Site icon Vistara News

KS Eshwarappa : ಅಲ್ಲಾನಿಗೆ ಕಿವಿ ಕೇಳಿಸುವುದಿಲ್ಲವಾ ಅಂತ ಕೇಳಿದ್ದು ಹೌದು, ಅದು ಧಾರ್ಮಿಕ ನಿಂದನೆ ಅಲ್ಲ ಎಂದ ಈಶ್ವರಪ್ಪ

KS Eshwarappa

#image_title

ಮಂಗಳೂರು: ಮಂಗಳೂರಿನ ಕಾವೂರು ಶಾಂತಿ ನಗರದಲ್ಲಿ ಭಾನುವಾರ ಸಂಜೆ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ವೇಳೆ, ʻʻಮೈಕ್‌ನಲ್ಲಿ ಕೂಗಿದರೆ ಮಾತ್ರವೇ ಅಲ್ಲಾನಿಗೆ ಕೇಳೋದಾ? ಅವನಿಗೇನು ಕಿವುಡಾʼ ಎಂದು ಹೇಳಿದ್ದ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಸೋಮವಾರವೂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅದರೆ, ಅದು ಧಾರ್ಮಿಕ ನಿಂದನೆ (Blashpemy) ಅಲ್ಲ ಎಂದು ಹೇಳಿದ್ದಾರೆ.

ಶಾಂತಿನಗರದಲ್ಲಿ ಭಾಷಣ ಮಾಡುವ ವೇಳೆ ಸ್ಥಳೀಯ ಮಸೀದಿಯಿಂದ ಆಜಾನ್‌ ಧ್ವನಿ ಕೇಳಿಬಂದಿತ್ತು. ಆಗ ಪ್ರತಿಕ್ರಿಯಿಸಿದ ಕೆ.ಎಸ್‌. ಈಶ್ವರಪ್ಪ, ʻʻನನಗೆ ಎಲ್ಲಿ ಹೋದ್ರೂ ಇದೊಂದು ತಲೆನೋವು. ಸುಪ್ರೀಂ ಕೋರ್ಟ್ ಆದೇಶವಿದ್ದು, ಇಂದಲ್ಲ ನಾಳೆ ಇದು ಖತಂ ಆಗಲಿದೆ, ಇದರಲ್ಲೇನು ಅನುಮಾನ ಬೇಡʼʼ ಎಂದು ಹೇಳಿದ್ದರು. ಜತೆಗೆ ʻʻಮೈಕ್‌ನಲ್ಲಿ ಕೂಗಿದರೆ ಮಾತ್ರವೇ ಅಲ್ಲಾನಿಗೆ ಕಿವಿ ಕೇಳೋದಾ? ಮೈಕ್ ಹಿಡ್ಕೊಂಡು ಮಾತ್ರ ಹೇಳಿದರೆ ಅವನಿಗೆ ಕಿವುಡಾ ಎಂದು ಕೇಳಬೇಕಾಗುತ್ತದೆʼʼ ಎಂದಿದ್ದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ʻʻಅಲ್ಲಾನಿಗೆ ಕಿವಿ ಇದೆ ಇಲ್ಲವಾ ಅಂತ ನಾನು ಕೇಳಿದ್ದು ಹೌದು. ನಾನು ಧಾರ್ಮಿಕ ನಿಂದನೆ ಖಂಡಿತಾ ಮಾಡಿಲ್ಲ. ಆದ್ರೆ ಮೈಕ್ ನಲ್ಲಿ ಅಝಾನ್ ಕರೆಯುವ ವಿಚಾರ ಮಾತನಾಡಿದ್ದೆ‌. ಕೇಂದ್ರ ಸರ್ಕಾರ ಒಂದೊಂದೇ ಕಾನೂನು ಜಾರಿ ಮಾಡ್ತಾ ಇದೆ. ಆಝಾನ್‌ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಇದ್ದರೂ ಜಾರಿ ಆಗಿಲ್ಲʼʼ ಎಂದರು.

ಮುಸ್ಲಿಮರಿಗೆ ಸಹಾಯ ಮಾಡುತ್ತೇನೆ ಎಂದ ಈಶ್ವರಪ್ಪ

ʻʻನಾನು ಶಾಸಕನಾಗಿ ಮುಸ್ಲಿಮರಿಗೆ ಸಹಾಯ ಮಾಡುತ್ತಿದ್ದೇನೆ, ನನ್ನ ಮನೆಗೆ ಹಲವು ಮುಸ್ಲಿಂ ಮಹಿಳೆಯರು ಬರ್ತಾರೆ. ಅವರಿಗೆ ಸಹಾಯ ಮಾಡುವುದರಲ್ಲಿ ಧರ್ಮ ನೋಡಿಲ್ಲʼʼ ಎಂದು ಹೇಳಿದ ಅವರು, ಕಾಂಗ್ರೆಸ್ ಪಕ್ಷ ನಂಬಿದ್ರೆ ಮುಸಲ್ಮಾನರಿಗೆ ಉಳಿಗಾಲ ಇಲ್ಲ ಎಂದರು.

ʻʻನಮಗೆ ಎಲ್ಲಾ ಮುಸಲ್ಮಾನರ ವೋಟ್ ಬೇಡ ಅಂತ ನಾನು ಹೇಳಿಲ್ಲ. ಪಿಎಫ್ಐ ಬೆಂಬಲಿತ ಮುಸಲ್ಮಾನರ ವೋಟ್ ಬೇಡ ಅಂತ ಹೇಳಿದ್ದೆʼʼ ಎಂದು ಅವರು ಸ್ಪಷ್ಟೀಕರಣ ನೀಡಿದರು.

ಟಿಕೆಟ್‌ ಕೊಡದಿದ್ದರೆ ತಲೆ ಕೆಡಿಸಿಕೊಳ್ಳಲ್ಲ

ಬಿಜೆಪಿ ಟಿಕೆಟ್‌ ಸಿಗುವುದಿಲ್ಲ ಎಂಬ ಊಹಾಪೋಹಗಳಿಗೆ ಉತ್ತರಿಸಿದ ಅವರು, ʻʻ75 ವರ್ಷ ದಾಟಿದವರಿಗೆ ಟಿಕೆಟ್ ಇಲ್ಲ ಅಂತ ಬಿಜೆಪಿ ಎಲ್ಲೂ ಹೇಳಿಲ್ಲ. ಟಿಕೆಟ್‌ ಸಿಕ್ಕಿಲ್ಲ ಅಂದ್ರೆ ನಾನೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಸಮಾಜ ಸೇವೆಗೆ ಶಾಸಕನಾಗುವುದೇ ಅನಿವಾರ್ಯ ಅಲ್ಲ. ಇಡೀ ರಾಜ್ಯದಲ್ಲಿ ಸರ್ವೆ ಮಾಡಿ ಕೇಂದ್ರದವರು ತೀರ್ಮಾನ ಮಾಡ್ತಾರೆʼʼ ಎಂದರು.

ʻʻಬಿಜೆಪಿಯಲ್ಲಿ ಯಾರಿಗೂ ವಯಸ್ಸು ಆಗೋದಿಲ್ಲ. ಅದು ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ. ರಾಜ್ಯದಲ್ಲಿ ಸಮರ್ಥ ನಾಯಕರು ಇದ್ದಾರೆ. ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ. ಕಾರ್ಯಕರ್ತ ಕೂಡಾ ನಾಯಕನೆ. ಕೇಂದ್ರದಲ್ಲಿ ಪ್ರಧಾನಿ ಯಾರು ಅಂತ ಪ್ರಶ್ನೆ ಎದ್ದಾಗ ಮೋದಿಯವರು ಪ್ರಧಾನಿ ಆದ್ರು. ಯಾರಲ್ಲಿ ನಾಯಕತ್ವ ಗುಣ ಇದೆ ಅವರು ನಾಯಕರಾಗ್ತಾರೆʼʼ ಎಂದರು ಈಶ್ವರಪ್ಪ.

ಇದನ್ನೂ ಓದಿ : KS Eshwarappa: ಶಿವಮೊಗ್ಗದ ಮುಸಲ್ಮಾನರು ಗಲಾಟೆ ಮಾಡೋರಲ್ಲ; ಹಿಂದುಗಳಲ್ಲೂ ಕೆಲ ತಲೆಹರಟೆಗಳಿದ್ದಾರೆ: ಕೆ.ಎಸ್.‌ ಈಶ್ವರಪ್ಪ

Exit mobile version