Site icon Vistara News

Congress Manifesto : ಕಾಂಗ್ರೆಸ್‌ ಪ್ರಣಾಳಿಕೆಯನ್ನೇ ಸುಟ್ಟುಹಾಕಿದ ಈಶ್ವರಪ್ಪ; ಸಿದ್ದು, ಡಿಕೆಶಿ ಬಂಧನಕ್ಕೆ ಆಗ್ರಹ

KS Eshwarappa burns congress manifesto and demand arrest of siddamaiah and DKS

KS Eshwarappa burns congress manifesto and demand arrest of siddamaiah and DKS

ಕಲಬುರಗಿ: ಬಜರಂಗ ದಳವನ್ನು ನಿಷೇಧ ಮಾಡುವ ಪ್ರಸ್ತಾವನೆ ಹೊಂದಿರುವ ಕಾಂಗ್ರೆಸ್‌ ಪ್ರಣಾಳಿಕೆಯನ್ನು (Congress Manifesto) ಸುಟ್ಟು ಹಾಕುವ ಮೂಲಕ ಬಿಜೆಪಿ ಹಿರಿಯ ನಾಯಕ ತಮ್ಮ ಆಕ್ರೋಶವನ್ನು ಪ್ರಕಟಿಸಿದ್ದಾರೆ. ಕಲಬುರಗಿಯ ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಎಲ್ಲರ ಎದುರೇ ಈಶ್ವರಪ್ಪ ಪ್ರಣಾಳಿಕೆಯನ್ನು ಸುಟ್ಟು ಹಾಕಿದರು.

ʻʻಕಾಂಗ್ರೆಸ್‌ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿ, ಧರ್ಮದ ಬಗ್ಗೆ ಕಿಡಿ‌ಕಾರುತ್ತಿದೆ. ಜಾತಿ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಿ ವಿಭಜನೆಗೆ ಕಾರಣವಾಗುತ್ತಿದೆ. ಈ ರೀತಿ ವಿಷ ಬೀಜ ಬಿತ್ತುತ್ತಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರನ್ನು ಬಂಧಿಸಬೇಕು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ (Karnataka Election 2023) ಅವರ ಮೇಲೆ ಕ್ರಮ ಕೈಗೊಳ್ಳ ಬೇಕುʼʼ ಎಂದು ಈಶ್ವರಪ್ಪ ಆಗ್ರಹಿಸಿದರು.

ʻʻಬಜರಂಗ ದಳ ಅಂದರೆ ಆಂಜನೇಯ. ಆಂಜನೇಯನ ಬಾಲ ಮುಟ್ಟಿದ್ದಕ್ಕೆ ಲಂಕಾ ದಹನ ಆಯ್ತು. ಬಜರಂಗ ದಳ ಮುಟ್ಟಿದ್ದಕ್ಕೆ ಕಾಂಗ್ರೆಸ್‌ ಈ ಬಾರಿ ವಿಪಕ್ಷಕ್ಕೂ ಲಾಯಕ್ಕಿಲ್ಲದ ಸ್ಥಾನ ದೊರೆಯಲಿದೆʼʼ ಎಂದು ಹೇಳಿದ ಈಶ್ವರಪ್ಪ, ಇದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲ. ಮೊಹಮ್ಮದ್‌ ಅಲಿ ಜಿನ್ನಾನ ಪ್ರಣಾಳಿಕೆಯಾಗಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʻʻಧರ್ಮವನ್ನು ರಕ್ಷಣೆ ಮಾಡುವ ಯುವಕರ ಪಡೆಯೇ ಬಜರಂಗ ದಳ. ಗೋ ಹತ್ಯೆ ತಡೆಯುತ್ತಿರುವ ಬಜರಂಗ ದಳವನ್ನು ಬ್ಯಾನ್ ಮಾಡ್ತೀರಾ? ನಿಮ್ಮ ಪ್ರಣಾಳಿಕೆಯನ್ನು ಇಲ್ಲೇ ಸುಟ್ಟು ಹಾಕುತ್ತೇನೆʼʼ ಎಂದು ಹೇಳಿದ ಈಶ್ವರಪ್ಪ ಎಲ್ಲರೆದುರು ಅದಕ್ಕೆ ಬೆಂಕಿ ಹಚ್ಚಿದರು.

ʻʻಕಾಂಗ್ರೆಸ್‌ನವರು ಮಾನಸಿಕ ಸ್ಥಿತಿ ಹೇಗಾಗಿದೆ ಎನ್ನುವುದು ಜನರಿಗೆ ಗೊತ್ತಾಗಿದೆʼʼ ಎಂದು ಹೇಳಿದ ಕೆ.ಎಸ್‌. ಈಶ್ವರಪ್ಪ ಅವರು, ʻʻಕಾಂಗ್ರೆಸ್‌ನವರು ಹಿಂದು- ಮುಸ್ಲಿಂ ಚುನಾವಣೆ ಮಾಡಲು ಹೊರಟಿದ್ದಾರೆ. ನಾವೆಲ್ಲ ಮುಸ್ಲಿಮರು ಎಂದು ಕಾಂಗ್ರೆಸ್‌ನವರು ಹೇಳಿಕೊಂಡು ತಿರುಗುತ್ತಿದ್ದಾರೆ. ನಿಮಗೆ ಬರೀ ಮುಸ್ಲಿಂ ಮತಗಳು ಮಾತ್ರ ಸಾಕಾ? ಹಿಂದೂಗಳ ಮತ ಬೇಡ್ವಾʼ ಎಂದು ಪ್ರಶ್ನಿಸಿದರು.

ಬಜರಂಗ ದಳದ ಬಗ್ಗೆ ಮಾತನಾಡಿದರೆ ಬಿಜೆಪಿಗೆ ಯಾಕೆ ಸಿಟ್ಟು ಎಂಬ ಡಿ.ಕೆ.ಶಿವಕುಮಾರ್‌ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಹಾಗೂ ಧರ್ಮವನ್ನು ಒಡೆಯುವ ಕೆಲಸ ಯಾರೇ ಮಾಡಿದರೂ ಅದಕ್ಕೆ ವಿರೋಧವಿದೆ ಎಂದರು.

ದೇಶದ್ರೋಹಿಗಳಿಗೆ ಕಾಂಗ್ರೆಸ್‌ ಬೆಂಬಲ

ʻʻಕಾಂಗ್ರೆಸ್‌ ಪಿಎಫ್ಐ ಮೇಲಿನ‌ 120 ಪ್ರಕರಣಗಳನ್ನು ವಾಪಸ್ ಪಡೆದಿದೆ. ದೇಶ ದ್ರೋಹ ಚಟುವಟಿಕೆ ಮಾಡುವವರಿಗೆ ಬೆಂಬಲ ನೀಡುತ್ತಿದ್ದಾರೆ. ಅದಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಜನ ತಿರಸ್ಕಾರ ಮಾಡಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಡಿ.ಕೆ. ಶಿವಕುಮಾರ್‌ ಅವರು ಒಕ್ಕಲಿಗರು ನನ್ನ ಜತೆ ಬನ್ನಿ ನಾನು ಸಿಎಂ ಆಗ್ತೇನೆ ಎಂದು ಹೇಳ್ತಾರೆ. ಸಿದ್ದರಾಮಯ್ಯ ಅವರು ಕುರುಬರೆಲ್ಲಾ ನನ್ನ ಜತೆ ಬನ್ನಿ. ನಾನೇ ಸಿಎಂ ಎನ್ನುತ್ತಾರೆ. ಅವರ ನಡುವೆಯೇ ಗೊಂದಲ ಇದೆ ಎಂದು ಹೇಳಿದ ಈಶ್ವರಪ್ಪ, ಇಂಥಹುದೇ ದ್ವಂದ್ವ ನಿಲುವಿನಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಕಣ್ಮರೆಯಾಗುತ್ತಿದೆ ಎಂದರು ಈಶ್ವರಪ್ಪ.

ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯವರನ್ನು ವಿಷ ಸರ್ಪ ಎಂದು ಹೇಳಿದ್ದು ಸರೀನಾ ಎಂದು ಈಶ್ವರಪ್ಪ ಪ್ರಶ್ನಿಸಿದರು.

ಇದನ್ನೂ ಓದಿ : Congress Manifesto : ಬಜರಂಗದಳ ನಿಷೇಧ ಪ್ರಸ್ತಾಪ ವಿರುದ್ಧ ಮೇ 4ರಂದು ರಾಜ್ಯಾದ್ಯಂತ ಹನುಮಾನ್‌ ಚಾಲೀಸಾ ಪಠಣ

Exit mobile version