ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ “ಬೆಂಗಳೂರು –ಜೋಗ ಜಲಪಾತ” ವಯಾ ಶಿವಮೊಗ್ಗ, ಸಾಗರ ಮಾರ್ಗವಾಗಿ ನಾನ್ ಎಸಿ ಸ್ಲೀಪರ್ ವಾಹನದೊಂದಿಗೆ ವಾರಾಂತ್ಯದ ದಿನಗಳಲ್ಲಿ (ಶುಕ್ರವಾರ ಮತ್ತು ಶನಿವಾರ) ಪ್ಯಾಕೇಜ್ ಟೂರ್ (KSRTC Package Tour) ಅನ್ನು ಆಯೋಜಿಸಿದೆ.
ಜೋಗದ ಜತೆ ಎಲ್ಲೆಲ್ಲಿ ಹೋಗಿ ಬರಬಹುದು?
ಈ ಪ್ಯಾಕೇಜ್ ಟೂರ್ ಅನ್ನು ಆಯ್ಕೆ ಮಾಡಿಕೊಂಡವರಿಗೆ ಜು.19 ರಂದು ಶುಕ್ರವಾರ ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಬಸ್ ಹೊರಡಲಿದೆ. ಅಲ್ಲಿಂದ ಶನಿವಾರ ಬೆಳಗ್ಗೆ 5.30ಕ್ಕೆ ಸಾಗರಕ್ಕೆ ತಲುಪಲಿದೆ. ಅಲ್ಲಿ ವಿಶ್ರಾಂತಿ ಪಡೆದು, ಉಪಾಹಾರ ಮುಗಿಸಿ ವರದಹಳ್ಳಿಗೆ ಮೊದಲು ಭೇಟಿ ನೀಡಲಾಗುತ್ತದೆ. ಅಲ್ಲಿಂದ ವರದಾಮೂಲ, ಇಕ್ಕೇರಿ, ಕೆಳದಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಾಗರಕ್ಕೆ ವಾಪಸ್ ಕರೆ ತರಲಾಗುತ್ತದೆ. ಮಧ್ಯಾಹ್ನದ ಊಟಕ್ಕೆ ಸಾಗರದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.
ಇದನ್ನೂ ಓದಿ: 2nd PUC Exam 3 Result : ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟ
ಊಟದ ಬಳಿಕ ಜೋಗಕ್ಕೆ ತೆರಳಲಾಗುವುದು. ಅಲ್ಲಿ ಜಲಪಾತ ವೀಕ್ಷಣೆ ಬಳಿಕ ಸಂಜೆ 7 ಗಂಟೆಗೆ ಮತ್ತೆ ಸಾಗರಕ್ಕೆ ತಂದು ಬಿಡಲಾಗುವುದು. ಅಲ್ಲಿ ಶಾಪಿಂಗ್ ಮಾಡಲು ಸಹ ಅವಕಾಶವನ್ನು ನೀಡಲಾಗುತ್ತದೆ. ಆನಂತರ ಊಟ ಮುಗಿಸಿ ರಾತ್ರಿ 10ಕ್ಕೆ ಬೆಂಗಳೂರಿಗೆ ಬಸ್ ಹೊರಡಲಿದೆ. ಮರುದಿನ ಬೆಳಗ್ಗೆ 5 ಗಂಟೆಗೆ ಬೆಂಗಳೂರಿಗೆ ತಲುಪಲಿದೆ.
ಪ್ರಯಾಣ ದರ ಎಷ್ಟು?
ಈ ಪ್ಯಾಕೇಜ್ ಟೂರ್‌ಗೆ ವಯಸ್ಕರಿಗೆ 3,000 ರೂ. ಮತ್ತು ಮಕ್ಕಳಿಗೆ (6ರಿಂದ 12 ವರ್ಷ) 2,800 ರೂಪಾಯಿಯನ್ನು ಪ್ರಯಾಣ ದರವನ್ನಾಗಿ ನಿಗದಿ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಿಂದ ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಟೂರ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ “ಬೆಂಗಳೂರು–ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ” ಮಾರ್ಗದಲ್ಲಿ ಕರ್ನಾಟಕ ಸರ್ಕಾರಿ ಸಾರಿಗೆಯನ್ನು ವಾರಾಂತ್ಯದ ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ) ಪ್ಯಾಕೇಜ್ ಟೂರ್ ಅನ್ನು ಆಯೋಜಿಸಿದೆ.
ಸೋಮನಾಥಪುರದಿಂದ ಎಲ್ಲೆಲ್ಲಿ ಹೋಗಿ ಬರಬಹುದು?
ಈ ಪ್ಯಾಕೇಜ್ ಟೂರ್ ಅನ್ನು ಆಯ್ಕೆ ಮಾಡಿಕೊಂಡವರಿಗೆ ಜು.20 ರಂದು ಶನಿವಾರ ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಿಂದ ಬಸ್ ಹೊರಡಲಿದೆ. ಅಲ್ಲಿಂದ ಮದ್ದೂರಿನಲ್ಲಿ ಉಪಾಹಾರ ಮುಗಿಸಿ ಸೋಮನಾಥಪುರಕ್ಕೆ ಮೊದಲು ಭೇಟಿ ನೀಡಲಾಗುತ್ತದೆ. ಸೋಮನಾಥೇಶ್ವರ ಸ್ವಾಮಿಯ ದರ್ಶನ ಪಡೆದು ಬಳಿಕ ತಲಕಾಡುಗೆ ತೆರಳಿ ಅಲ್ಲಿ ಪಂಚಲಿಂಗಗಳ ದರ್ಶನ ಪಡೆದು ಬಳಿಕ ಊಟದ ವಿರಾಮ ಇರಲಿದೆ. ಮಧ್ಯಾಹ್ನ 3 ಗಂಟೆಗೆ ತಲಕಾಡಿನಿಂದ ಮಧ್ಯರಂಗಕ್ಕೆ ಭೇಟಿ ನೀಡಿ ಅಲ್ಲಿ ರಂಗನಾಥಸ್ವಾಮಿಯ ದರ್ಶನ ಪಡೆದು, ಬಳಿಕ ಭರಚುಕ್ಕಿ ಮತ್ತು ಗಗನಚುಕ್ಕಿಗಳ ವೀಕ್ಷಣೆ ಮಾಡಲಾಗುವುದು. ಅನಂತರ ಗಗನಚುಕ್ಕಿಯಿಂದ ಸಂಜೆ 6.15ಕ್ಕೆ ಬೆಂಗಳೂರಿಗೆ ಬಸ್ ಹೊರಡಲಿದ್ದು, 9 ಗಂಟೆಗೆ ಬೆಂಗಳೂರಿಗೆ ತಲುಪಲಿದೆ. ತಲಕಾಡು ಪಂಚಲಿಂಗಗಳ ದರ್ಶನ
ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸ ಏನು? ಇದನ್ನು ಆಯೋಜಿಸುವವರು ಯಾರು?
ಪ್ರಯಾಣ ದರ ಎಷ್ಟು?
ಈ ಪ್ಯಾಕೇಜ್ ಟೂರ್ ಅನ್ನು (ಪ್ರವೇಶ ಶುಲ್ಕ, ಉಪಾಹಾರ, ಮಧ್ಯಾಹ್ನದ/ರಾತ್ರಿ ಊಟವನ್ನು ಹೊರತುಪಡಿಸಿ) ಕಾರ್ಯಾಚರಣೆ ಮಾಡಲಾಗುತ್ತದೆ. ವಯಸ್ಕರಿಗೆ 500 ರೂ. ಮತ್ತು ಮಕ್ಕಳಿಗೆ (6ರಿಂದ 12 ವರ್ಷ) 350 ರೂಪಾಯಿಯನ್ನು ಪ್ರಯಾಣ ದರವನ್ನಾಗಿ ನಿಗದಿ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.