ತುಮಕೂರು: ಉಡುಪಿ ಶ್ರೀ ಕೃಷ್ಣ ಮಠದ ಜಾಗವನ್ನು ಮುಸ್ಲಿಂ ರಾಜರು ಕೊಟ್ಟಿದ್ದು ಎಂಬ ಕಾಂಗ್ರೆಸ್ ನಾಯಕ ಮಿಥುನ್ ರೈ ಹೇಳಿಕೆ ಬೆನ್ನಲ್ಲೇ ಹುಟ್ಟಿಕೊಂಡಿರುವ ವಿವಾದಕ್ಕೆ (Krishna Mutt politics) ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಸ್ಪಷ್ಟೀಕರಣ ನೀಡಿದ್ದು, ವಿವಾದಕ್ಕೆ ತೆರೆ ಎಳೆದಿದ್ದಾರೆ.
ದ.ಕ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುತ್ತಿಗೆಯ ನೂರಾನಿ ಮಸೀದಿಯಲ್ಲಿ ನಡೆದ ʻನಮ್ಮೂರ ಮಸೀದಿ ನೋಡ ಬನ್ನಿʼ ಕಾರ್ಯಕ್ರಮದಲ್ಲಿ ಮಾತನಾಡಿದ ಮಿಥುನ್ ರೈ ಅವರು, ಉಡುಪಿಯ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂಬ ಹೇಳಿಕೆ ನೀಡಿದ್ದರು. ಇದು ಆಕ್ರೋಶಕ್ಕೆ ಕಾರಣವಾದಾಗ ಮಿಥುನ್ ರೈ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.
ಉಡುಪಿಯ ಪೇಜಾವರ ಹಿರಿಯ ಮಠಾಧೀಶರೇ ನೀಡಿದ್ದ ಹೇಳಿಕೆಯನ್ನು ಆಧರಿಸಿ ತಾನು ಮಾತನಾಡಿದ್ದಾಗಿ ಮಿಥುನ್ ರೈ ಸಮರ್ಥಿಸಿದ್ದರು. ಆದರೆ ಹಿರಿಯ ಶ್ರೀಗಳ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳುವ ಮೂಲಕ ಈಗಿನ ಪೇಜಾವರ ಮಠಾಧೀಶರು ವಿವಾದವನ್ನು ತಣ್ಣಗೆ ಮಾಡಿದ್ದಾರೆ.
ಮಿಥುನ್ ರೈ ಹೇಳಿಕೆ ವೈರಲ್ ಆಗುತ್ತಿದ್ದಂತೆಯೇ ಈ ವಿಚಾರ ಭಾರಿ ಚರ್ಚೆಗೆ ಕಾರಣವಾಗಿತ್ತು. ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಕೆಲವರು ತಲೆದೂಗಿದರೆ ಇದು ಸುಳ್ಳು ಎಂದು ಹಲವರು ವಾದಿಸಿದರು. ಉಡುಪಿ ಶಾಸಕರಾಗಿರುವ ರಘುಪತಿ ಭಟ್ ಅವರು ಇದು ರಾಮಭೋಜನೆಂಬ ಅರಸ ನೀಡಿದ ಜಾಗ. ಆತ ಅನಂತೇಶ್ವರ ದೇವಸ್ಥಾನಕ್ಕೆ ಜಾಗ ನೀಡಿದ್ದು, ಅದರಿಂದ ಕೃಷ್ಣ ಮಠಕ್ಕೂ ನೀಡಲಾಯಿತು. ಇದರಲ್ಲಿ ಮುಸ್ಲಿಂ ರಾಜರ ಪಾತ್ರವೇ ಇಲ್ಲ ಎಂದು ಅವರು ಹೇಳಿದ್ದರು.
ಇದೀಗ ತುಮಕೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಪೇಜಾವರ ಶ್ರೀಗಳು, ಯಾರೇ, ಯಾವ ಹೇಳಿಕೆಯನ್ನಾದರೂ ಕೂಡ ಕೊಡಬಹುದು. ಆದರೆ ಅಂತಹ ಹೇಳಿಕೆಯನ್ನು ಕೊಡಬೇಕು ಅಂತಾದ್ರೆ ಅದಕ್ಕೆ ಯುಕ್ತವಾದ ಆಧಾರವನ್ನ ಕೊಟ್ರೆ ಆ ಮಾತಿಗೆ ಬೆಲೆ ಇರುತ್ತದೆ. ಆಧಾರ ರಹಿತವಾದ ಮಾತನ್ನು ಇಟ್ಕೊಂಡು ಚರ್ಚೆ ಬೆಳೆಸ್ತಾರೆ ಅಂತಾದ್ರೆ ಅದಕ್ಕೆ ಅರ್ಥವಿಲ್ಲ ಎಂದು ಹೇಳಿದರು.
ʻʻಉಡುಪಿಯ ಅನಂತೇಶ್ವರ ಸನ್ನಿಧಾನ ಇರಬಹುದು, ಕೃಷ್ಣ ಮಠದ ಸನ್ನಿಧಾನ ಇರಬಹುದು ರಾಮಭೋಜ ಎಂಬ ಅರಸ ನೀಡಿರೋದಕ್ಕೆ ಆಧಾರಗಳಿವೆ. ಹಾಗಿರುವಾಗ ಅದು ನಮಗೆ ರಾಮಭೋಜ ಕೊಟ್ಟಿರುವಂತದ್ದುʼʼ ಎಂದು ಹೇಳಿದರು ಶ್ರೀಗಳು.
ಆ ಘಟನೆಯೇ ಬೇರೆ ಈ ಘಟನೆಯೇ ಬೇರೆ
ಪೇಜಾವರ ಹಿರಿಯ ಶ್ರೀಗಳಾಗಿದ್ದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ ಒಂದು ವಿಚಾರವನ್ನು ತಪ್ಪಾಗಿ ಗ್ರಹಿಸಿ ಅದನ್ನು ಉಡುಪಿಗೆ ಜೋಡಿಸಲಾಗುತ್ತಿದೆ. ಆದರೆ, ಮಧ್ವಾಚಾರ್ಯರ ಕಾಲದಲ್ಲಿ ಆ ಘಟನೆ ನಡೆದಿದ್ದು ಉಡುಪಿಯಲ್ಲಿ ಅಲ್ಲ, ಗಂಗಾ ನದಿ ತೀರದಲ್ಲಿ. ಗುರುಗಳ ಹೇಳಿಕೆಯನ್ನು ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಅವರು ಘಟನೆಯನ್ನು ವಿವರಿಸಿದ್ದಾರೆ.
ಶ್ರೀ ವಿಶ್ವ ಪ್ರಸನ್ನ ತೀರ್ಥರು ವಿವರಿಸಿದ ಅಂದಿನ ಭೂದಾನದ ಕಥೆ
ಒಮ್ಮೆ ಶ್ರೀ ಮಧ್ವಾಚಾರ್ಯರು ಎಲ್ಲ ಶಿಷ್ಯರೊಡನೆ ಸೇರಿಕೊಂಡು ಬದರಿ ಯಾತ್ರೆಗೆ ಹೊರಟಿದ್ದರು. ಒಂದು ದೊಡ್ಡ ತಂಡವೇ ಅವರ ಜತೆಗಿತ್ತು. ಹಾಗೆ ಯಾತ್ರೆಗೆ ಹೋಗುವಾಗ ಗಂಗಾ ನದಿಯನ್ನು ದಾಟಬೇಕಿತ್ತು. ನದಿಯ ಆಚೆ ದಡದಲ್ಲಿ ಒಬ್ಬ ತುರ್ಕ ರಾಜನ ಆಳ್ವಿಕೆ ಇತ್ತು. ಆತ ನದಿಯ ಮೂಲಕ ವೈರಿಗಳು ಬರಬಹುದು ಎಂಬ ಕಾರಣಕ್ಕಾಗಿ ಅಲ್ಲಿ ದೋಣಿ ಸಂಚಾರವನ್ನೇ ನಿಲ್ಲಿಸಿದ್ದ.
ವಿಶಾಲವಾದ ನದಿ ಅದು. ಯಾರಿಗೂ ಈಜಿಕೊಂಡು ದಾಟುವುದಂತೂ ಸಾಧ್ಯವಿಲ್ಲ. ಒಂದೊಮ್ಮೆ ಯಾರಾದರೂ ಬೇರೆ ದಾರಿಗಳ ಮೂಲಕ ನದಿ ದಾಟಿ ಬಂದರೆ ಅವರನ್ನು ಕೊಂದು ಹಾಕಲು ಅಲ್ಲಿ ಸೈನಿಕರನ್ನು ನಿಯೋಜಿಸಲಾಗಿತ್ತು.
ಆದರೆ, ಸಂಕಲ್ಪದಂತೆ ಮಧ್ವಾಚಾರ್ಯರಿಗೆ ದೋಣಿ ದಾಟುವುದು ಅನಿವಾರ್ಯವಾಗಿತ್ತು. ಮಧ್ವಾಚಾರ್ಯರು ಆಜಾನುಬಾಹು, ಶಕ್ತಿಶಾಲಿ. ಅವರು ತಾವು ಈಜಿಯೇ ಆಚೆ ದಡ ಸೇರಲು ನಿರ್ಧರಿಸಿದರು. ಶಿಷ್ಯರೆಲ್ಲ ಒಬ್ಬರ ಕಾಲನ್ನು ಇನ್ನೊಬ್ಬರು ಹಿಡಿದುಕೊಳ್ಳುವಂತೆ ತಾವ ಮುಂದೆ ನಿಂತು ಅವರೆಲ್ಲರನ್ನೂ ಎಳೆದುಕೊಂಡು ಆಚೆ ದಡ ಸೇರಿಸುವುದಾಗಿಯೂ ಹೇಳಿದರು. ಅಸೀಮ ಬಲದ ಮಧ್ವಾಚಾರ್ಯರು ಈ ಕೆಲಸವನ್ನು ಸಾಂಗವಾಗಿ ನಡೆಸಿಯೇ ಬಿಟ್ಟರು.
ಆದರೆ, ಅವರು ದಡ ದಾಟಿ ಆಚೆ ತೀರಕ್ಕೆ ಹೋಗಿ ನಿಲ್ಲುತ್ತಿದ್ದಂತೆಯೇ ಅತ್ತ ಕಡೆಯಿಂದ ಸೈನಿಕರು ಕತ್ತಿ ಹಿಡಿದುಕೊಂಡು ಓಡಿ ಬಂದರು. ಅವರು ಧಾವಿಸಿ ಬರುತ್ತಿರುವ ರೀತಿ ನೋಡಿದ ಮಧ್ವಾಚಾರ್ಯರು, ಓ ನಿಲ್ಲಿ ಹಾಗೆ ಓಡಿ ಬಂದು ನದಿಗೆ ಬೀಳಬೇಡಿ. ಬನ್ನಿ ಏನು ವಿಷಯ ಹೇಳಿ.. ನಮ್ಮಲ್ಲೇನೂ ಆಯುಧವಿಲ್ಲ ಎಂದು ಹೇಳಿದರು.
ಸೈನಿಕರಿಗೆ ಒಮ್ಮೆಗೇ ಅಚ್ಚರಿಯಾಯಿತು. ಮಧ್ವಾಚಾರ್ಯರು ಯಾವ ಅಂಜಿಕೆ ಅಳುಕು ಇಲ್ಲದೆ ವಿಚಾರವನ್ನು ತಿಳಿಸಿದರು. ಈ ವಿಚಾರವನ್ನು ಸೈನಿಕರು ರಾಜನಿಗೆ ತಲುಪಿಸಿದರು. ಆಗ ತುರುಕ ರಾಜನೇ ಅಲ್ಲಿಗೆ ಬಂದು ಮಧ್ವಾಚಾರ್ಯರು ಮತ್ತು ಶಿಷ್ಯರನ್ನು ಗೌರವದಿಂದ ಕಂಡ. ಮಧ್ವಾಚಾರ್ಯರ ಶಕ್ತಿಗೆ, ವ್ಯಕ್ತಿತ್ವಕ್ಕೆ ಮಣಿದ ಆ ರಾಜ ತನ್ನ ಅರ್ಧ ರಾಜ್ಯವನ್ನೇ ದಾನವಾಗಿ ನೀಡಿದ.
ನಮ್ಮ ಗುರುಗಳು ಈ ಘಟನೆಯನ್ನು ಉಲ್ಲೇಖ ಮಾಡಿದ್ದಾರೆಯೇ ಹೊರತು ಉಡುಪಿ ಮಠದ ಜಾಗವನ್ನು ಮುಸ್ಲಿಂ ರಾಜರು ನೀಡಿದ್ದು ಅಂತ ಹೇಳಿದ್ದಲ್ಲ. ಈ ಗೊಂದಲದಿಂದ ಅವರು ಈ ರೀತಿಯ ಹೇಳಿಕೆ ಕೊಟ್ಟಿರಬಹುದು. ಆದ್ರೆ ಅದು ಆಧಾರರಹಿತವಾಗಿರುವುದರಿಂದ ಈ ಚರ್ಚೆಯನ್ನು ಮುಂದುವರಿಸುವುದು ಅರ್ಥಹೀನ ಅನ್ನುವುದು ನನ್ನ ಅನಿಸಿಕೆ ಎಂದು ಪೇಜಾವರ ಶ್ರೀಗಳು ಹೇಳಿದರು.
ಇದನ್ನೂ ಓದಿ : Krishna Mutt politics : ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಭೂಮಿ ನೀಡಿದ್ದರೇ? ಚರ್ಚೆಗೆ ಕಾರಣವಾದ ಡಿಕೆಶಿ ಆಪ್ತ ಮಿಥುನ್ ರೈ ಹೇಳಿಕೆ