Site icon Vistara News

KS Eshwarappa : ಈಶ್ವರಪ್ಪ ಮನೆ ಮುಂದೆ ಹೈ ಡ್ರಾಮಾ, ನಿವೃತ್ತಿ ನಿರ್ಧಾರ ಹಿಂಪಡೆಯುವಂತೆ ಬೆಂಬಲಿಗರ ಆಗ್ರಹ

Shivamogga protest

#image_title

ಶಿವಮೊಗ್ಗ: ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ (KS Eshwarappa) ಅವರು ಮಂಗಳವಾರ ಚುನಾವಣಾ ರಾಜಕೀಯದಿಂದ ನಿವೃತ್ತಿ ಪ್ರಕಟಿಸಿದ ಬೆನ್ನಿಗೇ ಅಭಿಮಾನಿಗಳ ಆಕ್ರೋಶ ಭುಗಿಲೆದ್ದಿದೆ. ಯಾವ ಕಾರಣಕ್ಕೂ ರಾಜಕೀಯದಿಂದ ನಿವೃತ್ತಿ ಪ್ರಕಟಿಸಬಾರದು, ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.

ಸೋಮವಾರವಷ್ಟೇ ಕೇಂದ್ರ ನಾಯಕರು ತಮ್ಮನ್ನು ಚುನಾವಣೆಗೆ ಸಿದ್ಧಗೊಳ್ಳುವಂತೆ ಸೂಚನೆ ನೀಡಿದೆ. ಏಪ್ರಿಲ್‌ 17ಕ್ಕೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಕೆ.ಎಸ್‌. ಈಶ್ವರಪ್ಪ ಅವರು ಘೋಷಿಸಿದ್ದರು. ಅದಕ್ಕಿಂತ ಮೊದಲು ಈ ಬಾರಿ ಈಶ್ವರಪ್ಪ ಬದಲು ಪುತ್ರ ಕಾಂತೇಶ್‌ ಅವರಿಗೆ ಟಿಕೆಟ್‌ ಸಿಗಲಿದೆ ಎಂಬ ಸುದ್ದಿ ಹರಡಿತ್ತು.

ಶಿವಮೊಗ್ಗದಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ

ಆದರೆ, ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಪರಿಸ್ಥಿತಿಯೇ ಬದಲಾಗಿ ಹೋಯಿತು. ತಾವು ಚುನಾವಣಾ ರಾಜಕೀಯದಿಂದ ನಿವೃತ್ತರಾಗುವುದಾಗಿ ಕೆ.ಎಸ್‌. ಈಶ್ವರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಬರೆದ ಪತ್ರ ಬಹಿರಂಗಗೊಳ್ಳುತ್ತಿದ್ದಂತೆಯೇ ಅಭಿಮಾನಿಗಳು ಈಶ್ವರಪ್ಪ ಅವರ ಮನೆಗೆ ದೌಡಾಯಿಸಿದರು.

ದೊಡ್ಡ ಸಂಖ್ಯೆಯಲ್ಲಿ ಮನೆ ಬಳಿ ಬಂದ ಅಭಿಮಾನಿಗಳು ಯಾವ ಕಾರಣಕ್ಕೂ ನಿವೃತ್ತಿ ಪಡೆಯಬಾರದು, ನೀಡಿರುವ ಪತ್ರವನ್ನು ವಾಪಾಸ್‌ ಪಡೆಯಬೇಕು ಎಂದು ಒತ್ತಾಯಿಸಿದರು. ಈಶ್ವರಪ್ಪ ಅವರಿಗೆ ಜೈ, ಭಾರತ್‌ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರು ಈಶ್ವರಪ್ಪ ಅವರಿಗೇ ಟಿಕೆಟ್‌ ನೀಡಬೇಕು ಎಂದು ಕೂಡಾ ಒತ್ತಾಯಿಸಿದರು.

ಟಯರ್‌ ಬೆಂಕಿ ಹಚ್ಚಿ ಆಕ್ರೋಶ

ಈ ನಡುವೆ, ಈಶ್ವರಪ್ಪ ಅವರು ರಾಜಕೀಯ ನಿವೃತ್ತಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಶಿವಮೊಗ್ಗದಲ್ಲಿ ರಸ್ತೆಯಲ್ಲಿ ಟಯರ್‌ಗಳನ್ನು ಸುಡಲಾಗಿದೆ.

ಇನ್ನೂ ಕೆಲವು ದಿನ ಇರಬೇಕಿತ್ತು ಎಂದ ಎಚ್‌.ಡಿ ಕುಮಾರಸ್ವಾಮಿ

ಚುನಾವಣಾ ರಾಜಕೀಯಕ್ಕೆ ಕೆ.ಎಸ್.ಈಶ್ವರಪ್ಪ ನಿವೃತ್ತಿ ಘೋಷಣೆಗೆಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ʻʻಈಶ್ವರಪ್ಪ ಅವರದ್ದೇ ಆದ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಿದವರು. ಒಂದು ಕಾಲದಲ್ಲಿ ಬಿಜೆಪಿಗೆ ಶಕ್ತಿ ಇಲ್ಲದಾಗ ಸಂಘಟನೆ ಮಾಡಿದವರಲ್ಲಿ ಪ್ರಮುಖರು. ಅದು ಅವರ ತೀರ್ಮಾನ. ಅವರ ಪಕ್ಷದ ಬೆಳವಣಿಗೆ ಬಗ್ಗೆ ಟೀಕೆ ಮಾಡೋದು ಶೋಭೆ ತರುವಂತದ್ದಲ್ಲ. ಆದರೂ ಅವರು ಇನ್ನು ಸ್ವಲ್ಪ ದಿನ ರಾಜಕಾರಣದಲ್ಲಿ ಇರಬೇಕಿತ್ತುʼʼ ಎಂದು ಹೇಳಿದರು. ನನ್ನ ಸರ್ಕಾರದಲ್ಲಿ ನೀರಾವರಿ ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು ಎಚ್‌.ಡಿ.ಕುಮಾರಸ್ವಾಮಿ.

ಇದನ್ನೂ ಓದಿ : BJP Karnataka: ರಾಜಕೀಯದಿಂದ ಕೆ.ಎಸ್‌. ಈಶ್ವರಪ್ಪ ನಿವೃತ್ತಿ: ಜೆ.ಪಿ. ನಡ್ಡಾಗೆ ಪತ್ರ ಬರೆದ ಹಿರಿಯ ನಾಯಕ

Exit mobile version