Site icon Vistara News

KSRTC Conductor | ಮದ್ಯ ಸೇವಿಸಿದ್ದ ಪ್ರಯಾಣಿಕನ ಒದ್ದು ನೆಲಕ್ಕೆ ಬೀಳಿಸಿದ್ದ ನಿರ್ವಾಹಕ ಅಮಾನತು

putturu ksrtc bus 3

ಬೆಂಗಳೂರು: ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹತ್ತಲು ಮುಂದಾಗಿದ್ದ ಕುಡುಕ ಪ್ರಯಾಣಿಗನೊಬ್ಬನ ಕಪಾಳಕ್ಕೆ ಹೊಡೆದು, ಕಾಲಿನಿಂದ ಒದ್ದು ನೆಲಕ್ಕೆ ಬೀಳಿಸಿದ್ದ ನಿರ್ವಾಹಕನನ್ನು (KSRTC Conductor) ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಬುಧವಾರ ಈಶ್ವರಮಂಗಲದಲ್ಲಿ ಬಸ್‌ ನಿಂತಿದ್ದಾಗ ಮದ್ಯ ಸೇವಿಸಿದ್ದ ಒಬ್ಬ ವ್ಯಕ್ತಿ ತೂರಾಡುತ್ತಾ ಹತ್ತಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ನಿರ್ವಾಹಕ ಬಸ್‌ ಹತ್ತದಿರಲು ತಾಕೀತು ಮಾಡಿದ್ದಾನೆ. ಆದರೆ, ಅದನ್ನು ಲೆಕ್ಕಿಸದೇ ಆ ಪ್ರಯಾಣಿಕ ತೂರಾಡುತ್ತಲೇ ಬಸ್‌ ಹತ್ತಿದ್ದಾನೆ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ನಿರ್ವಾಹಕ ಸುಖರಾಜ ರೈ, ಮದ್ಯ ಸೇವನೆ ಮಾಡಿದ್ದ ಪ್ರಯಾಣಿಕನ ಛತ್ರಿಯನ್ನು ಹೊರಗೆ ಬಿಸಾಡಿದ್ದಾನೆ.

ಆದರೂ ಪ್ರಯಾಣಿಕ ಇಳಿಯದೇ ಹೋಗಿದ್ದರಿಂದ ಆತನನ್ನು ಬಲವಂತವಾಗಿ ಕೆಳಗೆ ಇಳಿಸಲು ನಿರ್ವಾಹಕ ಸುಖರಾಜ ರೈ ಮುಂದಾಗಿದ್ದು, ಕೈ ಹಿಡಿದು ದಬ್ಬಿದ್ದಾನೆ. ಕೊನೆಗೆ ಪ್ರಯಾಣಿಕನ ಕಪಾಳಕ್ಕೆ ಹೊಡೆದಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೇ ಕಾಲಿನಿಂದ ಒದ್ದು ಕೆಳಗೆ ಬೀಳಿಸಿದ್ದಾನೆ. ಬಳಿಕ ಮದ್ಯ ಸೇವಿಸಿದಾತನಿಗೆ ಪುನಃ ಬೈದು ಅಲ್ಲಿಂದ ಬಸ್‌ ಚಲಾಯಿಸಲು ಚಾಲಕನಿಗೆ ತಿಳಿಸಿದ್ದಾನೆ. ಈ ಎಲ್ಲ ಸನ್ನಿವೇಶವನ್ನೂ ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದು, ಆ ವಿಡಿಯೋ ವೈರಲ್‌ ಆಗಿದೆ.

ಇದನ್ನೂ ಓದಿ | Raichur News | ಸಹಾಯಕ ಕೃಷಿ ನಿರ್ದೇಶಕಿಯ ದರ್ಪ ಪ್ರಕರಣ : ಹಾರ್ನ್ ಲೇಡಿ ಅಮಾನತು!

ಅಮಾನತು ಆದೇಶ
ಈ ಬಗ್ಗೆ ಕೆಎಸ್‌ಆರ್‌ಟಿಸಿ ಶಿಸ್ತು ಪ್ರಾಧಿಕಾರದ ವಿಭಾಗೀಯ ನಿಯಂತ್ರಣಾಧಿಕಾರಿ ಅಮಾನತು ಆದೇಶ ಹೊರಡಿಸಿದ್ದಾರೆ. ನಿರ್ವಾಹಕ ಸುಖರಾಜ ರೈ ಬಿಲ್ಲೆ ಎಂಬುವವರು ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ಬಸ್‌ ಹತ್ತಲು ಮುಂದಾಗಿದ್ದ ಒಬ್ಬ ಮದ್ಯಪಾನ ಪ್ರಯಾಣಿಕರನ್ನು ವಾಹನದಿಂದ ಕೆಳಗಡೆ ಇಳಿಸುವಾಗ ಅಮಾನವೀಯವಾಗಿ ವರ್ತಿಸಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ಮದ್ಯ ಸೇವನೆ ಮಾಡಿದ್ದಾತನನ್ನು ಕಾಲಿನಿಂದ ಒದ್ದು ಬೀಳಿಸಲಾಗಿದೆ. ನಿರ್ವಾಹಕರ ಈ ರೀತಿಯ ವರ್ತನೆಗೆ ಕಠಿಣ ಶಿಸ್ತಿನ ಕ್ರಮ ಕೈಗೊಳ್ಳಲಾಗಿದ್ದು, ಸದರಿ ಅವರನ್ನು ಈಗಾಗಲೇ ಕರ್ತವ್ಯದಿಂದ ನಿಲುಗಡೆಗೊಳಿಸಿ, ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸದರಿ‌‌ ಪ್ರಯಾಣಿಕರ ವೈದ್ಯಕೀಯ ವೆಚ್ಚವನ್ನು ನಿಗಮವು ಭರಿಸಲಿದ್ದು, ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ | Video viral | ಸರಕಾರಿ ಬಸ್‌ನಲ್ಲಿ ಡ್ರೈವರ್‌ ಕಾಲಡಿಯೇ ಹೆಡೆ ಎತ್ತಿ ಬುಸುಗುಟ್ಟಿದ ಕಾಳಿಂಗ ಸರ್ಪ! ಮುಂದೇನಾಯ್ತು?

Exit mobile version