್ಕೆ ಸಹಾಯ ಮಾಡಿದ ಉಲ್ಲೇಖವಿದೆ ಎಂದಿದ್ದಾರೆ.

ಒಂದೊಂದೇ ಕ್ಷೇತ್ರಗಳು ಮುಕ್ತವಾಗುತ್ತಿವೆ ಎಂದ ಭಟ್‌

ಮಿಥುನ್ ರೈಗಳು ಯಾವ ಮುಸಲ್ಮಾನ ರಾಜನ ಬಗ್ಗೆ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಮಧ್ವಾಚಾರ್ಯರು 850 ವರ್ಷಗಳ ಹಿಂದೆ ಕೃಷ್ಣಮಠ ಸ್ಥಾಪಿಸಿದ್ದಾರೆ ಎಂದಿರುವ ಭಟ್‌ ಅವರು, ದೇಶದಲ್ಲಿ ಅಯೋಧ್ಯೆಯನ್ನು ಮಸೀದಿಯಿಂದ ಮುಕ್ತಗೊಳಿಸಲಾಗಿದೆ. ಮಥುರಾ, ಕಾಶಿ ಬಗ್ಗೆಯೂ ಗೊತ್ತಿದೆ. ಒಂದೊಂದೇ ಕ್ಷೇತ್ರಗಳು ಮುಕ್ತವಾಗುತ್ತಿವೆ. ಮಿಥುನ್‌ ರೈಗಳು ಈ ನಿಟ್ಟಿನಲ್ಲಿ ಯೋಚಿಸಲಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : Jamia masjid row | ಮಳಲಿ ಬಳಿಕ ಮತ್ತೊಂದು ಜ್ಞಾನವಾಪಿ ಆಗುತ್ತಾ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ?

Exit mobile version