ದಾವಣಗೆರೆ: ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free Bus Service) ನೀಡುವ ನಿಟ್ಟಿನಲ್ಲಿ “ಶಕ್ತಿ” ಯೋಜನೆಯನ್ನು ಜಾರಿಗೆ ತಂದಿದೆ. ಇದೇ ವೇಳೆ ರಾಜ್ಯಾದ್ಯಂತ ಮಹಿಳೆಯರಿಂದ ಇದಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಈ ನಡುವೆ ಇನ್ನೊಂದು ಸೈಡ್ ಎಫೆಕ್ಟ್ ಶುರುವಾಗಿದ್ದು, ಈ ಸಾರಿಗೆ ಬಸ್‌ಗಳು ರಶ್ ಇರಲಿರುವ ಕಾರಣಕ್ಕೆ ಚಾಲಕರು ಕೆಲವು ನಿಲ್ದಾಣಗಳಲ್ಲಿ ನಿಲ್ಲಿಸದೇ ಹೋಗುತ್ತಿರುವ ಆರೋಪಗಳೂ ಕೇಳಿ ಬರುತ್ತಿದೆ. ಇದು ಈಗ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇಂಥದ್ದೊಂದು ಸನ್ನಿವೇಶ ದಾವಣಗೆರೆ ಜಿಲ್ಲೆಯ ಚೀಲೂರು ಗ್ರಾಮದಲ್ಲಿ ಆಗಿದ್ದು, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ (MP Renukacharya) ಮಧ್ಯ ಪ್ರವೇಶಿಸಿ ಸರಿಪಡಿಸಿದ್ದಾರೆ. ಅಲ್ಲದೆ, ಸಾರಿಗೆ ವ್ಯವಸ್ಥೆ ಬಗ್ಗೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಈಗ ವೈರಲ್ (Viral News) ಆಗಿದೆ.
ಚೀಲೂರು ಗ್ರಾಮದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಸಾರ್ವಜನಿಕರು ಪರದಾಡುತ್ತಿದ್ದರು. ಇದು ಪ್ರತಿ ದಿನದ ಸಂಕಷ್ಟವೂ ಆಗಿತ್ತು. ಹೀಗಾಗಿ ವಿದ್ಯಾರ್ಥಿಗಳು ಸಹ ಇದರಿಂದ ರೋಸಿ ಹೋಗುತ್ತಿದ್ದರು. ಹಾಗಂತ ಇಲ್ಲಿಗೆ ಬಸ್ ಬರುತ್ತಿರಲಿಲ್ಲ ಎಂದೇನಲ್ಲ. ಹೀಗೆ ಬಸ್ ಬಂತು, ಇನ್ನೇನು ಹತ್ತೇ ಬಿಟ್ಟೆವು ಅನ್ನುವ ವೇಳೆ ಆ ಬಸ್ ನಿಲ್ಲಿಸುತ್ತಲೇ ಇರಲಿಲ್ಲ!
ಇದನ್ನೂ ಓದಿ: KRS Dam: ಖಾಲಿಯಾಗಿದೆ ಕೆಆರ್‌ಎಸ್! ಕುಡಿಯಲು ನೀರು ಸಿಗುವುದು ಇನ್ನೆಷ್ಟು ದಿನ? ಮಳೆ ಬಾರದೇ ಇದ್ದರೆ ಏನ್ ಕಥೆ!
ಬಸ್ ಒಳಗಡೆಯಿಂದ ಕಂಡಕ್ಟರ್ ರೈಟ್.. ರೈಟ್.. ಅಂತ ಹೇಳುತ್ತಿದ್ದ ಧ್ವನಿ ಮಾತ್ರ ಕೇಳುತ್ತಿತ್ತು. ಆಗ ಮತ್ತೊಂದು ಬಸ್ ಬರುವ ತನಕ ಕಾಯುವಿಕೆ. ಅಲ್ಲೂ ಇದೇ ವರ್ತನೆ. ಹೀಗೆ ಬಸ್‌ಗಾಗಿ ಕಾದು ಕಾದು ರೋಸಿ ಹೋಗಿದ್ದ ಜನರಿಗೆ ಪಿತ್ತ ನೆತ್ತಿಗೇರಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿಯೂ ಸಾಲು ಸಾಲು ಮೆಸೇಜ್ ಹಾಕಿ, ವಿಡಿಯೊ ಮಾಡಿ ಆಕ್ರೋಶವನ್ನು ಹೊರಹಾಕಿದ್ದರು.
ಸಿಟ್ಟಾದ ಎಂ.ಪಿ. ರೇಣುಕಾಚಾರ್ಯ
ಕೊನೆಗೆ ಈ ವಿಷಯವು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೂ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಖುದ್ದು ಫೀಲ್ಡಿಗೆ ಇಳಿದ ಅವರು, ಚೀಲೂರು ಗ್ರಾಮಕ್ಕೆ ಬಂದಿದ್ದಾರೆ. ವಿದ್ಯಾರ್ಥಿಗಳ, ಜನರ ಸಮಸ್ಯೆಯನ್ನು ಆಲಿಸಿದ್ದಾರೆ. ಗಂಟೆಗಟ್ಟಲೆ ಬಸ್ಗಳಿಗೆ ವಿದ್ಯಾರ್ಥಿಗಳು ಕಾಯುತ್ತಿರುವುದಕ್ಕೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಬಸ್ ಬಂದರೂ ನಿಲ್ಲಿಸದೇ ತೆರಳುತ್ತಿದ್ದ ಚಾಲಕ, ನಿರ್ವಾಹಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ ರೇಣುಕಾಚಾರ್ಯ, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ಕೂಡಲೇ ಬಸ್‌ಗಳನ್ನು ಹೆಚ್ಚಿಗೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕೊನೆಗೆ ಅವರೇ ರಸ್ತೆಗೆ ಅಡ್ಡ ಬಂದು ಬಸ್ ಅನ್ನು ನಿಲ್ಲಿಸಿದ್ದಾರೆ. ಬಸ್ ತಡೆದು ಚಾಲಕ, ನಿರ್ವಾಹಕರಿಗೆ ತಮ್ಮ ಎಂದಿನ ಸ್ಟೈಲ್‌ನಲ್ಲಿ ತರಾಟೆ ತೆಗೆದುಕೊಂಡಿದ್ದಾರೆ. ಕೊನೆಗೆ ವಿದ್ಯಾರ್ಥಿಗಳನ್ನು ಬಸ್ ಹತ್ತಿಸಿ ಕಾಲೇಜಿಗೆ ಕಳುಹಿಸಿ ಕೊಟ್ಟಿದ್ದಾರೆ.
ಸರ್ಕಾರದ ವಿರುದ್ಧ ರೇಣುಕಾಚಾರ್ಯ ಆಕ್ರೋಶ
ಸರ್ಕಾರ ಫ್ರೀ ಯೋಜನೆಗಳನ್ನು ಘೋಷಣೆ ಮಾಡಿದರೆ ಸಾಲದು. ಸೂಕ್ತ ವ್ಯವಸ್ಥೆಯನ್ನೂ ಮಾಡಬೇಕು. ಬಸ್ ರಶ್ ಇದೆ ಎಂಬ ಮಾತ್ರಕ್ಕೆ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳನ್ನು ಬಿಟ್ಟು ಹೋಗುವುದು ಎಷ್ಟು ಸರಿ? ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಈ ವೇಳೆ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.