ಶಿವಮೊಗ್ಗ: ʻಸತ್ರೂ ಬಿಜೆಪಿ ಸೇರಲ್ಲʼ ಎಂಬ ಹೇಳಿಕೆಗೆ ಪ್ರತಿಯಾಗಿ ಕಮಲ ಪಕ್ಷದ ನಾಯಕರು ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿದ್ದಾರೆ. ಸೋಮವಾರ ಬಿಜೆಪಿ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಸಿದ್ದರಾಮಯ್ಯ ಮೇಲೆ ವಾಗ್ದಾಳಿ ನಡೆಸಿದರೆ, ಮಂಗಳವಾರ ಮತ್ತೊಬ್ಬ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ (KS Eshwarappa) ವಾಗ್ದಾಳಿ ನಡೆಸಿದ್ದಾರೆ. ʻʻಸಿದ್ದರಾಮಯ್ಯ ಜೀವಂತ ಇದ್ದಾಗಲೇ ಬಿಜೆಪಿಗೆ ಸೇರಿಸ್ಕೊಳ್ಳೊಲ್ಲ. ಇನ್ನು ಅವರ ಹೆಣ ತಗೊಂಡು ಏನು ಮಾಡೋದು? ಅವರ ಹೆಣಾನ ನಾಯಿ ಕೂಡ ಮೂಸಲ್ಲʼʼ ಎಂದು ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಹೇಳಿದರು.
ʻʻಸಿದ್ದರಾಮಯ್ಯ ಅವರ ಹಣೆಬರಹ ಮತದಾರರಿಗೆ ಗೊತ್ತು. ಅವರು ಚುನಾವಣೆಯಲ್ಲಿ ತಮ್ಮನ್ನು ಸೋಲಿಸುತ್ತಾರೆ ಎಂಬ ಒಂದೇ ಕಾರಣಕ್ಕಾಗಿ ಕ್ಷೇತ್ರ ಹುಡುಕಾಟ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ನಂಬಗಸ್ಥ ಮನುಷ್ಯ ಅಲ್ಲ, ಯಾವತ್ತೂ ಸುಧಾರಿಸೋಲ್ಲ ಅಂತ ಜನರಿಗೆ ಗೊತ್ತಾಗಿದೆʼʼ ಎಂದು ಈಶ್ವರಪ್ಪ ಹೇಳಿದರು.
ಸುಮಲತಾ ಬಿಜೆಪಿ ಸೇರ್ತಾರಾ?
ಪಕ್ಷೇತರ ಸಂಸದೆ ಸುಮಲತಾ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ವಿಚಾರದಲ್ಲಿ ರಾಷ್ಟ್ರೀಯ ನಾಯಕರು ವಿಚಾರ ಮಾಡುತ್ತಾರೆ ಎಂದು ಹೇಳಿದ ಅವರು, ಕೇಂದ್ರ ಮತ್ತು ರಾಜ್ಯಗಳೆರಡರಲ್ಲೂ ಅಧಿಕಾರಕ್ಕೆ ಬರುವ ಏಕೈಕ ಪಕ್ಷ ಎಂದರೆ ಬಿಜೆಪಿ ಎನ್ನುವುದು ಎಲ್ಲರಿಗೂ ಗೊತ್ತು. ಈ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ಎಂದರು.
ಆಡಿಯೊ ಬಗ್ಗೆ ಡಿಕೆಶಿ ಉತ್ತರ ಕೊಡಲಿ
ರಮೇಶ್ ಜಾರಕಿಹೊಳಿ ಅವರು ಡಿಕೆ ಶಿವಕುಮಾರ್ ಅವರ ಬಗ್ಗೆ ಬಿಡುಗಡೆಗೊಳಿಸಿರುವ ಆಡಿಯೊದ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್. ಈಶ್ವರಪ್ಪ ಅವರು, ʻʻಯಾವ್ಯಾವ ದೇಶದಲ್ಲಿ ಮನೆ ಮಾಡಿದ್ದೇನೆ ಅಂತ ಡಿಕೆಶಿ ಆಡಿಯೊದಲ್ಲಿ ಒಪ್ಪಿಕೊಂಡಿದ್ದಾರೆ. ಅದು ಅವರ ವೈಯಕ್ತಿಕ ವಿಷಯ. ಹಾಗಾಗಿ ನಾನು ಕಮೆಂಟ್ ಮಾಡೊಲ್ಲ. ಆದರೆ, ಆಡಿಯೊ ಬಗ್ಗೆ ಅವರು ಉತ್ತರ ಕೊಡಬೇಕಾಗುತ್ತದೆ. ಅದರಲ್ಲಿರುವುದು ಸರಿಯೋ, ತಪ್ಪೋ, ಸುಳ್ಳೋ ಏನಾದರೂ ಹೇಳಲಿ. ಏನೂ ಹೇಳದೆ ಬೇರೆ ಬೇರೆ ಉತ್ತರ ಕೊಡೋದು ಸರಿಯಲ್ಲʼʼ ಎಂದು ಹೇಳಿದರು.
ಅಭ್ಯರ್ಥಿ ಬಗ್ಗೆ ಪಕ್ಷ ಹೇಳ್ಬೇಕು, ವೈಯಕ್ತಿಕ ನಿರ್ಧಾರವಲ್ಲ
ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲವು ನಾಯಕರು ತಾವೇ ಶಾಸಕ ಸ್ಥಾನದ ಅಭ್ಯರ್ಥಿಗಳು ಎಂದು ಪ್ರಚಾರ ಮಾಡಿಕೊಳ್ಳುತ್ತಿರುವ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯಿಸಿದರು.
ʻʻಒಂದು ಪಕ್ಷದಲ್ಲಿ ರಾಜ್ಯಾಧ್ಯಕ್ಷ ಇರುತ್ತಾರೆ. ಯಾರು ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ಅವರು ತೀರ್ಮಾನ ಮಾಡುತ್ತಾರೆ. ಹೀಗಾಗಿ ನಾನೇ ಅಭ್ಯರ್ಥಿ ಅಂತ ತಿರುಗೋದು ಸರಿಯಲ್ಲ. ನಿಖಿಲ್ ಕುಮಾರ್ ಅಭ್ಯರ್ಥಿ ಅಂತ ಎಚ್‌ಡಿ ಕುಮಾರಸ್ವಾಮಿ ಘೋಷಣೆ ಮಾಡಿದರು. ಭವಾನಿ ರೇವಣ್ಣ ತಾನು ಹಾಸನದ ಅಭ್ಯರ್ಥಿ ಎನ್ನುತ್ತಾರೆ. ಸಿದ್ದರಾಮಯ್ಯ ಕೋಲಾರಕ್ಕೆ ತಾನೇ ಅಭ್ಯರ್ಥಿ ಅಂತಾರೆ. ಇವರು ಯಾರು ಹೇಳಿಕೊಳ್ಳೋಕೆ, ಅವರಿಗೆ ಪಕ್ಷ ಇಲ್ವ, ಪಕ್ಷದ ಅಧ್ಯಕ್ಷರು ಇಲ್ವಾ? ಚುನಾವಣಾ ಸಮಿತಿ ಹೇಳಿದರೆ ಅದು ಸರಿ, ಇವರೇ ಹೇಳ್ಕೊಂಡು ಹೋಗೋದು ಸರಿ ಅಲ್ಲ. ಇದು ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇಲ್ಲ ಅಂತ ತೋರಿಸುತ್ತದೆʼʼ ಎಂದರು ಈಶ್ವರಪ್ಪ.
ಶಕುನಿ ಯಾರು ಗೊತ್ತಿಲ್ಲ
ಭವಾನಿ ರೇವಣ್ಣ ಅವರ ಹಿಂದೆ ಶಕುನಿ ಇದ್ದಾರೆ, ಅವರೇ ಆಟ ಆಡಿಸುತ್ತಿದ್ದಾರೆ ಎಂಬ ಎಚ್.ಡಿ ಕುಮಾರಸ್ವಾಮಿ ಹೇಳಿಕೆಗೆ, ʻʻನಾನು ಶಕುನಿ ಬಗ್ಗೆ ಮಾತನಾಡಲು ಇಷ್ಟಪಡಲ್ಲ. ಭವಾನಿ ರೇವಣ್ಣ ಹಿಂದೆ ಶಕುನಿ ಬಿಟ್ಟಿದ್ದು ಯಾರು? ಯಾರು ಆ ಶಕುನಿ ಎನ್ನುವುದನ್ನು ಕುಮಾರಸ್ವಾಮಿ ಹೇಳಲಿ. ನಾನು ಅದನ್ನು ಹೇಳಲ್ಲ, ಅವರ ಪಕ್ಷದ ಆಂತರಿಕ ವಿಚಾರವದು. ಶಕುನಿ ಯಾರು ಅನ್ನುವುದು ಭವಾನಿ ರೇವಣ್ಣ ಅವರಿಗೂ ಗೊತ್ತು, ಹೆಚ್ಡಿಕೆಗೂ ಗೊತ್ತುʼʼ ಎಂದು ಹೇಳಿದರು.
ಇದನ್ನೂ ಓದಿ | ಸಿದ್ದರಾಮಯ್ಯ ಅವರ ಹೆಣ ಬಿಜೆಪಿಗೆ ಬೇಕಿಲ್ಲ: ಮಾಜಿ ಸಿಎಂ ಮಾತಿಗೆ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆ