ರಾಯಚೂರು: ವೈಯಕ್ತಿಕ ದ್ವೇಷಕ್ಕೆ ಐಎಎಸ್, ಐಪಿಎಸ್ ಅಧಿಕಾರಿಗಳು (Sindhuri Vs Roopa) ಪತ್ರಿಕಾಗೋಷ್ಠಿ ಮಾಡುವುದು, ಖಾಸಗಿ ಫೋಟೊಗಳನ್ನು ಬಹಿರಂಗಪಡಿಸುವುದು ಸರಿಯಲ್ಲ. ಈ ಕುರಿತು ಕ್ರಮ ಕೈಗೊಳ್ಳಲು ಸಿಎಂ ಜತೆ ಮಾತನಾಡುತ್ತೇನೆ. ಇದು ರಾಜ್ಯದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ರಾಯಚೂರಿನಲ್ಲಿ ಡಿ.ರೂಪಾ ಹಾಗೂ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದೇ ಇದೇ ವೇಳೆ ಸಿದ್ದರಾಮಯ್ಯ ಕುರಿತು ಸಚಿವ ಅಶ್ವತ್ಥನಾರಾಯಣ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಸಮರ್ಥನೆ ಮಾಡುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಕೊಲೆ ಮಾಡುವಂತಹ ವ್ಯವಸ್ಥೆ ಇಲ್ಲ. ಅಶ್ವತ್ಥನಾರಾಯಣ ಈ ಬಗ್ಗೆ ಈಗಾಗಲೇ ಕ್ಷಮೆ ಕೇಳಿದ್ದಾರೆ. ನಮ್ಮ ಪಾರ್ಟಿಯ ಎಲ್ಲರೂ ಈ ವಿಚಾರವನ್ನು ಖಂಡನೆ ಮಾಡಿದ್ದೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀವು ನರಹಂತಕ ಎಂದು ಕರೆಯುತ್ತೀರಾಲ್ಲಾ? ನಾನು ಸಿದ್ದರಾಮಯ್ಯ ಅವರನ್ನು ಏನೆಂದು ಕರೆಯಬೇಕು ಎಂದ ಅವರು, ಸಿದ್ದರಾಮಯ್ಯ ಅವರೇ ಕನಿಷ್ಠ ಒಂದು ಕ್ಷಮೆಯಾದರೂ ಕೇಳಿ. ಇಲ್ಲವೆಂದರೆ ರಾಜ್ಯದ ಜನ ತೀರ್ಮಾನ ಮಾಡುತ್ತಾರೆ. ಈಗಾಗಲೇ ಒಂದು ಬಾರಿ ನಿಮ್ಮನ್ನು ಸೋಲಿಸಿದ್ದಾರೆ. ಬಾದಾಮಿಯಲ್ಲಿ ಲಾಟರಿ ಹೊಡೆದು ನೀವು ಗೆದ್ದಿದ್ದೀರಿ ಎಂದು ಹೇಳಿದರು.
ಇದನ್ನೂ ಓದಿ | Sindhuri Vs Roopa : ನಾನು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದೇನೆ ಅಂತೀರಾ? ಬಿಡಲ್ಲ, ಕೇಸು ಹಾಕ್ತೇನೆ ಎಂದ ರೂಪಾ
ಕೋಲಾರದಲ್ಲಿ ಸ್ವಪಕ್ಷದವರೇ ಸಿದ್ದರಾಮಯ್ಯನನ್ನು ಸೋಲಿಸುತ್ತಾರೆ. ಆ ಕ್ಷೇತ್ರದಲ್ಲಿ 60,000 ಕ್ಕಿಂತ ಹೆಚ್ಚು ದಲಿತರಿದ್ದಾರೆ. ಜಾತಿ ಲೆಕ್ಕವನ್ನು ಹಾಕಿದರೆ ಕಾಂಗ್ರೆಸ್‌ಗೆ ಸಿದ್ಧಾಂತ ಇಲ್ಲ. ಕೋಲಾರದಲ್ಲಿ ಕುರುಬರು ವರ್ತೂರು ಪ್ರಕಾಶ್ ಪರವಾಗಿದ್ದಾರೆ. ಒಕ್ಕಲಿಗರಿಗೆ ಸಿದ್ದರಾಮಯ್ಯನನ್ನು ಕಂಡರೆ ಆಗುವುದಿಲ್ಲ. ಹೀಗಾಗಿ ಅವರಿಗೆ ಉಳಿದಿರುವುದು ಮುಸಲ್ಮಾನರು ಮಾತ್ರ. ಮುಸಲ್ಮಾನರ ಬಾಲವನ್ನು ಹಿಡಿದುಕೊಂಡು ಹೋಗಬೇಕು ಅಷ್ಟೇ. ಆದರೂ ಸಿದ್ದರಾಮಯ್ಯ ಅವರು ಸೋಲುತ್ತಾರೆ ಬರೆದಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.