Site icon Vistara News

KSRTC Bus Pass: ಶಾಲಾ ಮಕ್ಕಳಿಗೆ ಬಸ್‌ ಪಾಸ್‌ ಅವಧಿ ವಿಸ್ತರಣೆ; ಎಷ್ಟು ದಿನಕ್ಕೆ ಅವಕಾಶ, ಏನಿದೆ ಕಂಡೀಷನ್?

KSRTC BUS PASS AND SEVA SINDHU

ಬೆಂಗಳೂರು: ರಾಜ್ಯಾದ್ಯಂತ 2023-24ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಬುಧವಾರದಿಂದ (ಮೇ 31) ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಶುರುವಾಗಿವೆ. ಈ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ಬರುವ ಮಕ್ಕಳಿಗೆ ಪಾಸ್‌ (KSRTC Bus Pass) ವ್ಯವಸ್ಥೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತಾತ್ಕಾಲಿಕ ರಿಲೀಫ್‌ ನೀಡಿದ್ದು, 15 ದಿನಗಳ ವರೆಗೆ ಅವಧಿಯನ್ನು ವಿಸ್ತರಣೆ ಮಾಡಿದೆ. ಹೀಗಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಿಗದಿತ ಸಮಯದೊಳಗೆ ಬಸ್‌ ಪಾಸ್‌ ಅನ್ನು ಮಾಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.

2023-24ನೇ ಸಾಲಿನ ವಿದ್ಯಾರ್ಥಿ ಪಾಸ್‌ಗಳನ್ನು ಇಡಿಸಿಎಸ್ ಇಲಾಖೆಯ ಸೇವಾಸಿಂಧು ತಂತ್ರಾಂಶದ ಮುಖಾಂತರ ಸಂಪೂರ್ಣ ಯಾಂತ್ರೀಕೃತವಾಗಿ ವಿತರಣೆ ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ವಹಿಸಲಾಗಿದೆ. ಇಡಿಸಿಎಸ್ ಇಲಾಖೆಯು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಹಾಗೂ ಪಾಸ್‌ ಪಡೆಯಲು ಕಾಲಾವಕಾಶವನ್ನು ನೀಡಲಾಗಿದೆ.

ಈ ಸಂಬಂಧ ವಿದ್ಯಾರ್ಥಿಗಳಿಗೆ ದಿನಾಂಕ 15.06.2023 ರವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ತರಗತಿಗಳಿಗೆ ಹಾಜರಾಗಲು ಯಾವುದೇ ಅನಾನುಕೂಲವಾಗದಂತೆ ಕ್ರಮವಹಿಸಲಾಗಿದೆ. 2022-23ನೇ ಸಾಲಿನ ವಿದ್ಯಾರ್ಥಿಗಳು ಹಳೇ ಬಸ್‌ ಪಾಸ್‌ ಇಲ್ಲವೇ ಪ್ರಸಕ್ತ ವರ್ಷದಲ್ಲಿ ಶಾಲಾ / ಕಾಲೇಜುಗಳಿಗೆ ದಾಖಲಾಗಿರುವ ಶುಲ್ಕ ಪಾವತಿ ರಸೀದಿಯನ್ನು ತೋರಿಸಿಯೂ ಪ್ರಯಾಣ ಮಾಡಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ದೇಶಕರು ಸುತ್ತೋಲೆಯನ್ನು ಹೊರಡಿಸಿದ್ದಾರೆ.

ಇದನ್ನೂ ಓದಿ: Viral News: ಕುಟುಂಬದೊಂದಿಗೆ ಯುರೋಪ್‌ ಪ್ರವಾಸ ಮಾಡ್ತಿದ್ದೇನೆ; ನಾವೆಲ್ಲ ಸತ್ತರೆ ಆಸ್ತಿ ಸಮಾಜಕ್ಕೆಂದು ವಿಲ್‌!

ಇವರಿಗೂ ಆಗಿತ್ತು ವಿಸ್ತರಣೆ

ಈ ಹಿಂದೆ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಬಿ ಫಾರ್ಮಾ ಸೇರಿದಂತೆ ವಿವಿಧ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಸಹ ಬಸ್‌ ಪಾಸ್‌ ಅವಧಿಯನ್ನು ವಿಸ್ತರಣೆ ಮಾಡಿ ಕೆಎಸ್‌ಆರ್‌ಟಿಸಿ ಆದೇಶವನ್ನು ಹೊರಡಿಸಿತ್ತು. ವಿದ್ಯಾರ್ಥಿಗಳ ತರಗತಿ ಇಲ್ಲವೇ ಪರೀಕ್ಷೆ ಇದ್ದಲ್ಲಿ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ. ಈ ಬಗ್ಗೆ ಎಲ್ಲ ಚಾಲಕ, ನಿರ್ವಾಹಕರಿಗೆ ಸೂಚನೆ, ಅಗತ್ಯ ಮಾಹಿತಿ ನೀಡುವಂತೆ ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಸುತ್ತೋಲೆಯಲ್ಲಿ ತಿಳಿಸಿದ್ದರು.

Exit mobile version