ಬಾಗಲಕೋಟೆ: ಶಿವಾಜಿ ಮಹಾರಾಜರು (Shivaji Maharaj) ಇಲ್ಲದೆ ಹೋಗಿದ್ದರೆ ನಾವೆಲ್ಲಾ ಹಿಂದು ಆಗಿ ಇರೋಕೆ ಸಾಧ್ಯವೇ ಇರಲಿಲ್ಲ. ನಮ್ದೆಲ್ಲ ಕಟ್ಟಾಗಿ ಹೋಗಿರ್ತಿತ್ತು!: ಹೀಗೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಮಾಜಿ ಸಚಿವ, ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ (KS Eshwarappa). ಅವರು ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಪ್ರತಿಮೆ ತೆರವು ವಿವಾದಕ್ಕೆ (Shivaji statue controversy) ಪ್ರತಿಕ್ರಿಯಿಸುತ್ತಾ ಬಾಯಿ ಮಾತು ಮಾತ್ರವಲ್ಲ, ಕೈಸನ್ನೆಯಲ್ಲೂ ಮಾತನಾಡಿದರು. ಎಲ್ಲ ಕಟ್ ಆಗಿ ಹೋಗಿರ್ತಿದ್ವಿ ಎಂದು ಹೇಳಿ ಕೈ ಸನ್ನೆ ಮೂಲಕ ಪರೋಕ್ಷವಾಗಿ ನಾವೆಲ್ಲ ಮುಸ್ಲಿಂ ಆಗಿರುತ್ತಿದ್ದೆವು ಎಂದು ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.
ʻʻದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರನ್ನು ಅಪಮಾನ ಮಾಡೋದ್ರಿಂದ ಮುಸಲ್ಮಾನರ ಮತಗಳು ತಮಗೆ ಬರುತ್ತೆ ಎಂಬ ಭ್ರಮೆಯಲ್ಲಿದ್ದಾರೆ ಅವರು. ಕಾಂಗ್ರೆಸ್‌ನವರು ದೇಶ ದ್ರೋಹಿಗಳಿಗೆ ಬೆಂಬಲ ಕೊಡುತ್ತಿದ್ದಾರೆ. ಛತ್ರಪತಿ ಶಿವಾಜಿ ಅವರ ಪ್ರತಿಮೆ ಸ್ಥಾಪನೆ ಮಾಡಿ ಎರಡು ದಿನ ಆದ ಬಳಿಕ ಯಾಕೆ ತೆರವು ಮಾಡಿದರು. ಶಿವಾಜಿ ಪ್ರತಿಮೆ ತೆರವು ಮಾಡುವಂತೆ ಒಬ್ಬ ಸಚಿವರು ಡಿಸಿ ಮತ್ತು ಎಸ್‌ಪಿಗೆ ಧಮಕಿ ಹಾಕಿದರು ಎಂದು ಹೇಳಿದರು.
ʻʻಶಿವಾಜಿ ಪ್ರತಿಮೆ ತೆರವು ಕೇವಲ ಬಾಗಲಕೋಟೆಗೆ ಮಾಡಿದ ಅವಮಾನ ಅಲ್ಲ. ಇದು ಈಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ. ಇದರ ಫಲವನ್ನು ಮುಂದೆ ಅನುಭವಿಸ್ತಾರೆ ಅನುಭವಿಸಲಿʼʼ ಎಂದು ಹೇಳುತ್ತಾ, ʻʻಶಿವಾಜಿ ಮಹಾರಾಜರು ಇರಲಿಲ್ಲ ಅಂದ್ರೆ ಇಂದು ನಾವು-ನೀವು ಇರುತ್ತಿರಲಿಲ್ಲ. ನಾನು ಸೀರಿಯಸ್ ಆಗಿ ಹೇಳ್ತೀನಿ, ಎಲ್ಲಾ ಕಟ್ ಆಗಿ ಹೋಗ್ತಿತ್ತುʼʼ ಎಂದು ಹೇಳಿದರು.
ನಾನು ರೀತಿ (ಕಟ್ ಆಗ್ತಿತ್ತು) ಹೇಳಿಕೆ ನೀಡಿದ್ದಕ್ಕೆ ಯಾರಾದರೂ ಕೇಸು ಹಾಕುವುದಿದ್ದರೆ ಹಾಕಲಿ ಎಂದೂ ಈಶ್ವರಪ್ಪ ಸವಾಲು ಹಾಕಿದರು. ಶಿವಾಜಿ ಮಹಾರಾಜರು ದೇಶದಲ್ಲಿದ್ದಿದ್ದಕ್ಕೇ ನಾವೆಲ್ಲ ಹಿಂದೂಗಳಾಗಿ ಉಳಿದಿದ್ದೇವೆ ಎಂದು ಮತ್ತೊಮ್ಮೆ ಹೇಳಿದರು.
ಡಿ.ಕೆ ಶಿವಕುಮಾರ್‌ಗೆ ಈಶ್ವರಪ್ಪ ಸವಾಲು
ʻʻವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಕಾಂಟ್ರಾಕ್ಟರ್‌ಗಳನ್ನು ಎತ್ತಿಕಟ್ಟಿದ್ದಾರೆʼʼ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻಡಿಕೆಶಿ ಡಿಸಿಎಂ ಆದ ದಿನದಂದಲೂ ಸಿಎಂ ಅವರೋ, ಸಿದ್ದರಾಮಯ್ಯನವರೋ ಅನ್ನೋ ರೀತಿ ಮಾತನಾಡ್ತಿದ್ದಾರೆ. ಎಲ್ಲಾ ಇಲಾಖೆಗಳು ನಿಮ್ಮ ಕೈಯಲ್ಲೇ ಇವೆ ತನಿಖೆ ಮಾಡಿಸಿ. ಯಾವುದಾದರೊಂದು ಇಲಾಖೆಗೆ ಒಬ್ಬ ಜಡ್ಜ್ ಅವರನ್ನ ಚೇರಮನ್ ಮಾಡಿ. ೧೫ ದಿನ ಅವರಿಗೆ ಸಮಯ ಕೊಡಿ.. ಒಂದು ಕೇಸ್ ಕೊಡಿ ನೋಡೋಣʼʼ ಎಂದು ಸವಾಲು ಹಾಕಿದರು.
ʻಎಲ್ಲರದೂ ತನಿಖೆ ಮಾಡಿಸ್ತೀವಿ ಅಂತಾರೆ. ಬ್ಲ್ಯಾಕ್ ಮೇಲ್ ತಂತ್ರದ ರಾಜಕಾರಣವನ್ನು ಬಿಜೆಪಿ ನಂಬೋಲ್ಲ. ನೇರವಾಗಿ ನನ್ನದೊಂದು ಸವಾಲ್ ಡಿ.ಕೆ. ಶಿವಕುಮಾರ್‌ಗೆ. ಹಾಲಿ ಅಥವಾ ನಿವೃತ್ತ ಜಡ್ಜ್ ಅವರ ನೇತೃತ್ವದಲ್ಲಿ ಸಮಿತಿ ಆಗಿ, ತನಿಖೆಯಾಗಲಿ. ನಿಜಕ್ಕೂ ಕಳಕಳಿ ಇದ್ದರೆ ನಿಮ್ಮ ಕಾಲದಿಂದ ಇಲ್ಲಿಯವರೆಗೂ ತನಿಖೆ ಮಾಡಿಸಿʼʼ ಎಂದು ಹೇಳಿದರು.
ʻʻಬರೀ ತನಿಖೆ ತನಿಖೆ ಅನ್ನೋ ಡಿಕೆಶಿ ಯಾರು…? ಅವರು ಡಿಕೆಶಿ ಯಾವ ಜೈಲಿನಿಂದ ಹೊರಬಂದವರು? ಯಾವ ಬೇಲ್ ನಲ್ಲಿ ಬಂದವರು, ಯಾವ ಜೈಲಿನಲ್ಲಿ ಇದ್ದವರು ಇವ್ರುʼ ಎಂದು ಆಕ್ರೋಶದಿಂದ ಕೇಳಿದ ಈಶ್ವರಪ್ಪ ಅವರು, ಬ್ಲ್ಯಾಕ್ ಮೇಲ್ ತಂತ್ರ ಮಾಡಿದ್ರೆ ಜನ ನಂಬೋಲ್ಲ ಎಂದರು.
ಕಪ್ಪು ಹಣ ತಂದಿಲ್ಲ ಎಂದ ಸುಬ್ರಹ್ಮಣ್ಯಂ ಸ್ವಾಮಿ: ಈಶ್ವರಪ್ಪ ಉತ್ತರವೇನು?
ಕಪ್ಪು ಹಣ ತರುವಲ್ಲಿ ಬಿಜೆಪಿ ವಿಫಲ ಆಗಿದೆ ಎಂಬ ಸ್ವಪಕ್ಷದ ನಾಯಕ ಸುಬ್ರಹ್ಮಣ್ಯ ಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ʻʻಚುನಾವಣೆ ಬಂದಾಗ ಯಾರ ಬಾಯಿ ಕೂಡಾ ಹಿಡಿಯೋಕೆ ಆಗಲ್ಲ. ಏನೂ ಬೇಕಾದ್ರು ಹೇಳೋಕೆ ನಿಮಗೆ ಅವಕಾಶ ಇದೆ. ರಾಜ್ಯದ ಜನ ಬಹಳ ಬುದ್ಧಿವಂತರಿದಾರೆ. ಮೋದಿ ಬಂದ್ಮೇಲೆ ವ್ಯಕ್ತಿಗಳಿಗೆ, ರೈತರಿಗೆ ವೈಯಕ್ತಿಕವಾಗಿ ಏನು ಮಾಡಿದ್ದಾರೆ. ರಾಜ್ಯಕ್ಕೆ, ದೇಶಕ್ಕೆ ಏನು ಮಾಡಿದ್ದಾರೆ. ವಿಶ್ವಕ್ಕೆ ಜನ ಏನು ಮಾಡಿದ್ದಾರೆ ಎಲ್ಲವನ್ನೂ ಜನ ನೋಡಿದ್ದಾರೆ. ರಾಹುಲ್ ಗಾಂಧಿ ಮುಂದಿಟ್ಕೊಂಡು ಅವ್ರು ಹೋಗಲಿʼʼ ಎಂದರು.
ʻʻಸತ್ತೋಗಿರುವ ಹೆಣ ಯಾಕೆ ಹೊರಗೆ ತೆಗಿತಿದೀರಿ. ಹೊಸದು ಕೊಲೆ ಆಗಿದ್ರೆ ಹೇಳಿʼʼ ಎನ್ನುವ ಮೂಲಕ ಪರೋಕ್ಷವಾಗಿ ಕಪ್ಪು ಹಣದ ವಿಷಯ ಸತ್ತೋಗಿರುವ ವಿಷಯ ಎಂದರು ಈಶ್ವರಪ್ಪ.
ಸಿದ್ದರಾಮಯ್ಯ ರಾಜ್ಯದ ನಂಬರ್ ಒನ್ ಪಕ್ಷಾಂತರ ಪ್ರವೀಣ
ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಕಾಂಗ್ರೆಸ್ ಶಾಸಕರ ಮೇಲೆ ಸಿದ್ದರಾಮಯ್ಯ ಸಾಫ್ಟ್ ಕಾರ್ನರ್ ಹೊಂದಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ರಾಜ್ಯದಲ್ಲಿ ಪಕ್ಷಾಂತರ ಪ್ರವೀಣಾ ಯಾರು? ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದವ್ರು ಯಾರು? ಸಿದ್ದರಾಮಯ್ಯ ಅವರು ನಂಬರ್ ಒನ್ ಪಕ್ಷಾಂತ ಪ್ರವೀಣ. ಅವರಿಗೆ ಪಕ್ಷಾಂತರದ ಬಗ್ಗೆ ಮಾತನಾಡುವ ಅಧಿಕಾರವೇ ಇಲ್ಲ ಎಂದರು.
17 ಜನ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಆಡಳಿತ ಸರಿಯಿಲ್ಲ, ಬಿಜೆಪಿಗೆ ಹೋಗ್ತೀವಿ ಅಂತ ರಾಜೀನಾಮೆ ನೀಡಿ ಬಿಜೆಪಿಗೆ ಬಂದ್ರು. ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯವೋ ಪಕ್ಷಾಂತರವಾದ 17 ಜನರನ್ನು ಮರಳಿ ಪಕ್ಷಕ್ಕೆ ತರಲ್ಲ ಅನ್ನೋದು ಅಷ್ಟೇ ಸತ್ಯ ಎಂದು ವಿಧಾನಸೌಧಲ್ಲಿ ಸಿದ್ದರಾಮಯ್ಯ ಹೇಳಿದ್ರು ಈಗ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆ ಎಂದು ತಿವಿದರು.
ಇದನ್ನು ಓದಿ: CM Siddaramaiah : ಸಿದ್ಧಾಂತ ಒಪ್ಪಿದವರು ಸೇರಬಹುದು ಎಂದ ಸಿಎಂ ಸಿದ್ದರಾಮಯ್ಯ; ಆಪರೇಷನ್ ಹಸ್ತಕ್ಕೆ ಗ್ರೀನ್ ಸಿಗ್ನಲ್?
ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಸೋಲು ಗ್ಯಾರಂಟಿ
ಕಾಂಗ್ರೆಸ್‌ನವರು ಆಪರೇಷನ್ ಹಸ್ತಕ್ಕೆ ಹೊರಟಿಸುವುದು ಭಯದಿ. ಲೋಕಸಭೆಯಲ್ಲಿ ಸಮೀಕ್ಷೆಯಲ್ಲಿ ಬಿಜೆಪಿ 23 ಸ್ಥಾನ ಬರುತ್ತೆ ಅಂತ ಹೇಳಲಾಗಿದೆ. ಅದಕ್ಕಾಗಿ ಅವ್ರು ನಿದ್ದೆ ಮಾಡುತ್ತಿಲ್ಲ. 23 ಸ್ಥಾನಗಳು ಬರ್ತಿದ್ದಂಗೆ ರಾಜ್ಯದಲ್ಲಿ ಈ ಸರ್ಕಾರ ಇರುತ್ತಾ? ನಾವು ಕರೆಯೋದೇ ಬೇಡ, ಕಾಂಗ್ರೆಸ್ಸಿನವರು ದಿಕ್ಕು ದಿಕ್ಕಾಗಿ ಹೋಗ್ತಾರೆ. ಅವ್ರ ಪಾರ್ಟಿ ಉಳಿಯಲ್ಲ,. ಮಗೂಗೆ ಮೂರು ತಿಂಗಳು ಈಗ (ಸರ್ಕಾರಕ್ಕೆ). ಇನ್ನೊಂದು ಮೂರು ತಿಂಗಳಾಗಲಿ, ಲೋಕಸಭಾ ಎಲೆಕ್ಷನ್ ಅಗಲಿ. ಆವಾಗ ಇವರುಗಳ ಪರಿಸ್ಥಿತಿ ನೋಡುವಿರಂತೆʼʼ ಎಂದರು ಈಶ್ವರಪ್ಪ.