ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL Bangalore) 2023ರ ಡಿಸೆಂಬರ್ ತಿಂಗಳೊಂದರಲ್ಲೇ 123.42 ಕೋಟಿ ರೂ. ಮೌಲ್ಯದ 852 ಟನ್ ಮಾರ್ಜಕಗಳನ್ನು ಉತ್ಪಾದಿಸಿದ್ದು, ಕಳೆದ 40 ವರ್ಷಗಳಲ್ಲಿ ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.
ಈ ಬಗ್ಗೆ ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, `ಕಳೆದ ತಿಂಗಳು ಕೆಎಸ್ಡಿಎಲ್ 852 ಟನ್ ಮಾರ್ಜಕಗಳನ್ನು ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. 2022ರ ಸೆಪ್ಟೆಂಬರ್ ತಿಂಗಳಲ್ಲಿ 775 ಟನ್ ಮಾರ್ಜಕಗಳನ್ನು ಉತ್ಪಾದಿಸಿದ್ದು ಇದುವರೆಗಿನ ದಾಖಲೆಯಾಗಿತ್ತು’ ಎಂದಿದ್ದಾರೆ.
ಕೆಎಸ್ಡಿಎಲ್ನಲ್ಲಿ ಇದುವರೆಗೆ ಮಾರ್ಜಕಗಳ ಉತ್ಪಾದನಾ ವಿಭಾಗದಲ್ಲಿ ಒಂದು ಪಾಳಿಯ ಕೆಲಸದ ವ್ಯವಸ್ಥೆ ಇತ್ತು. ಅದನ್ನೀಗ ಮೂರು ಪಾಳಿಗಳಿಗೆ ವಿಸ್ತರಿಸಲಾಗಿದೆ. ಜತೆಗೆ, ಈವರೆಗೆ ಸಂಸ್ಥೆಯಲ್ಲಿ ಮಾರ್ಜಕಗಳ ತಯಾರಿಕೆಗೆ ಕೇವಲ ಒಂದು ಯಂತ್ರ ಮಾತ್ರವಿತ್ತು. ಸರ್ಕಾರಿ ಉದ್ದಿಮೆಗಳು ಖಾಸಗಿ ವಲಯದಂತೆಯೇ ಲಾಭ ಗಳಿಸಬೇಕೆಂಬ ಉದ್ದೇಶದಿಂದ ಈಗ ಈ ವಿಭಾಗದಲ್ಲಿ ಮೂರು ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂಸ್ಥೆಯು ಮೊದಲಿನಿಂದಲೂ ಸಾಬೂನು ತಯಾರಿಕೆಗೆ ಹೆಸರುವಾಸಿಯಾಗಿದ್ದು, ಮಾರುಕಟ್ಟೆ ಕೂಡ ಅದರ ಸುತ್ತಲೇ ಕೇಂದ್ರೀಕೃತವಾಗಿತ್ತು. ಇತ್ತೀಚೆಗೆ ಮಾರ್ಜಕಗಳ ಉತ್ಪಾದನೆಯತ್ತಲೂ ಹೆಚ್ಚಿನ ಗಮನ ಹರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಅದು ಈಗ ಫಲ ನೀಡಿದೆ. ಮುಂದಿನ ದಿನಗಳಲ್ಲಿ ಖಾಸಗಿ ಕಂಪನಿಗಳ ಮಾರ್ಜಕಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಮಾರುಕಟ್ಟೆ ಜಾಲವನ್ನು ಕೂಡ ಅಖಿಲ ಭಾರತ ಮಟ್ಟದಲ್ಲಿ ವಿಸ್ತರಿಸಲಾಗುವುದು ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Corruption Case : ಲಂಚ ಸ್ವೀಕರಿಸಿದ್ದಕ್ಕೆ ಮಾತ್ರವಲ್ಲ ಕೇಳಿದ್ದಕ್ಕೂ ಪುರಾವೆ ಬೇಕು ಎಂದ ಹೈಕೋರ್ಟ್
ಹೋದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ 2023-24ನೇ ಹಣಕಾಸು ವರ್ಷದಲ್ಲಿ ಡಿಸೆಂಬರ್ ಅಂತ್ಯದವರೆಗೆ ಸಾಬೂನು, ಮಾರ್ಜಕ ಮತ್ತು ಕಾಸ್ಮೆಟಿಕ್ಸ್ ಉತ್ಪಾದನೆ ನಿಗದಿತ ಗುರಿಗಿಂತ ಹೆಚ್ಚಾಗಿದೆ. ಸಂಸ್ಥೆಯು ಹೋದ ಸಾಲಿನಲ್ಲಿ 118 ಕೋಟಿ ರೂ. ಲಾಭ ಗಳಿಸಿತ್ತು. ಈ ಹಣಕಾಸು ಸಾಲಿನ ಮೊದಲ ಒಂಬತ್ತು ತಿಂಗಳಲ್ಲಿ ಸಂಸ್ಥೆಯು 1171.07 ಕೋಟಿ ರೂ. ಮೊತ್ದದಷ್ಟು ವಹಿವಾಟು ನಡೆಸಿದೆ. ಈ ವರ್ಷಕ್ಕೆ ಒಟ್ಟು 1,404 ಕೋಟಿ ರೂ. ವಹಿವಾಟು ನಿಗದಿ ಪಡಿಸಲಾಗಿದ್ದು, ಇದನ್ನು ಮೀರುವುದರಲ್ಲಿ ಅನುಮಾನವಿಲ್ಲ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವರ್ಷದ ಕೊನೆ ದಿನದಂದು ದಾಖಲೆ ಮದ್ಯ ವಹಿವಾಟು; ಒಂದೇ ದಿನ ₹18.85 ಕೋಟಿ ಮದ್ಯ ಮಾರಾಟ
ಬೆಂಗಳೂರು: ರಾಜ್ಯದಲ್ಲಿರುವ 1031 ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಗಳಲ್ಲಿ 2023ರ ಕೊನೆಯ ದಿನವಾದ ಭಾನುವಾರ (ಡಿ.31) ₹18.85 ಕೋಟಿ ಮೊತ್ತದ ದಾಖಲೆಯ ಮದ್ಯ ಮಾರಾಟವಾಗಿದೆ ಎಂದು ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ತಿಳಿಸಿದ್ದಾರೆ.
ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಇದು ಸುಮಾರು ₹ 4.34 ಕೋಟಿ ಹೆಚ್ಚಳವಾಗಿದೆ. 2022ರ ಡಿ. 31ರಂದು ₹14.51 ಕೋಟಿ ಮೊತ್ತದ ಮದ್ಯ ಮಾರಾಟವಾಗಿತ್ತು. ರಾಯಚೂರಿನ ರೈಲ್ವೆ ನಿಲ್ದಾಣದ ಬಳಿ ಇರುವ ಮಳಿಗೆಯಲ್ಲಿ ಅತ್ಯಂತ ಹೆಚ್ಚು, ಅಂದರೆ ₹11.66 ಲಕ್ಷ ರೂಪಾಯಿಗಳ ಮದ್ಯ ಮಾರಾಟವಾಗಿದ್ದರೆ, ಅದೇ ನಗರದ ಗಂಝ್ ರಸ್ತೆಯ ಮಳಿಗೆಯಲ್ಲಿ ₹9.96 ಲಕ್ಷದ ಮದ್ಯ ಬಿಕರಿಯಾಗಿ ಎರಡನೇ ಸ್ಥಾನದಲ್ಲಿದೆ.
ಜಿಲ್ಲಾವಾರು ಮಾರಾಟದಲ್ಲಿ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತ್ಯಧಿಕ, ಅಂದರೆ ₹1.82 ಕೋಟಿಯ ಮದ್ಯ ಮಾರಾಟ ಕಂಡಿದೆ. ಕಳೆದ ವರ್ಷದ ಇದೇ ದಿನ ಈ ಜಿಲ್ಲೆಯಲ್ಲಿ ರೂ 1.35 ಕೋಟಿಯ ಮದ್ಯ ಮಾರಾಟವಾಗಿತ್ತು. ಉನ್ನತ ದರ್ಜೆಗೇರಿಸಿ ಜ.1ರಂದು ಉದ್ಘಾಟನೆಗೊಂಡ ಬೆಂಗಳೂರು ಬಸವೇಶ್ವರನಗರದ ಎಂಎಸ್ಐಎಲ್ ಬೋಟಿಕ್ನಲ್ಲಿ ಭಾನುವಾರ ಆದ ಮದ್ಯ ಮಾರಾಟದ ಮೊತ್ತ ರೂ 3.5 ಲಕ್ಷ. ಇಲ್ಲಿ ಕಳೆದ ವರ್ಷದ ಇದೇ ದಿವಸ ಈ ಮಳಿಗೆಯಲ್ಲಿ ರೂ. 2.59 ಲಕ್ಷದ ಮದ್ಯ ಮಾರಾಟವಾಗಿತ್ತು ಎಂದು ಮನೋಜ್ ಹೇಳಿದ್ದಾರೆ.
ಇದನ್ನೂ ಓದಿ | GST Collection : ಡಿಸೆಂಬರ್ ತಿಂಗಳ ಜಿಎಸ್ಟಿ ಸಂಗ್ರಹದಲ್ಲಿ ಭರ್ಜರಿ ಪ್ರಗತಿ
ಉಳಿದ ದಿನಗಳಂದು ರಾಜ್ಯದ ಎಲ್ಲಾ ಎಂಎಸ್ಐಎಲ್ ಮಳಿಗೆಗಳಿಂದ ಆಗುವ ಮದ್ಯ ಮಾರಾಟದ ವಹಿವಾಟು ರೂ 8 ಕೋಟಿಯಷ್ಟಿರುತ್ತದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ಇದು ರೂ 18.8 ಕೋಟಿಗೆ ಏರಿಕೆಯಾಗಿದೆ.