Site icon Vistara News

Free Bus service: ಮಹಿಳಾ ಪ್ರಯಾಣಿಕರ ಜತೆ ಸೌಜನ್ಯದಿಂದ ವರ್ತಿಸಲು KSRTC ಸೂಚನೆ

Shakthi scheme bus

#image_title

ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ (Shakthi scheme) ಜಾರಿಯಾದ ನಂತರ‌ ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರು ವಿಪರೀತ ಒತ್ತಡದಿಂದ ಬೇರೆಯವರಿಗೆ ಪ್ರಯಾಣಕ್ಕೆ ಅವಕಾಶ ಸಿಗದೆ ಇರುವ ಪರಿಸ್ಥಿತಿಯೂ ಉಂಟಾಗಿದೆ. ಇದರ ನಡುವೆ, ಉಚಿತವಾಗಿ (Free Bus Service) ಪ್ರಯಾಣಿಸುತ್ತಾರೆ ಎಂಬ ಕಾರಣಕ್ಕೆ ಕೆಲವೊಂದು ಕಡೆ ಬಸ್‌ ಸಿಬ್ಬಂದಿಗಳು (Bus staff) ಮಹಿಳೆಯರ ಜತೆ ಅಸೌಜನ್ಯದಿಂದ ನಡೆದುಕೊಂಡ ಘಟನೆಗಳೂ ನಡೆದಿವೆ. ಇದೆಲ್ಲವನ್ನೂ ಗಮನಿಸಿರುವ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಮಹಿಳಾ ಪ್ರಯಾಣಿಕರ ಜತೆ ಸೌಜನ್ಯದಿಂದ ವರ್ತಿಸುವಂತೆ ಸೂಚನೆ ನೀಡಿದೆ.

ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಶಕ್ತಿ ಯೋಜನೆಯ ಯಶಸ್ವಿ ಅನುಷ್ಠಾನದಲ್ಲಿ ನಮ್ಮ ಚಾಲನಾ ಸಿಬ್ಬಂದಿಗಳ ಪರಿಶ್ರಮವು ಹೆಚ್ಚಿನ ಮಟ್ಟದಲ್ಲಿರುತ್ತದೆ. ಆದರೆ ಕೆಲವೊಂದು ಅಹಿತಕರ ಘಟನೆಗಳು ಈ ಮಹತ್ವದ ಯೋಜನೆಯ ಬಗ್ಗೆ ಭಿನ್ನಾಭಿಪ್ರಾಯಗಳು ಮೂಡುವಂತೆ ಮಾಡುತ್ತಿದೆ. ಹೀಗಾಗಿ ನಾವೆಲ್ಲ ತುಂಬ ಸಾವಧಾನದಿಂದ ವರ್ತಿಸಬೇಕು ಎಂದು ಅದು ಕೇಳಿಕೊಂಡಿದೆ.

ಬಸ್‌ ಸಿಬ್ಬಂದಿಗೆ ನೀಡಿದ ಎಚ್ಚರಿಕೆ, ಸಲಹೆಗಳು ಏನು?

  1. ಚಾಲನಾ ಸಿಬ್ಬಂದಿಗಳು ನಿಗಮದ ಸಾರಿಗೆಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸುವುದು.
  2. ಮಹಿಳಾ ಪ್ರಯಾಣಿಕರಿಂದ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸುವುದು. ತಪ್ಪಿದಲ್ಲಿ, ಈ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು.
  3. ಮಹಿಳೆಯರು ಇರುವ ಬಸ್‌ ನಿಲ್ದಾಣ/ಬಸ್‌ ನಿಲುಗಡೆ ಸ್ಥಳಗಳಲ್ಲಿ ಬಸ್‌ ನಿಲ್ಲಿಸದ ಇರುವುದು/ಮಹಿಳಾ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸುವ ಬಗ್ಗೆ ಅಪಹಾಸ್ಯ ಮಾಡುವುದು ಹಾಗೂ ಇನ್ನಿತರ ರೀತಿಯಲ್ಲಿ ಮಹಿಳೆಯರೊಂದಿಗೆ ಅಗೌರವದಿಂದ ನಡೆದುಕೊಳ್ಳುತ್ತಿರುವ ಪಕರಣಗಳ ಬಗ್ಗೆ ಸಾಮಾಜಿಕ ಜಾಲತಾಣ/ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗುತ್ತಿರುವುದನ್ನು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಗಂಭೀರವಾಗಿ ಪರಿಗಣಿಸಿದ್ದಾರೆ.
  4. ಮಹಿಳೆಯರಿಗ ವಿತರಿಸುವ ಟಿಕೆಟ್‌ ಮೊತ್ತವನ್ನು ಸಾರಿಗೆ ಆದಾಯವೆಂದು ಪರಿಗಣಿಸಲಾಗುತ್ತಿರುವ ಹಿನ್ನೆಲೆಯಲ್ಲಿ ನಿಗಮದ ಚಾಲಕ ಮತ್ತು ನಿರ್ವಾಹಕರುಗಳು ನಿಗದಿತ ಎಲ್ಲಾ ಬಸ್ ನಿಲ್ಯಾಣ/ಬಸ್ ನಿಲುಗಡ ಸ್ಥಳಗಳಲ್ಲಿ ನಿಲುಗಡ ನೀಡಿ, ಪ್ರಯಾಣಿಕರನ್ನು ವಿಶೇಷವಾಗಿ ಮಹಿಳೆಯರು/ವಿದ್ಯಾರ್ಥಿಗಳನ್ನು ಹತ್ತಿಸಿ ಇಳಿಸುವುದು ಹಾಗೂ ಸದರಿ ಪ್ರಯಾಣಿಕರೊಂದಿಗೆ ಸೌಜನ್ಮಯುತವಾಗಿ ವರ್ತಿಸುವುದು.
  5. ಇನ್ನು ಮುಂದೆ, ಮಹಿಳಾ ಪ್ರಯಾಣಿಕರೊಂದಿಗೆ ಯಾವುದೇ ರೀತಿಯಲ್ಲಿ ಅಗೌರವದಿಂದ ನಡೆದುಕೊಳ್ಳುವ ಪ್ರಕರಣಗಳು ವರದಿಯಾದಲ್ಲಿ, ಸಂಬಂಧಪಟ್ಟ ಚಾಲಕ ಮತ್ತು ನಿರ್ವಾಹಕರ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವುದು.
  6. ಚಾಲನಾ ಸಿಬ್ಬಂದಿಗಳು “ಶಕ್ತಿ” ಯೋಜನೆಯ ಪರಿಣಾಮಕಾರಿ ಯಶಸ್ವಿ ಅನುಷ್ಠಾನಕ್ಕೆ ಸಹಕರಿಸುವ ಆಶಯವನ್ನು ನಿಗಮವು ಹೊಂದಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
  7. ಈ ಸುತ್ತೋಲೆಯಲ್ಲಿರುವ ಅಂಶಗಳ ಬಗ್ಗೆ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಅಗತ್ಯ ತಿಳುವಳಿಕೆಯನ್ನು ನೀಡುವುದು ಹಾಗೂ ಕೈಗೊಂಡ ಕ್ರಮದ ಬಗ್ಗೆ ಅನುಸರಣಾ ವರದಿಯನ್ನು ಸಲ್ಲಿಸಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಒಂದು ಕಡೆ ಬಸ್‌ ಸಿಬ್ಬಂದಿ ಮಹಿಳಾ ಪ್ರಯಾಣಿಕರ ಜತೆ ಅಸೌಜನ್ಯದಿಂದ ನಡೆದುಕೊಳ್ಳುತ್ತಿರುವ ದೂರಿನ ನಡುವೆಯೇ ಪ್ರಯಾಣಿಕರು ಕೂಡಾ ಬಸ್‌ ಸಿಬ್ಬಂದಿ ಜತೆ ಅಸೌಜನ್ಯದಿಂದ ವರ್ತಿಸುತ್ತಿರುವ ಘಟನೆಗಳೂ ನಡೆಯುತ್ತಿವೆ. ಅವುಗಳ ಬಗ್ಗೆಯೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಬೇಕಾಗಿದೆ.

ಇದನ್ನೂ ಓದಿ: Free Bus Service: ಸೀಟಿಲ್ಲ ಎಂದು ಬಸ್‌ ನಿಲ್ಲಿಸದೇ ಹೋಗಿದ್ದ ಕಂಡಕ್ಟರ್‌ ಮೇಲೆ ಸಿಟ್ಟಲ್ಲಿ ಹಲ್ಲೆ; ನಾಲ್ವರ ಸೆರೆ

Exit mobile version