ಬೆಳಗಾವಿ: ನಾನು ಮತ್ತು ರಮೇಶ್ ಜಾರಕಿಹೊಳಿ ನಮ್ಮ ಮೇಲಿನ ಆರೋಪಗಳಿಂದ ಮುಕ್ತರಾಗಿದ್ದೇವೆ. ಕೊಟ್ಟ ಮಾತಿನಂತೆ ಮಂತ್ರಿ ಸ್ಥಾನ ಕೊಡಲೇಬೇಕು ಎಂದು ಪಟ್ಟುಹಿಡಿದಿದ್ದ ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬುಧವಾರ ಸಂಜೆ ಹೊತ್ತಿಗೆ ಬೆಳಗಾವಿ ತಲುಪಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವಿ ಮೇರೆಗೆ ಅವರು ಬೆಳಗಾವಿಗೆ ಬಂದಿರುವುದಾಗಿ ಹೇಳಲಾಗಿದೆ. ಬುಧವಾರ ರಾತ್ರಿ ಇಲ್ಲವೇ ಗುರುವಾರ ಬೆಳಗ್ಗೆ ಬೊಮ್ಮಾಯಿ ಅವರು ಈ ನಾಯಕರ ಜತೆ ಮಾತನಾಡಲಿದ್ದಾರೆ.
ಈ ಮೊದಲು ಬೆಳಗಾವಿಯಲ್ಲಿದ್ದು, ಸುವರ್ಣ ಸೌಧದಲ್ಲಿ ಅಧಿವೇಶನ ಆರಂಭವಾಗುತ್ತಲೇ ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದ ಈ ಇಬ್ಬರು ನಾಯಕರು ತಮಗೆ ಮರಳಿ ಸಚಿವ ಖಾತೆ ನೀಡದ ಸರ್ಕಾರ ಮತ್ತು ಸಿಎಂ ಬೊಮ್ಮಾಯಿ ವಿರುದ್ಧ ಕೆಂಡಾಮಂಡಲರಾಗಿದ್ದರು. ಪರಸ್ಪರ ಮಾತುಕತೆ ನಡೆಸಿಕೊಂಡೇ ಅವರಿಬ್ಬರು ಸದನಕ್ಕೆ ಗೈರುಹಾಜರಾಗಿದ್ದರು. ಹಿಂದಿನ ಅಧಿವೇಶನಕ್ಕೂ ಹೋಗದೆ ಸಡ್ಡು ಹೊಡೆದಿದ್ದ ಈಶ್ವರಪ್ಪ ಈ ಬಾರಿ ತಮ್ಮ ನಿಲುವಿನ ಹಿಂದಿನ ಕಾರಣವನ್ನು ಪತ್ರಿಕಾಗೋಷ್ಠಿಯಲ್ಲೇ ಸ್ಪಷ್ಟಪಡಿಸಿದ್ದರು.
ʻʻಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರೀಯ ವಾಹಿನಿಯೊಂದರಲ್ಲಿ ನೀಡಿರುವ ಸಂದರ್ಶನವೊಂದರಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಸಿಕ್ಕಿರುವುದರಿಂದ ಅವರಿಗೆ ಸಚಿವ ಸ್ಥಾನವನ್ನು ನೀಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹ ಭರವಸೆ ನೀಡಿದ್ದರು. ಈಗ ನಾನು ಆರೋಪ ಮುಕ್ತನಾಗಿ ೪ ತಿಂಗಳು ಕಳೆದರೂ ಸಚಿವ ಸ್ಥಾನ ನೀಡದೇ ಇರುವುದರಿಂದ ಈಗ ಕೇಳುತ್ತಿದ್ದೇನೆʼʼ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ʻʻನಾನು ಯಾವುದೇ ರಾಷ್ಟ್ರೀಯ ನಾಯಕರನ್ನು ಸಂಪರ್ಕ ಮಾಡಿಲ್ಲ. ಮುಖ್ಯಮಂತ್ರಿಯವರು ಭರವಸೆ ನೀಡಿದ್ದರು. ಆದರೂ ಈಡೇರದ ಕಾರಣ ಬೆಳಗಾವಿಗೆ ಹೋಗಿ ಸೌಮ್ಯ ಸ್ವಭಾವದ ಪ್ರತಿಭಟನೆ ಮಾಡುವುದಾಗಿ ಹೇಳಿದ್ದೆ. ವಿಧಾನಸಭಾಧ್ಯಕ್ಷರಿಗೂ ಪತ್ರ ನೀಡಿದ್ದೇನೆ. ಮುಖ್ಯಮಂತ್ರಿ ಅವರನ್ನು ನಂಬುತ್ತೇನೆ. ಅವರ ಬಳಿ ಮಾತನಾಡಿ ತೀರ್ಮಾನ ಮಾಡುತ್ತೇನೆʼʼ ಎಂದಿದ್ದರು ಈಶ್ವರಪ್ಪ.
ಬೊಮ್ಮಾಯಿ ಮನವಿ ಮೇರೆಗೆ ಬೆಳಗಾವಿಗೆ
ಪಕ್ಷ, ಸರ್ಕಾರ ಮತ್ತು ಬೊಮ್ಮಾಯಿ ಅವರಿಗೆ ನೇರವಾಗಿ ಸಡ್ಡು ಹೊಡೆದ ಈ ಇಬ್ಬರು ನಾಯಕರಿಗೆ ಸ್ವತಃ ಮುಖ್ಯಮಂತ್ರಿಗಳೇ ಕರೆ ಮಾಡಿ ಮಾತನಾಡಿದ್ದು, ಮಂತ್ರಿ ಸ್ಥಾನದ ಬೇಡಿಕೆಯ ಬಗ್ಗೆ ಚರ್ಚಿಸಲು ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಬ್ಬರೂ ನಾಯಕರು ಜತೆಯಾಗಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಬೊಮ್ಮಾಯಿ ಅವರು ಈಗಾಗಲೇ ಫೋನ್ ಮೂಲಕ ಇಬ್ಬರ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಶೀಘ್ರದಲ್ಲೇ ಸಂಪುಟ ವಿಸ್ತರಿಸಿ ಸಚಿವ ಸ್ಥಾನ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಮುಂದಿನ ಮಾತುಕತೆಯಲ್ಲಿ ಏನಾಗಲಿದೆ ಎಂಬ ಕುತೂಹಲ ಎಲ್ಲ ಕಡೆ ಇದೆ.
ಸಿಎಂ ಕರೆಸಿಕೊಂಡಿದ್ದಕ್ಕೆ ಬಂದಿದ್ದೇನೆ
ಸಿಎಂ ಬಸವರಾಜ ಬೊಮ್ಮಾಯಿ ಅವರು ಕರೆದಿದ್ದಕ್ಕೆ ನಾನು ಬಂದಿದ್ದೇನೆ. ಅವರು ಮಾತನಾಡಿದ ನಂತರ ಎಲ್ಲವೂ ಗೊತ್ತಾಗಲಿದೆ ಎಂದು ಈಶ್ವರಪ್ಪ ಅವರು ಸಿಎಂ ಭೇಟಿಗೆ ಹೋಗುವ ಮುನ್ನ ತಿಳಿಸಿದರು.
ನನ್ನ ಪರವಾಗಿ ಕ್ಲೀನ್ ಚಿಟ್ ಸಿಕ್ಕಿ ಆಗಿದೆ. ನನಗೆ ಉತ್ತರ ಕೊಟ್ಟು ಸಾಕಾಗಿದೆ. ಹೈಕಮಾಂಡ್ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂಬ ವಿಷಯ ನನ್ನ ಕಿವಿಗೆ ಬಿದ್ದಿದೆ ಎಂದರು.
ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್. ಈಶ್ವರಪ್ಪ ಅವರು ಬೇರೆ ಬೇರೆ ಕಾರಿನಲ್ಲಿ ವಿಟಿಯು ಅತಿಥಿ ಗೃಹಕ್ಕೆ ತೆರಳಿದ್ದು, ಅಲ್ಲಿ ಸಿಎಂ ಅವರ ಜತೆ ಭೇಟಿ ನಡೆಯಲಿದೆ.
ಇದನ್ನೂ ಓದಿ Karnataka Election | ನನಗೂ, ರಮೇಶ್ ಜಾರಕಿಹೊಳಿಗೂ ಮಂತ್ರಿ ಪದವಿ ಕೊಡಲೇಬೇಕು: ಈಶ್ವರಪ್ಪ ಪಟ್ಟು